ನಭದಲ್ಲಿ ಸೂರ್ಯಕಿರಣ್ ಜೆಟ್ ಗಳಿಂದ ಚಮತ್ಕಾರದ ಚಿತ್ತಾರ!

Published : Oct 20, 2026, 12:09 PM IST
Suryakiran

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆದ ಏರ್ ಶೋ (ವೈಮಾನಿಕ ಪ್ರದರ್ಶನ) ನೆರೆದಿದ್ದ ಸಹಸ್ರಾರು ನೋಡುಗರನ್ನು ಬೆರಗುಗೊಳಿಸಿತು. ಸಾಂಸ್ಕೃತಿಕ ನಗರಿ ಮೈಸೂರಿನ ಆಕಾಶದಲ್ಲಿ ಲೋಹದ ಹಕ್ಕಿಗಳು ಮೂಡಿಸಿದ ವಿವಿಧ ಚಮತ್ಕಾರದ ಚಿತ್ತಾರಕ್ಕೆ ರೋಮಾಂಚನಗೊಂಡರು.

 ಬಿ. ಶೇಖರ್‌ ಗೋಪಿನಾಥಂ

 ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆದ ಏರ್ ಶೋ (ವೈಮಾನಿಕ ಪ್ರದರ್ಶನ) ನೆರೆದಿದ್ದ ಸಹಸ್ರಾರು ನೋಡುಗರನ್ನು ಬೆರಗುಗೊಳಿಸಿತು. ಸಾಂಸ್ಕೃತಿಕ ನಗರಿ ಮೈಸೂರಿನ ಆಕಾಶದಲ್ಲಿ ಲೋಹದ ಹಕ್ಕಿಗಳು ಮೂಡಿಸಿದ ವಿವಿಧ ಚಮತ್ಕಾರದ ಚಿತ್ತಾರಕ್ಕೆ ರೋಮಾಂಚನಗೊಂಡರು.

ಮೋಡ ಕವಿದ ವಾತಾವರಣದಿಂದಾಗಿ ಭಾನುವಾರ ನಡೆದ ಏರ್ ಶೋ ಕೇವಲ 10 ನಿಮಿಷದೊಳಗೆ ಮೊಟಕುಗೊಂಡಿತು. ಆದರೆ, ಸೋಮವಾರ ಏರ್ ಶೋ ಪೂರ್ಣ ಪ್ರಮಾಣದಲ್ಲಿ ನಡೆಯಿತು. ಇದರಿಂದ ನಗರದ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ನೆರೆದಿದ್ದ ಸಾವಿರಾರು ಜನ ನಭಕ್ಕೆ ತಮ್ಮ ಕಣ್ಣುಗಳನ್ನು ನೆಟ್ಟು ಜೆಟ್ ಗಳ ಶರವೇಗದ ಪ್ರದರ್ಶನ ಕಂಡು ಸಂಭ್ರಮಿಸಿದರು.

ಭಾರತೀಯ ವಾಯುಪಡೆಯ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ ಪೈಲಟ್‌ ಗಳು ತಮ್ಮ ಅದ್ಭುತ ಕೌಶಲ, ನಿಖರತೆ ಮತ್ತು ಸಾಹಸಮಯ ಹಾರಾಟದ ಮೂಲಕ ಪ್ರೇಕ್ಷಕರು ತುದಿಕಾಲಿನಲ್ಲಿ ನಿಂತು ನೋಡುವಂತೆ ಮಾಡಿದರು. ಕರ್ನಾಟಕದ ಎಚ್‌ಎಎಲ್‌ ನಿರ್ಮಿತ ಹಾಕ್‌ ಎಂಕೆ-132 ಸರಣಿಯ 9 ಜೆಟ್‌ ವಿಮಾನಗಳನ್ನು ಹೊಂದಿರುವ ಸೂರ್ಯಕಿರಣ್‌ ತಂಡವು ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಆಕಾಶಕ್ಕೆ ಲಗ್ಗೆಯಿಟ್ಟು ಮೈಸೂರಿಗೆ ಧಾವಿಸಿದ್ದವು. ಕೆಂಪು, ಬಿಳಿಯ ಬಣ್ಣದ ವಿಮಾನಗಳನ್ನು ಮೊದಲು ಬನ್ನಿಮಂಟಪ ಮೈದಾನದ ಸುತ್ತಾ ಪ್ರದಕ್ಷಿಣೆ ಹಾಕಿದವು.

ಜೆಟ್ ವಿಮಾನಗಳು ಲೂಪ್, ಬ್ಯಾರೆಲ್ ರೋಲ್, ತಲೆಕೆಳಗಿನ ಹಾರಾಟ ಹಾಗೂ ಅತ್ಯಂತ ನಿಖರವಾದ ಸಮೂಹ ಹಾರಾಟ ನಡೆಸುವ ಮೂಲಕ ಪೈಲಟ್‌ ಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಕೇಸರಿ, ಬಿಳಿ, ಹಸಿರು ಹೊಗೆಯ ಮೂಲಕ ತ್ರಿವರ್ಣವನ್ನು ಮೂಡಿಸಿ ನೆರೆದಿದ್ದವರಲ್ಲಿ ದೇಶಭಕ್ತಿಯನ್ನು ಮೂಡಿಸಿದವು. ಈ ದೃಶ್ಯಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸಂತೋಷಪಟ್ಟರು.

ತುಂತುರು ತಂದಿತ್ತು ಆತಂಕ

ಏರ್ ಶೋ ಆರಂಭಕ್ಕೂ ಮುನ್ನ ತುಂತುರು ಹನಿ ಆರಂಭವಾಯಿತು. ಇದರಿಂದ ಬನ್ನಿಮಂಟಪದ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಜನ ಸ್ವಲ್ಪ ಹೊತ್ತು ಆತಂಕಗೊಂಡಿದ್ದರು. ಆದರೆ, ಸೂರ್ಯಕಿರಣ್ ತಂಡದ ಜೆಟ್ ಗಳು ವಿಮಾನಗಳು ಆಕಾಶಕ್ಕೆ ಲಗ್ಗೆ ಇರಿಸುತ್ತಿದ್ದಂತೆ, ಮಳೆ ಆತಂಕ ದೂರವಾಗಿ ಮೋಡ ಚದುರಿ ವೈಮಾನಿಕ ಪ್ರದರ್ಶನ ಆರಂಭವಾಯಿತು. ಗಗನದಲ್ಲಿ ವಿಮಾನಗಳನ್ನು ನೋಡುತ್ತಿದ್ದಂತೆ ನೆರೆದಿದ್ದವರ ಮನದಲ್ಲಿ ಮೂಡಿದ್ದ ಆತಂಕ ದೂರವಾಗಿ, ಸಂಭ್ರಮ ಮನೆ ಮಾಡಿತು.

ಬನ್ನಿಮಂಟದ ಪಂಜಿನ ಕವಾಯತು ಮೈದಾನ ಮಾತ್ರವಲ್ಲದೆ, ಮೈದಾನದಲ್ಲಿ ಸುತ್ತಮುತ್ತಲಿನ ರಸ್ತೆಗಳು, ಎತ್ತರದ ಕಟ್ಟಡಗಳು, ಮನೆಯ ಮಹಡಿ ಮೇಲೆ ನಿಂತು ಜನ ಕಣ್ತುಂಬಿಕೊಂಡರು.

