ಹರಪನಹಳ್ಳಿ: ಮಣ್ಣಿಗೆ ವಂದನೆ, ಮುಗಿಲಿಗೆ ವಂದನೆ, ಸಕಲ ಜೀವಕ್ಕೆ ವಂದನೆ... ಹೀಗೆ ವಿವಿಧ ತತ್ವಪದಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ತತ್ವಪದಗಾರ ನಾದಮಣಿ ನಾಲ್ಕೂರು ಅವರು ಕಣ್ಣುಮುಚ್ಚಿ ವೀಣೆ ನುಡಿಸುತ್ತಾ ತಬಲಾ ನೆರವಿನೊಂದಿಗೆ ಹಾಡುತ್ತಿದ್ದರೆ ನೆರೆದ ಜನತೆ ತಲೆದೂಗುತ್ತಿದ್ದರು.
ಭಾರತದ ಬಹುತ್ವವನ್ನು ನೆನಪಿಸುವ ನಮ್ಮ ಎಲುಬಿನ ಹಂದರದೊಳಗೊಂದು ಮಂದಿರವಿದೆ, ಜಗದಗಲದಿ ಎಲ್ಲಾದರೂ ಸರಿಯೇ ನ್ಯಾಯದ ಪರ ನಿಲ್ಲುವಿಯಾದರೆ, ಕನಕದಾಸರ ನಾನು ನೀನು ಎನ್ನದಿರುವ ಹೀನ ಮಾನವ... ಹೀಗೆ ಒಂದರ ಮೇಲೊಂದು ಹಾಡಿನ ಸ್ವರೂಪದ ಮಾತು, ಮಾತಿನ ಸ್ವರೂಪದ ಹಾಡು ಹಾಡುತ್ತಾ ಹೋದಾಗ ನೆರೆದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಹಾಡುಗಳ ಮಧ್ಯೆ ಮಧ್ಯೆ ಅನಿಸಿಕೆ ಹಂಚಿಕೊಂಡ ನಾದಮಣಿ ನಾಲ್ಕೂರು ಅವರು ಇಂದು ಪ್ರತಿಕ್ಷಣ ಎದುರಾಗುವ ಸತ್ಯಗಳಿಗೆ, ಸಂವಿಧಾನಕ್ಕೆ ವಿಧೇಯರಾಗುವುದು ಕಡಿಮೆಯಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಅವರು, ಸಮಾಜ ತಿದ್ದುವ ಕೆಲಸ ಮಾಗಿದ ಶಿಕ್ಷಕನಿಂದ ಮಾತ್ರ ಸಾಧ್ಯ. ಅಂತಹ ಕೆಲಸವನ್ನು ಶಿಕ್ಷಕ ಎನ್.ಆರ್. ಮರೇಗೌಡರ ಮಾಡಿದ್ದಾರೆ. ಆದ್ದರಿಂದ ಗ್ರಾಮಸ್ಥರು ಅವರನ್ನು ಇಂದು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಎನ್.ಆರ್. ಮರೇಗೌಡರ ಪುತ್ರ ಮಾಲತೇಶ ಮರಿಗೌಡರ ಮಾತನಾಡಿ, ಸಂವಿಧಾನದ ಮಹತ್ವ ತಿಳಿಸುವ ಉದ್ದೇಶದಿಂದ ಶಾಲಾ ಮಕ್ಕಳಿಗೆ ನಮ್ಮ ತಂದೆಯವರ ಸ್ಮರಣಾರ್ಥ ಸಂವಿಧಾನಕ್ಕೆ ಸಂಬಂಧಪಟ್ಟ ಸ್ಪರ್ಧೆಗಳನ್ನು ಆಯೋಜಿಸಿದ್ದೇವು ಎಂದರು.
ಹೀಗೆ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣೆ, ಕತ್ತಲ ಹಾಡು ಹೆಸರಿನಲ್ಲಿ ನಾದಮಣಿ ನಾಲ್ಕೂರು ಅವರ ತತ್ವಪದಗಳ ನಿನಾದ, ಶಾಂತಿಪ್ರೀತಿಯ ಮಾತು, ಶಿಕ್ಷಕ ಎನ್.ಆರ್. ಮರಿಗೌಡರ ಸ್ಮರಣಾರ್ಥ ಆಯೋಜಿಸಿದ್ದ ಸುಂದರ ಕಾರ್ಯಕ್ರಮ ಇಂದಿನ ಜಂಜಾಟದ ಜೀವನದಲ್ಲಿ ಗ್ರಾಮಸ್ಥರಿಗೆ ಮುದ ನೀಡಿತು.