ನಿವೃತ್ತ ನ್ಯಾಯಮೂರ್ತಿ ಟಿ.ಜಿ.ಶಿವಶಂಕರಗೌಡರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jul 02, 2026, 01:45 AM IST
1ಕೆಎಂಎನ್ ಡಿ11  | Kannada Prabha

ಸಾರಾಂಶ

ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ರಾಜ್ಯ ಹಾಗೂ ಬೆಂಗಳೂರು ನಗರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸರ್ಕಾರ ಇವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು. ಬೆಂಗಳೂರನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಅಭಿವೃದ್ಧಿ ಪಡಿಸಿದ ಎಸ್.ಎಂ ಕೃಷ್ಣ ರವರ ಸಾಧನೆಯನ್ನು ಮಾತಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ಶ್ರೀನಾಡಪ್ರಭು ಕೆಂಪೇಗೌಡರ 517 ಜಯಂತ್ಯುತ್ಸವದ ಅಂಗವಾಗಿ ಕರ್ನಾಟಕದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ, ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಜಿ.ಶಿವಶಂಕರಗೌಡ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ನಗರದ ಸಂಜಯ ಚಿತ್ರಮಂದಿರದ ಬಳಿ ಕೆಂಪೇಗೌಡ ಒಕ್ಕಲಿಗರ ಸಂಘ ಮತ್ತು ಚುಂಚಶ್ರೀ ಗೆಳೆಯರ ಬಳಗದಿಂದ ನಡೆದ ಸಮಾರಂಭದಲ್ಲಿ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷ ಅಧ್ಯಕ್ಷ ಡಾ.ನಿಶ್ಚಲಾನಂದನಾಥ ಶ್ರೀಗಳು ಶಿವಶಂಕರೇಗೌಡರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ನಂತರ ಮಾತನಾಡಿದ ಶ್ರೀಗಳು, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ರಾಜ್ಯ ಹಾಗೂ ಬೆಂಗಳೂರು ನಗರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸರ್ಕಾರ ಇವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು. ಬೆಂಗಳೂರನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಅಭಿವೃದ್ಧಿ ಪಡಿಸಿದ ಎಸ್.ಎಂ ಕೃಷ್ಣ ರವರ ಸಾಧನೆಯನ್ನು ಮಾತಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದರು.

ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಗುರಿಯಾಗಿಸಿಕೊಂಡು ಎಸ್.ಎಂ.ಕೃಷ್ಣ ಅವರು ಅಪಾರ ಸಾಧನೆ ಮಾಡಿದ್ದಾರೆ. ಮುಂಬರುವ ದಿನಮಾನಗಳಲ್ಲಿ ಇವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಸಮುದಾಯಕ್ಕೆ ಬಹುದೊಡ್ಡ ಕೊಡುಗೆ ನೀಡಲು ಶಾಸಕರು ಹಾಗೂ ಒಕ್ಕಲಿಗರ ಸಂಘದ ನಿರ್ದೇಶಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕು ಎಂದು ಕೋರಿದರು.

ರಾಜ್ಯ ಒಕ್ಕಲಿಗರ ಸಂಘದ ಖಾತೆಯಲ್ಲಿ ಕೋಟ್ಯಂತರ ರು ನಿಧಿ ಸಂಗ್ರಹವಾಗಿದೆ. ಈ ಹಣವನ್ನು ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಬಳಸುವ ಜೊತೆಗೆ ಪ್ರತಿ ವರ್ಷ ನೀಟ್ ಪರೀಕ್ಷೆಯಲ್ಲಿ ಅಲ್ಪ ಅಂತರದಲ್ಲಿ ವೈದ್ಯಕೀಯ ಸೀಟು ವಂಚಿತರಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದಿಂದ ವಿಶೇಷ ಪರೀಕ್ಷೆ ನಡೆಸಿ ಜಿಲ್ಲೆಯ ನಿರ್ದೇಶಕರ ಸಂಖ್ಯೆಗೆ ಅನುಗುಣವಾಗಿ ಅಷ್ಟೇ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಸೀಟು ನೀಡುವ ವ್ಯವಸ್ಥೆ ಕಲ್ಪಿಸಬೇಕೆಂದು ಸಲಹೆ ನೀಡಿದರು.

