ರೈಲ್ವೆ ಅಧಿಕಾರಿಗಳ ಜೊತೆ ಮೈಸೂರು ಕೇಂದ್ರ ರೈಲ್ವೆ ನಿಲ್ದಾಣ, ರೈಲ್ವೆ ಮ್ಯೂಸಿಯಂಗೆ ಭೇಟಿ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು- ಕೊಡಗು ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ನೈಋತ್ಯ ರೈಲ್ವೆ ವಿಭಾಗೀಯ ಕಚೇರಿಗೆ ಭೇಟಿ ನೀಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉಭಯ ಜಿಲ್ಲೆಗಳಲ್ಲಿನ ರೈಲ್ವೆ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಯ ಬಾಕಿ ಯೋಜನೆಗಳ ಮಾಹಿತಿಯನ್ನು ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರಲ್ ನೀಡಿದರು.
ಮೈಸೂರು ರೈಲ್ವೆ ಯಾರ್ಡ್ ವಿಸ್ತರಣೆ ಸೇರಿದಂತೆ ಪ್ರಮುಖವಾಗಿ ಆಗಬೇಕಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.
ಈ ಯಾರ್ಡ್ ನಿರ್ಮಾಣದಿಂದ ಮೈಸೂರು ರೈಲ್ವೆ ವಿಭಾಗಕ್ಕೆ ಆಗುವ ಅನುಕೂಲ ಮತ್ತು ಅಗತ್ಯತೆ ಕುರಿತು ಸವಿವರವಾದ ಮಾಹಿತಿಯನ್ನು ಹಂಚಿಕೊಂಡರು.
ಬಳಿಕ ಯದುವೀರ್ಅವರು ರೈಲ್ವೆ ಅಧಿಕಾರಿಗಳ ಜೊತೆ ಮೈಸೂರು ಕೇಂದ್ರ ರೈಲ್ವೆ ನಿಲ್ದಾಣ, ರೈಲ್ವೆ ಮ್ಯೂಸಿಯಂಗೆ ಭೇಟಿ ನೀಡಿದರು. ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಪಿಸಿರುವ ಸೌಲಭ್ಯವನ್ನು ಪರಿಶೀಲಿಸಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಶೌಚಾಲಯ, ಪ್ರಯಾಣಿಕರ ಕಾಯುವ ಕೊಠಡಿ, ಟಿಕೆಟ್ಬುಕ್ಕಿಂಗ್ ಕೇಂದ್ರದಲ್ಲಿನ ಸೇವೆ, ಎಸ್ಕಲೇಟರ್ ಸೌಲಭ್ಯವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ಪ್ರಯಾಣಿಕರ ಅಭಿಪ್ರಾಯವನ್ನು ಆಲಿಸಿದರು.
ಮೈಸೂರು ರೈಲ್ವೆ ನಿಲ್ದಾಣವು ಉತ್ತಮ ಸೌಲಭ್ಯ ಮತ್ತು ಸೇವೆಯನ್ನು ಒದಗಿಸುತ್ತಿದೆ. ಇತ್ತೀಚೆಗೆ ನಿಲ್ದಾಣದಲ್ಲಿ ಸಿಸಿಟಿವಿ ಕಣ್ಗಾವಲು, ನಿಲ್ದಾಣದ ಆಧುನೀಕರಣ ಕಾಮಗಾರಿ ಕೈಗೊತ್ತಿಕೊಂಡು ಪೂರ್ಣಗೊಳಿಸಲಾಗಿದೆ ಎಂದು ಶಿಲ್ಪಿ ಅಗರವಾಲ್ ತಿಳಿಸಿದರು.
ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಸೂಚಿಸಿದ ಸಂಸದ ಯದುವೀರ್ ಅವರು, ಮೈಸೂರು- ಕೊಡಗು ಭಾಗದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಮೈಸೂರು ಪಾರಂಪರಿಕ ನಗರವಾದ್ದರಿಂದ ಅದಕ್ಕೆ ತಕ್ಕಂತೆ ನಾವು ಕೆಲಸ ಮಾಡಬೇಕು. ಮೈಸೂರು ರೈಲ್ವೆ ನಿಲ್ದಾಣವು ಮಾದರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದರು.
ಕೇಂದ್ರದಲ್ಲಿ ರಾಜ್ಯದವರೇ ಆದ ವಿ. ಸೋಮಣ್ಣ ಅವರು, ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಅವರ ಮೂಲಕ ಅಗತ್ಯವಿರುವ ಯೋಜನೆಗಳನ್ನು ಪೂರ್ಣಗೊಳಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ನಾವು ಅವಕಾಶ ಸದುಪಯೋಗಪಡಿಸಿಕೊಳ್ಳೋಣ ಎಂದರು.
ಮೈಸೂರಿಗೆ ದೇಶದ ಪ್ರಮುಖ ನಗರಗಳ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಮುಂದುವರೆಯೋಣ. ಮೈಸೂರು- ಕೊಡಗು ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಸಂಬಂಧ ಚರ್ಚಿಸಲು ದಿಶಾ ಸಭೆಯನ್ನು ಆಯೋಜಿಸಲಾಗುತ್ತಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.