ಕನ್ನಡಪ್ರಭ ವಾರ್ತೆ ಮೈಸೂರು
ಪುರುಷರು ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಿಸಿಕೊಳ್ಳಬೇಕು. ಹಾಗೆಯೇ, ಹೆಚ್ಚುತ್ತಿರುವ ದೌರ್ಜನ್ಯದ ವಿರುದ್ಧ ಯುವ ಸಮೂಹ ಮಾತನಾಡಬೇಕು, ಹೋರಾಟ ನಡೆಸಬೇಕು ಎಂದು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ತಿಳಿಸಿದರು.ನಗರದ ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಹಾಲ್ ನಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿಯು ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ನವಸಮಾಜದ ನಿರ್ಮಾಣದಲ್ಲಿ ಯುವಜನಾಂಗದ ಪಾತ್ರ ಕುರಿತು ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅಧ್ಯಯಶೀಲರಾಗಬೇಕು. ವ್ಯವಸ್ಥೆಯನ್ನು ಬದಲಾಯಿಸುವ ಶಕ್ತಿಯಿದ್ದರೂ ಸುಮ್ಮನೆ ಇರಬಾರದು. ಸಮಾಜದ ಬದಲಾವಣೆಗೆ ಪ್ರಯತ್ನಿಸಬೇಕು. ಮಹಿಳೆಯರು ಮತ್ತು ಮಕ್ಕಳ ನೋವುಗಳು ನಾಗರಿಕ ಸಮಾಜಕ್ಕೆ ಕಾಡಬೇಕು. ಮಾನವೀಯತೆ, ಅಂತಃಕರಣವು ಸಮಾಜದಲ್ಲಿ ನೆಲೆಗೊಳ್ಳಬೇಕು ಎಂದರು.ಶ್ರಮ, ನೋವು, ಕೊರತೆ ಏನು ಎಂಬುದು ಗೊತ್ತಿರಬೇಕು. ಕುಟುಂಬ, ಊರು, ಸಮುದಾಯ, ರಾಜ್ಯ, ರಾಷ್ಟ್ರೀಯ ಇತಿಹಾಸವೇನು, ಇಲ್ಲಿನ ಸಮಸ್ಯೆಗಳೇನು ಎಂಬ ಅರಿವಿನ ಜೊತೆಗೆ ಸಮಸ್ಯೆ ಪರಿಹರಿಸುವ ಪ್ರಯತ್ನನಮ್ಮದಾಗಬೇಕು. ಎಲ್ಲರಿಗೂ ಸ್ಪಂದಿಸುವ ಅವಕಾಶಗಳಿರುತ್ತವೆ ಎಂದು ಹೇಳಿದರು.
ಒಡನಾಡಿ ಸಂಸ್ಥೆಯ ಮತ್ತೊಬ್ಬ ನಿರ್ದೇಶಕ ಎಂ.ಎಲ್. ಪರಶುರಾಮ್, ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ. ಷಣ್ಮುಗಂ, ಸಾಮಾಜಿಕ ಕಾರ್ಯಕರ್ತೆ ಸರಸ್ವತಿ, ಮಹಿಳಾ ದೌರ್ಜನ್ಯ ವಿರೋಧ ಸಮಿತಿ ಸಂಚಾಲಕಿ ಪ್ರೊ.ಎಂ. ಮಂಜುಳಾ ಮೊದಲಾದವರು ಇದ್ದರು.