ಇದು ಮಾತ್ರವಲ್ಲದೆ, ಮೈಸೂರು ಅರಮನೆಯಲ್ಲಿ ನೆರೆದಿದ್ದ ಪ್ರವಾಸಿಗರು, ನಗರದ ವಿವಿಧ ಬಡಾವಣೆಗಳಲ್ಲಿದ್ದವರು ಸಹ ಜೆಟ್ ಗಳ ಶಬ್ದಕ್ಕೆ ಆಕಾಶ ನೋಡುತ್ತಿದ್ದರು. ವೈಮಾನಿಕ ಪ್ರದರ್ಶನ ನೋಡಿ ಆನಂದಿಸಿದರು.

ದೇಸಿ ಸೂರ್ಯಕಿರಣ್

ಭಾರತೀಯ ವಾಯುಸೇನೆಯಲ್ಲಿ 1996ರಲ್ಲಿ ಸ್ಥಾಪನೆಯಾದ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡವು ಏಷ್ಯಾದ ಏಕೈಕ 9 ವಿಮಾನಗಳ ಏರೋಬ್ಯಾಟಿಕ್ ತಂಡವಾಗಿದೆ. ಜಗತ್ತಿನ ಕೆಲವೇ ತಂಡಗಳಲ್ಲಿ ಒಂದು. ದೇಶದಾದ್ಯಂತ 850 ಹೆಚ್ಚು ಪ್ರದರ್ಶನಗಳು, ಚೀನಾ, ಶ್ರೀಲಂಕಾ, ಮ್ಯಾನ್ಮಾರ್, ಥಾಯ್ಲೆಂಡ್, ಸಿಂಗಾಪುರ ಮತ್ತು ಯುಎಇಯ ವಾಯುಪ್ರದರ್ಶನಗಳಲ್ಲಿ ಭಾರತೀಯ ವಾಯುಸೇನೆಯ ಪ್ರತಿನಿಧಿಸಿದೆ.

ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದಲ್ಲಿ 9 ಜೆಟ್‌ ಗಳು, 13 ಪೈಲಟ್‌ ಗಳಿದ್ದು, ಈ ತಂಡದ ನಾಯಕ ಗ್ರೂಪ್ ಕ್ಯಾಪ್ಟನ್ ಅಜಯ್ ದಶರಥಿ, ಉಪ ನಾಯಕ ವಿಂಗ್ ಕಮಾಂಡರ್ ಟಿ. ಸಿಂಗ್, ಸ್ಕ್ವಾಡ್ರನ್ ಲೀಡರ್ ಗಳಾದ ವಿಷ್ಣು, ರಾಹುಲ್ ಸಿಂಗ್, ಸಂಜೇಶ್ ಸಿಂಗ್, ಅಮನ್ ಗೋಯಲ್, ದಿವಾಕರ್ ಶರ್ಮಾ, ಗೌರವ್ ಪಟೇಲ್, ಎಡ್ವರ್ಡ್ ಪ್ರಿನ್ಸ್, ಲಲಿತ್ ವರ್ಮಾ, ವಿಕ್ರಮ್, ತುಷಾರ್ ಶರ್ಮಾ ಮತ್ತು ಭಾವೇಶ್ ಶರ್ಮಾ ಅವರು ಮೈಸೂರು ಏರ್ ಶೋನಲ್ಲಿ ಭಾಗವಹಿಸಿದ್ದರು.

PREV
Stay updated with the latest news from Mysore News (ಮೈಸೂರು ಸುದ್ದಿ) — including local governance, city/civic developments, tourism and heritage, culture and festivals, crime reports, environment, education, business and community events from Mysore district and city on Kannada Prabha News.
Read more Articles on

Recommended Stories

ಮೈಸೂರಿನಲ್ಲಿ ನಾಳೆ ಹಲವು ಪ್ರಥಮಗಳ ಜಂಬೂ ಸವಾರಿ
ಮೈಸೂರಲ್ಲಿ ಐತಿಹಾಸಿಕ ಕಂಬಳ ಶುರು -ಈ ವರ್ಷ ಕಂಬಳ ಕ್ರೀಡಾಕೂಟ ಸೇರ್ಪಡೆ