;Resize=(412,232))
ನಂಜನಗೂಡು : ಯುವಕನನ್ನು ಅಪರಹರಿಸಿದ ಮಂಗಳಮುಖಿ ಆತನಿಗೆ ಬಲವಂತವಾಗಿ ಹೆಣ್ಣಿನ ವೇಷ ಹಾಕಿಸಿ ಹಣ ಸಂಗ್ರಹ ಹಾಗೂ ಲೈಂಗಿಕ ಕ್ರಿಯೆಗೆ ಬಳಸಿಕೊಂಡು ಲಕ್ಷಾಂತರ ರು. ಗಳಿಸಿದ್ದಲ್ಲದೆ ಬಲವಂತವಾಗಿ ಲಿಂಗ ಬದಲಾವಣೆಗೆ ಯತ್ನಿಸಿರುವ ಕರಾಳ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಂಜನಗೂಡಿನ ತ್ಯಾಗರಾಜ ಕಾಲೋನಿಯ ಯುವಕ ಅನಿಲ್ ಕುಮಾರ್ (ಅಕ್ಷತಾ) ಸಂತ್ರಸ್ತ ಯುವಕ. ಮಂಗಳೂರು ಮೂಲದ ಅನಿತಾ ಆರೋಪಿತ ಮಂಗಳಮುಖಿ. ಮಂಗಳಮುಖಿಯರ ತಂಡದಿಂದ ಕಿರುಕುಳಕ್ಕೆ ಬೇಸತ್ತ ಯುವಕ ನ್ಯಾಯಕ್ಕಾಗಿ ಮೈಸೂರಿನ ಲಷ್ಕರ್ ಠಾಣೆಗೆ ದೂರು ನೀಡಿದ್ದಾಗ ಕರಾಳ ದಂಧೆ ಬಯಲಾಗಿದೆ.
ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ 4 ತಿಂಗಳ ಹಿಂದೆ ಅನಿಲ್ ಕುಮಾರ್ ಬಸ್‌ಗಾಗಿ ಕಾಯುತ್ತಿದ್ದಾಗ ಮಂಗಳಮುಖಿ ಅನಿತಾ ಮತ್ತವರ ತಂಡ ಅನಿಲ್‌ಗೆ ಮುಸುಕು ಹಾಕಿ ಮತ್ತು ಬರುವಂತೆ ಮಾಡಿ ಅಪಹರಿಸಿ ಮಂಗಳೂರಿಗೆ ಕರೆದೊಯ್ದಿದ್ದಾರೆ. ಆ ಬಳಿಕ ಸೀರೆ, ನೈಟಿ, ಕಿವಿಗೆ ಓಲೆ, ಮೂಗಿಗೆ ಬಟ್ಟು ಹಾಕಿಸಿ ಮಂಗಳಮುಖಿಯನ್ನಾಗಿ ಮಾಡಿದ್ದು, ಬಲವಂತವಾಗಿ ಬೀದಿಗಳಲ್ಲಿ ಬಿಟ್ಟು ಪ್ರತಿದಿನ 2 ರಿಂದ 3 ಸಾವಿರ ರು. ಹಣ ಸಂಗ್ರಹಿಸಿದ್ದಾರೆ. ಈತನಿಂದ ರೀಲ್ಸ್‌ಗಳನ್ನ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಅನಿಲ್‌ನನ್ನು ಮಂಗಳೂರು ಸೇರಿದಂತೆ ಕೇರಳ ಭಾಗಗಳಿಗೆ ಕಳುಹಿಸಿ ಲೈಂಗಿಕ ಕ್ರಿಯೆಗೂ ಬಳಸಿ ಹಣ ವಸೂಲಿ ಮಾಡಿದ್ದಾರೆ.
ಆಧಾರ್ ಕಾರ್ಡ್‌ನಲ್ಲಿ ಅನಿಲ್ ಲಿಂಗವನ್ನು ಮಂಗಳಮುಖಿ ಎಂದು ನಮೂದಿಸಿದ ಈ ಗ್ಯಾಂಗ್ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದಲೂ ಅಧಿಕೃತ ಪ್ರಮಾಣ ಪತ್ರ ಕೊಡಿಸಿದೆ. ಬಳಿಕ ಮೇ ತಿಂಗಳಲ್ಲಿ ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಲಿಂಗ ಪರಿವರ್ತಿಸಲು ಈ ಗ್ಯಾಂಗ್ ಯೋಜನೆ ಹಾಕಿತ್ತು.
ಈ ಮಾಹಿತಿ ಅರಿತ ಅನಿಲ್ ಕರಾಳ ದಂಧೆಯಿಂದ ಹೊರಬರಲು ನಿರ್ಧರಿಸಿ ತನ್ನ ಸಂಪಾದನೆಯ ₹3 ಲಕ್ಷ ಕೊಡುವಂತೆ ಕೇಳಿದಾಗ ಅನಿತಾ ಉಲ್ಟಾ ಹೊಡೆದಿದ್ದು, ತನ್ನ ಮನೆಯಿಂದ ₹5 ಲಕ್ಷ ನಗದು, ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ಸುಳ್ಳು ದೂರು ದಾಖಲಿಸಿ ಜೈಲಿಗೆ ಹಾಕಿಸುತ್ತೇನೆ ಎಂದು ಬೆದರಿಸಿದ್ದಾಳೆ. ಆಗ ಅನಿಲ್ ಮಂಗಳಮುಖಿಯರ ಗ್ಯಾಂಗ್‌ನ ಕಣ್ತಪ್ಪಿಸಿ ದಾಖಲೆಗಳ ಸಮೇತ ಮಂಗಳೂರಿನಿಂದ ನಂಜನಗೂಡಿಗೆ ಬಂದಿದ್ದಾನೆ.
ತಪ್ಪಿಸಿಕೊಂಡು ಬಂದ ಬಳಿಕವೂ ಸುಮ್ಮನಾಗದ ಮಂಗಳಮುಖಿಯರ ತಂಡ ಅನಿಲ್ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಇದರಿಂದ ಬೇಸತ್ತ ಅನಿಲ್ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ‘ಅನಿತಾ ತನಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದು, ದಂಧೆಗೆ ಹಿಂದಿರುಗುವಂತೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದಾಗ ನಂಜನಗೂಡು ಪೊಲೀಸರು ತನ್ನ ಮನವಿಗೆ ಸ್ಪಂದಿಸುತ್ತಿಲ್ಲ’ ಎಂದು ಕೂಡ ಆರೋಪಿಸಿದ್ದಾನೆ.