ಜೀನಹಳ್ಳಿ ದೊಡ್ಡಿಯಲ್ಲಿ 52 ಕುರಿಗಳ ನಿಗೂಢ ಸಾವು

KannadaprabhaNewsNetwork |  
Published : May 28, 2025, 12:19 AM IST
ಹೊನ್ನಾಳಿ ಫೋಟೋ 27ಎಚ್.ಎಲ್.ಐ1ಎ. ಃ- ಜೀನಹಳ್ಳಿಯಲ್ಲಿ  ನಿಗೋಢ ರೀತಿಯಲ್ಲಿ ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದ್ದು ಸ್ಥಳಕ್ಕೆ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾಧಿಕಾರಿ  ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಶುವೈದ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.  | Kannada Prabha

ಸಾರಾಂಶ

ನ್ಯಾಮತಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಜೀನಹಳ್ಳಿಯಲ್ಲಿ ಕುರಿ ಮಾಲೀಕ ಮಹೇಶಪ್ಪ ಹಿಂಡಿ ಎಂಬುವರು 80ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದು, ಮಂಗಳವಾರ ಬೆಳಗ್ಗೆ ಕುರಿದೊಡ್ಡಿಯಲ್ಲಿದ್ದ ಸುಮಾರು 52 ಕುರಿಗಳು ಸಾವನ್ನಪ್ಪಿವೆ. ಸುದ್ದಿ ತಿಳಿದ ಪಶುವೈದ್ಯ ಇಲಾಖೆ ವೈದ್ಯರು, ಪ್ರಯೋಗಾಲಯ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- ಪಶುವೈದ್ಯರು, ಪ್ರಯೋಗಾಲಯ ತಜ್ಞರ ತಂಡ ಸ್ಥಳಕ್ಕೆ ಭೇಟಿ, ಪರಿಶೀಲನೆ । ಕುರಿ ಮಾಲೀಕರಿಗೆ ಶಾಸಕ, ಜಿಲ್ಲಾಧಿಕಾರಿ ಸಾಂತ್ವನ- ಪರಿಹಾರ ಭರವಸೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ನ್ಯಾಮತಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಜೀನಹಳ್ಳಿಯಲ್ಲಿ ಕುರಿ ಮಾಲೀಕ ಮಹೇಶಪ್ಪ ಹಿಂಡಿ ಎಂಬುವರು 80ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದು, ಮಂಗಳವಾರ ಬೆಳಗ್ಗೆ ಕುರಿದೊಡ್ಡಿಯಲ್ಲಿದ್ದ ಸುಮಾರು 52 ಕುರಿಗಳು ಸಾವನ್ನಪ್ಪಿವೆ. ಸುದ್ದಿ ತಿಳಿದ ಪಶುವೈದ್ಯ ಇಲಾಖೆ ವೈದ್ಯರು, ಪ್ರಯೋಗಾಲಯ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾವನ್ನಪ್ಪಿದ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ, ಮಾಲೀಕರ ಹೊಲದಲ್ಲಿ ಕುರಿಗಳ ಮೃತದೇಹಗಳನ್ನು ಹೂಳಲಾಯಿತು. ಮರಣೋತ್ತರ ಪರೀಕ್ಷೆಯ ತಜ್ಞರ ವರದಿ ಬಂದ ನಂತರ ಕುರಿಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೊನ್ನಾಳಿ ಪಶುವೈದ್ಯ ಇಲಾಖೆ ಡಾ. ವಿಶ್ವನಟೇಶ್ ತಿಳಿಸಿದರು.

ಮಾಲೀಕ ಜೀನಹಳ್ಳ‍ಿಯ ಮಹೇಶಪ್ಪ ಹಿಂಡಿ ತಮ್ಮ ಕುರಿಗಳನ್ನು ಎಂದಿನಂತೆ ಸೋಮವಾರ ಮೇಯಿಸಿಕೊಂಡು ಬಂದು ಸಂಜೆ ಗ್ರಾಮದ ಕುರಿದೊಡ್ಡಿಗೆ ಕುರಿಗಳನ್ನು ತಂದುಬಿಟ್ಟಿದ್ದರು. ಕುಟುಂಬದವರು ರಾತ್ರಿ ಊಟ ಮಾಡಿ ಮಲಗಿದ್ದರು. ಆದರೆ ಮಂಗಳವಾರ ಬೆಳಗ್ಗೆ ಎಂದು ಕುರಿದೊಡ್ಡಿಯಲ್ಲಿ ನೋಡಿದಾಗ ನಾಲ್ಕೈದು ಕುರಿಮರಿಗಳೂ ಸೇರಿದಂತೆ 52 ಕುರಿಗಳು ದೊಡ್ಡಿಯಲ್ಲಿಯೇ ಸತ್ತುಬಿದ್ದಿದ್ದವು.

