;Resize=(412,232))
ಅಂಶಿ ಪ್ರಸನ್ನಕುಮಾರ್
ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯು ಬುಧವಾರ (ಅ.21) ನಡೆಯಲಿದ್ದು, ಇದರೊಂದಿಗೆ ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ‘ನಾಡಹಬ್ಬ’ಕ್ಕೆ ತೆರೆ ಬೀಳಲಿದೆ.
ರಾಜ್ಯಪಾಲರಾದ ಡಾ.ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅಂಬಾರಿ ಆನೆ ‘ಪ್ರಶಾಂತ’ಗೆ ಇದೇ ಮೊದಲ ಜಂಬೂಸವಾರಿ ಆಗಿರುವುದು ವಿಶೇಷ. ಅಲ್ಲದೆ, ಇದೇ ಮೊದಲ ಬಾರಿಗೆ ಜಂಬೂಸವಾರಿಯಲ್ಲಿ ಭಾರತೀಯ ಸೇನೆಯ ಮೂರು ತುಕಡಿಗಳು ಭಾಗವಹಿಸುತ್ತಿವೆ. ಜೊತೆಗೆ, ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೆರೆರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದ್ದು, ಕೇರಳ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದಾರೆ.
ದಸರೆ ಆರಂಭವಾದಾಗ ಥಾವರ್‌ಚಂದ್ ಗೆಹಲೋತ್ ರಾಜ್ಯಪಾಲರಾಗಿದ್ದರು. ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಿ, ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ ನೀಡಲಾಗಿತ್ತು. ಆದರೆ, ಗೆಹಲೋತ್ ಅವರ ಅಧಿಕಾರಾವಧಿ ಮುಕ್ತಾಯವಾಗಿ, ಅವರ ಸ್ಥಾನಕ್ಕೆ ಡಾ.ಸುಧಾ ಯಾದವ್ ಅವರು ನೇಮಕವಾಗಿ ಅ.16 ರಂದು ಅಧಿಕಾರ ಸ್ವೀಕರಿಸಿರುವುದರಿಂದ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ನೂತನ ರಾಜ್ಯಪಾಲರಿಗೆ ಆಹ್ವಾನ ನೀಡಿದೆ. ಹೀಗಾಗಿ, ಡಾ.ಸುಧಾ ಯಾದವ್ ಅವರಿಗೆ ಇದೇ ಮೊದಲ ಜಂಬೂಸವಾರಿ.
ಈವರೆಗೆ ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಸಿಎಂ ಆಗಿದ್ದರು. ಮುಖ್ಯಮಂತ್ರಿಯಾಗಿ ಮೊದಲ ಅವಧಿಯಲ್ಲಿ ಐದು, ಎರಡನೇ ಅವಧಿಯಲ್ಲಿ ಮೂರು ಸೇರಿ ಒಟ್ಟಾರೆ ಎಂಟು ಬಾರಿ ಜಂಬೂಸವಾರಿಯನ್ನು ಉದ್ಘಾಟಿಸಿದ್ದರು. ಆ ಮೂಲಕ ಅತಿ ಹೆಚ್ಚು ಬಾರಿ ಜಂಬೂಸವಾರಿ ಉದ್ಘಾಟಿಸಿದ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಿದ್ದರಾಮಯ್ಯ ಅವರ ಪದತ್ಯಾಗದ ನಂತರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದು, ಅವರಿಗೆ ಇದೇ ಮೊದಲ ಜಂಬೂಸವಾರಿ.
ಕಳೆದ 18 ವರ್ಷಗಳಿಂದಲೂ ದಸರೆಯಲ್ಲಿ ಭಾಗವಹಿಸುತ್ತಿರುವ ಪ್ರಶಾಂತ ಆನೆ ಇದೇ ಮೊದಲ ಬಾರಿಗೆ ಅಂಬಾರಿ ಹೊರುವ ಕಾಯಕಕ್ಕೆ ನಿಯೋಜನೆಯಾಗಿದೆ. ಈ ಬಾರಿ ಮುಖ್ಯಮಂತ್ರಿಗಳಾದ ಕೇರಳದ ವಿ.ಡಿ.ಸತೀಶನ್, ತೆಲಂಗಾಣದ ರೇವಂತ್ ರೆಡ್ಡಿ ಭಾಗವಹಿಸುತ್ತಿದ್ದಾರೆ. ತಮಿಳುನಾಡಿನ ಸಿ. ಜೋಸೆಫ್ ವಿಜಯ್ ಹಾಗೂ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರನ್ನು ಕೂಡ ಆಹ್ವಾನಿಸಲಾಗಿತ್ತು. ಆದರೆ, ಅವರು ಬರುತ್ತಿಲ್ಲ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನವಿ ಮೇರೆಗೆ ರಕ್ಷಣಾ ಖಾತೆ ಸಚಿವ ರಾಜನಾಥ್‌ಸಿಂಗ್ ಅವರು, ಸೇನೆಯ ಮೂರು ತುಕಡಿಗಳನ್ನು ಮೆರವಣಿಗೆಗೆ ಕಳುಹಿಸುತ್ತಿದ್ದಾರೆ. ಇದಲ್ಲದೇ ಕನ್ನಡ ಚಲನಚಿತ್ರ ರಂಗದ ನಟಿ-ನಟಿಯರು ಕೂಡ ಮೆರವಣಿಗೆಯಲ್ಲಿ ಸಾಗಲಿದ್ದಾರೆ.
ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗುವ ಮಾರ್ಗವನ್ನು ಸುಂದರಗೊಳಿಸಲಾಗಿದೆ. ಮೆರವಣಿಗೆ ಸುಗಮವಾಗಿ ಸಾಗಲು ಅನುವಾಗುವಂತೆ ರಸ್ತೆಯ ಇಕ್ಕೆಲಗಳಲ್ಲಿ ಕಟಕಟೆಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ರೈಲ್ವೆ ಇಲಾಖೆ ವಿಶೇಷ ಸಂಚಾರದ ವ್ಯವಸ್ಥೆ ಮಾಡಿವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿದೆ.
ಬುಧವಾರ ಮಧ್ಯಾಹ್ನ 1.36 ರಿಂದ 1.56 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಂದಿಧ್ವಜ ಪೂಜೆ ನೆರವೇರಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ನಂತರ, ಸಂಜೆ 4.10 ರಿಂದ 4.35 ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆಯ ಒಳಾವರಣದ ವಿಶೇಷ ವೇದಿಕೆಯಲ್ಲಿ ಗಜರಾಜ ಪ್ರಶಾಂತ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಮತ್ತಿತರರು ಉಪಸ್ಥಿತರಿರುವರು.
ಅರಮನೆ ಆವರಣದಲ್ಲಿ ಅತಿ ಗಣ್ಯರು, ಆಹ್ವಾನಿತರು, ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಹೊಂದಿರುವವರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಪುರಭವನ, ನಗರದ ಬಸ್ ನಿಲ್ದಾಣದ ಎದುರು ಪಾದಚಾರಿ ಮಾರ್ಗದಲ್ಲಿ ನಗರಪಾಲಿಕೆಯಿಂದ ಆಸನದ ವ್ಯವಸ್ಥೆ ಮಾಡಲಾಗಿದೆ.
ನಂದಿಧ್ವಜ, ವೀರಗಾಸೆ, ನಾದಸ್ವರ, ನಿಶಾನೆ ಅಭಿಮನ್ಯು, ನೌಫತ್ ಆನೆ ಗೋಪಿ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಪೊಲೀಸ್ ತುಕಡಿಗಳು, ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳು, ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ. ಕೊನೆಯಲ್ಲಿ ಪ್ರಶಾಂತ ಆನೆ ಇದೇ ಮೊದಲ ಬಾರಿಗೆ ಅಂಬಾರಿ ಹೊತ್ತು ಸಂಗಾತಿಗಳಾದ ಕಾವೇರಿ ಹಾಗೂ ರೂಪಾ ಜೊತೆ ಹೆಜ್ಜೆ ಹಾಕಲಿದ್ದಾನೆ.
ಈ ಮೆರವಣಿಗೆ 5 ಕಿ.ಮೀ.ದೂರ ಸಾಗಿ ಬನ್ನಿಮಂಟಪ ತಲುಪಲಿದೆ. ಅಲ್ಲಿ ಸಂಜೆ 7ಕ್ಕೆ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲರಾದ ಡಾ.ಸುಧಾ ಯಾದವ್ ಗೌರವ ವಂದನೆ ಸ್ವೀಕರಿಸುವರು. ಸಿಎಂ ಸೇರಿದಂತೆ ಸಂಪುಟದ ಹಲವು ಸದಸ್ಯರು ಪಾಲ್ಗೊಳ್ಳುವರು. ಇದರೊಂದಿಗೆ ಈ ಬಾರಿಯ ನಾಡಹಬ್ಬ ಮೈಸೂರು ದಸರೆಗೆ ತೆರೆ ಬೀಳಲಿದೆ.