ಕನ್ನಡಪ್ರಭ ವಾರ್ತೆ ಹುಣಸೂರು
ನಾಡಪ್ರಭು ಕೆಂಪೇಗೌಡರ ದೂರದರ್ಶಿತ್ವದ ಜೊತೆ ಮಾನವೀಯತೆಯ ಆಡಳಿತ ಇಂದಿಗೂ ಮಾದರಿಯಾಗಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಅಭಿಪ್ರಾಯಪಟ್ಟರು.ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಶನಿವಾರ ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಂಪೇಗೌಡರು ಬೆಂಗಳೂರು ನಿರ್ಮಾತೃ ಮಾತ್ರ ಆಗಿರಲಿಲ್ಲ. ಬದಲಾಗಿ ಆವರ ಆಡಳಿತ ಇತರ ರಾಜಪರಂಪರೆಗಳಿಗೂ ಮಾದರಿಯಾಗಿತ್ತು. ಸಮಾಜದ ಸಣ್ಣಪುಟ್ಟ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಅವರ ಏಳಿಗೆಗಾಗಿ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಯೋಜನೆಗಳನ್ನು ರೂಪಿಸಿದರು. ಶಿಕ್ಷಣ ಕ್ಷೇತ್ರದಲ್ಲೂ ತಮ್ಮದೇ ಛಾಪನ್ನು ಒತ್ತಿದರು. ಇಂದು ಒಕ್ಕಲಿಗ ಸಮಾಜದಲ್ಲಿ ಎಲ್ಲರೂ ಶಿಕ್ಷಿತರಾಗುತ್ತಿದ್ದೇವೆ. ಜೊತೆಯಲ್ಲಿಯೇ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುವ ಮತ್ತು ಎಲ್ಲರನ್ನು ಒಂದಾಗಿ ನೋಡುವ ಮನೋಭಾವ ರೂಢಿಸಿಕೊಳ್ಳಬೇಕೆಂದರು.ಸಮುದಾಯ ಭವನ ನಿರ್ಮಾಣ:
ಪಟ್ಟಣದ ವ್ಯಾಪ್ತಿಯಲ್ಲಿ ಸುಸಜ್ಜಿತ ಸಮುದಾಯ ಭವನ ಸ್ಥಾಪನೆಗಾಗಿ ಒಂದು ಎಕರೆ ಭೂಮಿಯನ್ನು ಗುರುತಿಸಿ ಭವನ ನಿರ್ಮಾಣಕ್ಕಾಗಿ ಸಂಪೂರ್ಣ ಸಹಕಾರ ನೀಡುವುದು ನನ್ನ ಜವಾಬ್ದಾರಿಯಾಗಿದ್ದು, ಅದನ್ನು ಖಂಡಿತ ನೆರವೇರಿಸುತ್ತೇನೆ. ಈ ಹಿಂದೆ ಆರ್. ಅಶೋಕ್ ಕಂದಾಯ ಮಂತ್ರಿಯಾಗಿದ್ದ ವೇಳೆ ಬಸ್ ಡಿಪೋ ಹಿಂಭಾಗದಲ್ಲಿ ನೀಡಿದ್ದ ಭೂಮಿಯನ್ನು ಸಮಾಜದ ಇತರ ಕಾರ್ಯಗಳಿಗೆ ಉಪಯೋಗಿಸಿಕೊಳ್ಳೋಣ ಎಂದರು.ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಾಡಪ್ರಭುವಿನಿಂದ ಆರಂಭಗೊಂಡು ಕೆಂಗಲ್ ಹನುಮಂತಯ್ಯ, ಎಸ್.ಎಂ. ಕೃಷ್ಣ, ಮಾಜಿ ಪ್ರಧಾನಿ ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಎಲ್ಲರೂ ಸಮಾಜದ ನಾಯಕರಾಗಿ ದೇಶಸೇವೆಯನ್ನು ನಿಸ್ವಾರ್ಥದಿಂದ ಮಾಡಿದ್ದಾರೆ. ಕುಮಾರಸ್ವಾಮಿ ಸಾಲದ ಶೂಲದಲ್ಲಿ ಸಿಲುಕಿದ್ದ ರೈತ ಸಮುದಾಯಕ್ಕೆ ಸಾಲ ಮನ್ನಾ ಮಾಡುವ ಮೂಲಕ ಆಸರೆಯಾದವರು. ಎಲ್ಲ ಸಮುದಾಯಗಳನ್ನು ಒಳಗೊಂಡು ಕರೆದುಕೊಂಡು ಹೋಗುವವರು ನಾವು, ಆದರೆ ನಮ್ಮನ್ನೇ ತುಳಿಯುವ ಮನಸ್ಥಿತಿಯವರು ಇದೀಗ ಹುಟ್ಟಿಕೊಂಡಿದ್ದಾರೆ ಎಂದರು.
ಎಚ್.ಡಿ. ಕೋಟೆ ತಾಲೂಕಿನಲ್ಲಿ ಒಕ್ಕಲಿಗರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸೀತಾರಾಮುರ ವಿರುದ್ಧ ಪಕ್ಷಾತೀತವಾಗಿ ಹೋರಾಟ ರೂಪಿಸೋಣವೆಂದು ಕರೆ ನೀಡಿದರು.ಆದಿಚುಂಚನಗಿರಿ ಶಾಖಾಮಠ ಮೈಸೂರಿನ ಶ್ರೀ ಸೋಮೇಶ್ವರಾನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ತಾಲೂಕು ಅಧ್ಯಕ್ಷ ಕೆ. ಗಣೇಶ್ ಗೌಡ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಎಚ್.ಆರ್. ಸಿದ್ದೇಗೌಡ ನಾಡಪ್ರಭು ಕೆಂಪೇಗೌಡರ ಆಡಳಿತ, ಸಾಧನೆಗಳ ಕುರಿತು ಮಾಹಿತಿ ನೀಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಶ್ರೇಯಸ್ ಅವರನ್ನು ಸನ್ಮಾನಿಸಿತು.
ಒಕ್ಕಲಿಗರ ಸಂಘದ ತಾಲುಕು ಪ್ರಧಾನ ಕಾರ್ಯದರ್ಶಿ ಬಿ.ಎಸ್. ಯೋಗಾನಂದಕುಮಾರ್, ದೇವನಹಳ್ಳಿ ಸೋಮಶೇಖರ್, ಎಚ್. ಜಯರಾಂ, ಬಸವರಾಜು ಕಿರಂಗೂರು, ಸಿ.ಎಸ್.ರುದ್ರೇಗೌಡ, ರಾಮಕೃಷ್ಣೇಗೌಡರು, ಚಿಕ್ಕಹುಣಸೂರು ಗೋವಿಂದೇಗೌಡ, ಸುನೀತಾ ಜಯರಾಮೇಗೌಡ, ರವೀಗೌಡ, ಸ್ವಾಮಿಗೌಡ ಜಗದೀಶ್, ಸಮಾಜದ ಬಂಧುಗಳು ಇದ್ದರು.