ನಾಯಿಗಳು ಕೆಲ ಕುರಿಗಳ ದೇಹಗಳನ್ನು ಕಚ್ಚಿ, ಎಳೆದಾಡಿದ್ದವು. ಮಾಲೀಕರು ನಾಯಿಗಳು ಕುರಿಗಳ ಕಚ್ಚಿ ಸಾಯಿಸಿರಬಹುದು ಎಂದು ಭಾವಿಸಿದ್ದರು. ಆದರೆ, ಪರಿಶೀಲಿಸಿದಾಗ ಕುರಿಗಳು ಸತ್ತ ನಂತರವೇ ನಾಯಿಗಳು ಮೃತದೇಹದ ವಾಸನೆ ಜಾಡುಹಿಡಿದು ಕುರಿದೊಡ್ಡಿ ಬಳಿ ಬಂದು ಕುರಿಗಳ ಶವಗಳನ್ನು ಎಳೆದಾಡಿ ತಿನ್ನಲು ಪ್ರಯತ್ನಿಸಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಇಲಾಖೆಗಳ ಅಧಿಕಾರಿಗಳ ಭೇಟಿ:

ಒಂದೇ ದಿನ, ಒಂದೇ ಸ್ಥಳದಲ್ಲಿ 50ಕ್ಕೂ ಹೆಚ್ಚು ಕುರಿಗಳು ಸಾವು ಕಂಡ ವಿಷಯ ತಿಳಿದು ಪಶುವೈದ್ಯ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಮಹೇಶ್, ಹೊನ್ನಾಳಿ ಪಶುವೈದ್ಯ ಇಲಾಖೆಯ ಡಾ.ವಿಶ್ವನಟೇಶ್, ನ್ಯಾಮತಿ ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚಂದ್ರಶೇಖರ ಹೊಸಮನಿ, ಜೀನಹಳ್ಳಿ ಪಶು ಚಿಕಿತ್ಸಾಲಯದ ವೈದ್ಯ ಸಂತೇಶ್ ಜಲ್ಲರ್, ಮಲ್ಲಿಗೇನಹಳ್ಳಿ ಪಶು ಆಸ್ಪತ್ರೆಯ ಡಾ.ರವೀಂದ್ರ, ದಾವಣಗೆರೆ ಜಿಲ್ಲೆ ಪಶು ಆರೋಗ್ಯ ಇಲಾಖೆಯ ಡಾ.ನಾಗರಾಜ್, ಕುರಿ ಮಂಡಳಿ ಸಹಾಯಕ ನಿರ್ದೇಶಕರಾದ ಡಾ.ಲೀನಾ ಸಜ್ಜನ್ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿದರು. ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಎಲ್ಲ ಮೃತ ಕುರಿಗಳ ದೇಹಗಳನ್ನು ಕುರಿ ಮಾಲೀಕ ಮಹೇಶಪ್ಪ ಹಿಂಡಿ ಅವರ ಹೊಲದಲ್ಲಿ ಹೂಳಲಾಗಿದೆ ಎಂದು ಡಾ. ವಿಶ್ವನಟೇಶ್ ಮಾಹಿತಿ ನೀಡಿದರು.

ಪ್ರಯೋಗಾಲಯದಿಂದ ಕುರಿಗಳ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕುರಿಗಳ ಸಾವಿಗೆ ನಿಖರ ಮಾಹಿತಿ ತಿಳಿಯುವುದು. ಅನುಗ್ರಹ ಯೋಜನೆಯಡಿ ಕುರಿ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.

ಶಾಸಕ, ಡಿಸಿ ಭೇಟಿ- ಸಾಂತ್ವನ:

ಮಂಗಳವಾರ ಸೂರಗೊಂಡನಕೊಪ್ಪದಲ್ಲಿ ಜನಸ್ಪಂದನಾ ಕಾರ್ಯಕ್ರಮ ಕುರಿತು ಸಭೆ ಆಯೋಜಿಸಲಾಗಿತ್ತು. ಆದಕಾರಣ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸೂರಗೊಂಡನಕೊಪ್ಪಕ್ಕೆ ತೆರಳುತ್ತಿದ್ದರು. ಇದೇ ಮಾರ್ಗ ಮಧ್ಯದಲ್ಲಿ ಬರುವ ಜೀನಹಳ್ಳಿಯಲ್ಲಿ ಕುರಿಗಳು ಸತ್ತಿರುವ ವಿಷಯ ತಿಳಿದು, ಮಾಲೀಕ ಮಹೇಶಪ್ಪ ಹಿಂಡಿ ಅವರ ಕುರಿದೊಡ್ಡಿಗೆ ಭೇಟಿ ನೀಡಿದರು. ಸೂಕ್ತ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಕ್ರಮ ವಹಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು. ಕುರಿ ಮಾಲೀಕನಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಸಿಗಬಹುದಾದ ಪರಿಹಾರ ಸೌಲಭ್ಯ ದೊರಕಿಸಿಕೊಡುವ ಭರವಸೆಯನ್ನೂ ನೀಡಿದರು.

- - - -27ಎಚ್.ಎಲ್.ಐ1:

ಜೀನಹಳ್ಳಿಯಲ್ಲಿ ಕುರಿ ಮಾಲೀಕ ಮಹೇಶಪ್ಪ ಹಿಂಡಿ ಅವರ ಕುರಿದೊಡ್ಡಿಯಲ್ಲಿದ್ದ 52 ಕುರಿಗಳು ನಿಗೂಢವಾಗಿ ಮೃತಪಟ್ಟಿದ್ದು, ಪಶುವೈದ್ಯ ಇಲಾಖೆ ವೈದ್ಯರು, ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. -27ಎಚ್.ಎಲ್.ಐ1ಎ.:

ಜೀನಹಳ್ಳಿಯಲ್ಲಿ ನಿಗೂಢವಾಗಿ ಕುರಿಗಳು ಸಾವನ್ನಪ್ಪಿದ ಘಟನೆ ನಡೆದ ಹಿನ್ನೆಲೆ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾಧಿಕಾರಿ ಜಿಪಂ ಸಿಇಒ, ಜಿಲ್ಲಾ ಪಶುವೈದ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!