ನಾಳೆಯಿಂದ ಡಾ. ರಾಜ್, ವಿಷ್ಣು ಸ್ಮರಣೆ

KannadaprabhaNewsNetwork | Published : Dec 25, 2024 12:48 AM

ಸಾರಾಂಶ

ಡಿ.26ರ ಸಂಜೆ 5ಕ್ಕೆ ಡಾ. ರಾಜ್ ಮತ್ತು ಡಾ. ವಿಷ್ಣುವರ್ಧನ್ ಅವರ ಚಲನ ಚಿತ್ರ ಗೀತೆಗಳ ಗೀತೋತ್ಸವ ಆಯೋಜಿಸಲಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಗಾನ- ನಂದನ ಸಂಸ್ಥೆ, ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಘಟಕ ಹಾಗೂ ವಿದ್ಯುಲ್ಲಹರಿ ಸಂಸ್ಥೆ ವತಿಯಿಂದ ಡಿ.26 ರಿಂದ 28 ರವರೆಗೆ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಡಾ. ರಾಜ್ ಹಾಗೂ ವಿಷ್ಣು ಸ್ಮರಣೆ, ಕುವೆಂಪು ಅವರಿಗೆ ನಮನ ಸಲ್ಲಿಸುವ ಹಾಗೂ ಶಂಕರ್ ನೆನಪು, ಚಲನಚಿತ್ರ ಗೀತೆ, ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿದ್ಯುಲ್ಲಹರಿ ಸಂಸ್ಥೆಯ ಡಾ.ಎ.ಡಿ. ಶ್ರೀನಿವಾಸನ್ ತಿಳಿಸಿದರು.ಡಿ.26ರ ಸಂಜೆ 5ಕ್ಕೆ ಡಾ. ರಾಜ್ ಮತ್ತು ಡಾ. ವಿಷ್ಣುವರ್ಧನ್ ಅವರ ಚಲನ ಚಿತ್ರ ಗೀತೆಗಳ ಗೀತೋತ್ಸವ ಆಯೋಜಿಸಲಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಈ ಕಾರ್ಯಕ್ರಮದಲ್ಲೂ ಜೂನಿಯರ್ ವಿಷ್ಣುವರ್ಧನ್ ಅಪೇಕ್ಷಾ ಮಂಜುನಾಥ್ ವಿಶೇಷ ಆಕರ್ಷಣೆ. ಇಂದ್ರಾಣಿ ಅನಂತರಾಮ್, ಎನ್. ಬೆಟ್ಟೇಗೌಡ, ಶ್ರೀಹರಿ, ಎಎಸ್ಜಿ ಶ್ರೀಧರ್, ಅಬ್ದುಲ್ ಖಯ್ಯೂಮ್, ಎಸ್. ಪದ್ಮಶ್ರೀ, ವೈ.ಡಿ. ರಾಜಣ್ಣ, ಎ.ಎಸ್. ಪೂರ್ಣಿಮಾ, ಲತಾ ಮನೋಹರ್, ಸಿ.ಎಸ್. ವಾಣಿ, ಪರಶಿವಮೂರ್ತಿ, ಅಮರೇಶ್ ಹಾಡುವರು.ಗಾನ- ನಂದನ ಸಂಸ್ಥೆಯ ಎನ್. ಬೆಟ್ಟೇಗೌಡ ಮಾತನಾಡಿ, ಡಿ.27ರ ಸಂಜೆ 4.30ಕ್ಕೆ ಶಂಕರ್ ನೆನಪು- ಶಂಕರ್ನಾಗ್ ಚಲಚಿತ್ರ ಗೀತೆಗಳ ಗೀತೋತ್ಸವ ನಡೆಯಲಿದೆ ಎಂದರು. ಇಲ್ಲಿ ರಶ್ಮಿ ಚಿಕ್ಕಮಗಳೂರು, ಎ.ಡಿ. ಶ್ರೀನಿವಾಸನ್ ಕೂಡ ಮೊದಲ ದಿನದ ಗಾಯನ ತಂಡ ಸೇರುವರು.

ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜು ವಿ. ಬೈರಿ ಮಾತನಾಡಿ, ಡಿ.28ರ ಸಂಜೆ 5ಕ್ಕೆ ರಾಷ್ಟ್ರಕವಿ ಕುವೆಂಪು ಹಾಗೂ ಡಾ.ಸಿ. ಅಶ್ವತ್ಥ್ ಅವರ ಜನ್ಮದಿನ ಪ್ರಯುಕ್ತ ಗೀತ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿರಿಯ ಸಾಹಿತಿ ಡಾ.ಸಿಪಿಕೆ ಅವರನ್ನು ಸನ್ಮಾನಿಸಲಾಗುವುದು. ಹಂಸಿನಿ, ನಾಗಲಕ್ಷ್ಮಿ, ಡೇವಿಡ್, ಜಿ. ಶ್ರೀಧರ್ ಕೂಡ ಹಾಡುವರು ಎಂದರು. ಈ 3 ದಿನಗಳ ಮ್ಯಾರಥಾನ್ ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ತಿಳಿಸಿದರು.

ಈ ವೇಳೆ ಸಿರಿ ಬಾಲು, ಎಂ.ಡಿ. ಪಾರ್ಥಸಾರಥಿ ಇದ್ದರು.

Share this article