ಒಕ್ಕಲಿಗ ಸಮುದಾಯಕ್ಕಾಗಿ ರಾಜ್ಯದ ಪ್ರತಿಯೊಂದು ತಾಲೂಕು ಜಿಲ್ಲೆಯಲ್ಲೂ ವಿದ್ಯಾರ್ಥಿ ನಿಲಯ, ಸಮುದಾಯದ ಭವನ ನಿರ್ಮಿಸಿ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಕ್ಕೆ ಹೆಚ್ಚಿನ ಶಕ್ತಿ ತುಂಬುವಂತಹ ಕೆಲಸವಾಗಬೇಕು. ಎಸ್‌ಎಸ್‌ಎಲ್‌ಸಿ ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಸಂಘದಿಂದ ಸಾರ್ವಜನಿಕವಾಗಿ ಅಭಿನಂದಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಕೆ.ಎಂ.ಉದಯ ಮಾತನಾಡಿ, ಇತರೆ ಸಮುದಾಯಗಳು ತಮ್ಮ ಜಾತಿ ಜಯಂತಿಗಳನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಸಂಘಟಿತರಾಗಿ ಒಗ್ಗಟ್ಟಿನಿಂದ ಆಚರಿಸಲಿದ್ದಾರೆ. ಆದರೆ, ಒಕ್ಕಲಿಗ ಸಮುದಾಯದಲ್ಲಿ ಒಳ ಜಗಳ ಭಿನ್ನಾಭಿಪ್ರಾಯ ವೈ ಮನಸ್ಸಿನಿಂದ ಕೂಡಿರುವ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಜಯಂತಿ ಆಚರಣೆ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.

ಕೆಂಪೇಗೌಡ ಜಯಂತಿಗೆ ಸೀಮಿತ ಸಂಖ್ಯೆ ಜನರು ಮಾತ್ರ ಭಾಗವಹಿಸುತ್ತಿರುವ ಪರಿಣಾಮ ಸಮುದಾಯದ ಐಕ್ಯತೆಗೆ ಧಕ್ಕೆಯಾಗುತ್ತಿದೆ. ಮುಂದಾದರು ಪ್ರತಿಯೊಬ್ಬರು ಸಂಘಟಿತರಾಗಿ ಇಂತಹ ಜಯಂತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಮುದಾಯಕ್ಕೆ ಹೆಚ್ಚಿನ ಶಕ್ತಿ ತುಂಬುವಂತಹ ಕೆಲಸವಾಗಬೇಕೆಂದರು

ಮುಂದಿನ ಜಯಂತಿಯಲ್ಲಿ ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ಕೆಂಪೇಗೌಡ ಪುತ್ಥಳಿಯನ್ನು ನಿರ್ಮಿಸುವ ಜೊತೆಗೆ ವೃತ್ತಕ್ಕೆ ನಾಡಪ್ರಭು ಕೆಂಪೇಗೌಡ ವೃತ್ತ ಎಂದು ನಾಮಕರಣ ಮಾಡಲು ಮುಂದಾಗಿದ್ದು, ಇದಕ್ಕೆ ತಮ್ಮಗಳ ಸಹಕಾರ ಅಗತ್ಯವಾಗಿದೆ ಎಂದು ಕೋರಿದರು.

ಚುನಾವಣೆ ವೇಳೆ ರಾಜಕೀಯ ಮಾಡಬೇಕೆ ಹೊರತು ಸಂಘಟನೆಯ ವಿಚಾರ ಬಂದಾಗ ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಇತರೆ ಸಮುದಾಯಗಳಂತೆ ಒಗ್ಗಟ್ಟು ಪ್ರದರ್ಶಿಸುವ ಮೂಲಕ ನಮ್ಮತನವನ್ನು ಉಳಿಸಿಕೊಳ್ಳಬೇಕು ಎಂದರು.

ನಿವೃತ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಶ್ರೀನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ವಿವಿಧ ಜಾತಿ ಧರ್ಮದ ಜನರನ್ನು ಒಗ್ಗೂಡಿಸಿ ಬೆಂಗಳೂರಿನ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆ ವಿದ್ಯಾರ್ಥಿ ಎಸ್.ಆರ್.ಭುವನ್ ಗೌಡರನ್ನು ಅಭಿನಂದಿಸಲಾಯಿತು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ನಲ್ಲಿಗೆರೆ ಬಾಲು, ರಾಘವೇಂದ್ರ ಮಾತನಾಡಿದರು.

ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ, ಉಪನ್ಯಾಸಕ ಪ್ರೊ.ಎಚ್.ನಾಗರಾಜು ಮಾತನಾಡಿದರು.

ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಟಿ.ರವಿಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ‌ಪಿ.ಸಂಸರ್ಶ, ಎಪಿಎಂಸಿ ಮಾಜಿ ಉಪಾಧ್ಯಕ್ಷೆ ಮಮತಾ ಶಂಕರೇಗೌಡ, ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಆರ್.ಅನಂತೆಗೌಡ, ಅಖಿಲ ಕರ್ನಾಟಕ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಶಿವಲಿಂಗಯ್ಯ, ನಿರ್ದೇಶಕರಾದ ಪಿ.ಶಿವಪ್ಪ, ಸುರೇಶ್, ದೇವಕುಮಾರ್, ಶಿವಲಿಂಗಯ್ಯ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಾಜು ಜಾಗದಲ್ಲಿ ಮೈನಿಂಗ್‌ ಆರಂಭಿಸಲು ಡೆಡ್‌ಲೈನ್‌?
2ನೇ ದಿನ ಎಸ್‌ಐಆರ್‌ ನಮೂನೆ ವಿತರಣೆ ಚುರುಕು