ಕನ್ನಡಪ್ರಭ ವಾರ್ತೆ ಮೈಸೂರು
ಪರಿಶಿಷ್ಟ ಜಾತಿಯ ವೈಜ್ಞಾನಿಕ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಎಚ್.ಎಸ್.ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗ ನೀಡಿರುವ ಅವೈಜ್ಞಾನಿಕ ವರದಿ ತಡೆಹಿಡಿದು, ತಕ್ಷಣವೇ ಉಪ ಸಮಿತಿ ನೇಮಿಸಿ ಹೊಲೆಯ (ಬಲಗೈ) ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯವರು ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಶನಿವಾರ ಪ್ರತಿಭಟಿಸಿದರು.ಇತ್ತೀಚೆಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನ್ ದಾಸ್ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ಕುರಿತು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಮುಖ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವೈಜ್ಞಾನಿಕವಾಗಿ ಒಳ ಮೀಸಲಾತಿ ವರ್ಗೀಕರಣ ಮಾಡುವ ಬದಲು ಆರ್ಥಿಕ ಮತ್ತು ರಾಜಕೀಯ ಅಂಶಗಳನ್ನು ಸೇರಿಸಿಕೊಂಡು ಅವೈಜ್ಞಾನಿಕವಾಗಿ ದೋಷಪೂರಿತ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಜಾತಿಗಳನ್ನು ವರ್ಗೀಕರಣ ಮಾಡಲಾಗಿದೆ. ಹೊಲೆಯ ಮತ್ತು ಅದೇ ರೀತಿಯ ಸಾಮಾಜಿಕ ಅಂಶಗಳನ್ನು ಒಳಗೊಂಡ ಕೆಲವು ಜಾತಿಗಳನ್ನು ಪ್ರವರ್ಗ-ಸಿನಲ್ಲಿ ಇರಿಸಿ ಇದೇ ಸಾಮಾಜಿಕ ಅಂಶಗಳನ್ನು ಒಳಗೊಂಡ ಹೊಲೆಯ ಸಂಬಂಧಿತ ಜಾತಿಗಳನ್ನು ಪ್ರವರ್ಗ-ಬಿ ಅಂದರೆ ಮಾದಿಗ ಸಂಬಂಧಿತ ಜಾತಿಗಳ ಪೆಟ್ಟಿಗೆ ಸೇರಿಸಿ ಈ ಮೂಲಕ ಹೊಲೆಯ ಸಂಬಂಧಿತ ಜಾತಿಗಳ ಸಂಖ್ಯೆಯನ್ನು ಕಡಿಮೆ ಬರುವಂತೆ ಮಾಡಿ, ಒಳ ಮೀಸಲಾತಿ ವರ್ಗಿಕರಣದ ಹೆಸರಿನಲ್ಲಿ ಅನ್ಯಾಯವೆಸಗಿದ್ದಾರೆ ಎಂದು ದೂರಿದರು.ಪ್ರವರ್ಗ-ಇ ಎಂಬ ವರ್ಗವನ್ನು ಮಾಡಿ ಆದಿ ಕರ್ನಾಟಕ, ಆದಿ ಅಂಧ್ರ, ಆದಿ ದ್ರಾವಿಡ ಎಂಬ ಹೆಸರಿನ ಜಾತಿ ಸೂಚಕ ಗುಂಪುಗಳನ್ನು ಸೃಷ್ಟಿಸಿ ಈ ಮೂಲಕ ಹೊಲೆಯ ಸಮುದಾಯದಿಂದ ಆದಿ ಕರ್ನಾಟಕದಲ್ಲಿ ಗುರುತಿಸಿಕೊಂಡಿರುವ ಬಲಗೈ ಸಮುದಾಯವನ್ನು ಪ್ರತ್ಯೇಕಿಸಿ ಇಲ್ಲಿಯೂ ಹೊಲಯ ಸಮುದಾಯವನ್ನು ವಂಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೈಜ್ಞಾನಿಕ ವರ್ಗೀಕರಣದ ಹೆಸರಿನಲ್ಲಿ ಹೊಲಯ ಸಂಬಂಧಿತ ಜಾತಿಗಳನ್ನು ಮಾದಿಗ ಸಂಬಂಧಿತ ಜಾತಿಗಳ ಪಟ್ಟಿಗೆ ಸೇರ್ಪಡೆ ಮಾಡಿರುವುದು ಸಾಮಾಜಿಕ ನ್ಯಾಯದ ಮೂಲತತ್ವಕ್ಕೆ ವಿರುದ್ಧವಾಗಿದೆ. ಪ್ರವರ್ಗ-ಎ ಅಡಿಯಲ್ಲಿ 51 ಜಾತಿಗಳನ್ನು ನಮೂದಿಸಿದ್ದು, ಹೊಲೆಯ ಸಂಬಂಧಿತ ಸಮುದಾಯದ ಜನಸಂಖ್ಯೆ ಕಡಿಮೆಯಾಗುವಂತೆ ಮಾಡಿ ಆ ಮೂಲಕ ಒಳ ಮೀಸಲಾತಿ ವೈಜ್ಞಾನಿಕ ವರ್ಗೀಕರಣದ ಹೆಸರಿನಲ್ಲಿ ಹೊಲೆಯ ಸಮುದಾಯವನ್ನು ವಂಚಿಸಿದ್ದಾರೆ ಎಂದು ಕಿಡಿಕಾರಿದರು.ಹೀಗಾಗಿ, ಕೂಡಲೇ ನ್ಯಾ.ನಾಗಮೋಹನ್ ದಾಸ್ ಆಯೋಗವು ನೀಡಿರುವ ಅವೈಜ್ಞಾನಿಕ ವರದಿ ತಡೆಹಿಡಿದು, ತಕ್ಷಣವೇ ಉಪ ಸಮಿತಿಯನ್ನು ನೇಮಿಸುವ ಮೂಲಕ ಸ್ಪಷ್ಟ ಮತ್ತು ನ್ಯಾಯ ಸಮ್ಮತವಾದ ವೈಜ್ಞಾನಿಕ ವರದಿ ಸಿದ್ಧಪಡಿಸಿ, ಸಮಸ್ತ ಪರಿಶಿಷ್ಟ ಜಾತಿಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಶ್ರೀ ಸಿದ್ದರಾಮ ಶಿವಯೋಗಿ ಸ್ವಾಮೀಜಿ, ಶ್ರೀ ಸವಿತನಂದ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಎನ್. ಭಾಸ್ಕರ್, ಮುಖಂಡರಾದ ಹರಿಹರ ಆನಂದಸ್ವಾಮಿ, ಉಮೇಶ್, ಕೃಷ್ಣ, ಸಿದ್ದಸ್ವಾಮಿ, ಎಂ.ವಿ. ಚಂದ್ರಶೇಖರ್, ವಿಷ್ಣುವರ್ಧನ, ಚೇತನ್, ಕಾಂತರಾಜ್, ಸುರೇಶ್, ಸಂತೋಷ್, ಎಂ ನಾಗರಾಜು, ಅಶೋಕ, ಮಂಜು, ಗುರುದೇವ, ಪ್ರವೀಣ್, ಮಂಜು, ನಂಜುಂಡಸ್ವಾಮಿ, ಪುಟ್ಟರಂಗಸ್ವಾಮಿ, ಪುಟ್ಟಮಾದಯ್ಯ, ಪುಟ್ಟಸ್ವಾಮಿ, ಮುನಿಸ್ವಾಮಿ, ಆನಂದಕುಮಾರ್, ಚಿನ್ನರಾಜು, ಶ್ರೀಧರ್, ರವಿಕುಮಾರ್ ಮೊದಲಾದವರು ಇದ್ದರು.ನಾಗಮೋಹನ್ ದಾಸ್ ವರದಿ ಜಾರಿಗೆ ಆಗ್ರಹಿಸಿ ನಾಳೆಯಿಂದ ಅನಿರ್ದಿಷ್ಟಾವಧಿ ಧರಣಿ
ಕನ್ನಡಪ್ರಭ ವಾರ್ತೆ ಮೈಸೂರುಒಳ ಮೀಸಲಾತಿ ಸಂಬಂಧ ನ್ಯಾ.ನಾಗಮೋಹನ್ ದಾಸ್ ಸಲ್ಲಿಸಿರುವ ವರದಿಯನ್ನು ಜಾರಿಗೆ ಆಗ್ರಹಿಸಿ ಆ.11ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿ ಒಕ್ಕೂಟದ ಸಂಚಾಲಕ ಅಂಬಣ್ಣ ಅರೋಳಿಕ್ಕರ್ ತಿಳಿಸಿದರು.
ನ್ಯಾ. ನಾಗಮೋಹನ್ ದಾಸ್ ಸಲ್ಲಿಸಿರುವ ವರದಿಯು ವೈಜ್ಞಾನಿಕವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೆ ಮಣಿಯದೆ ವರದಿ ಅನುಷ್ಠಾನಗೊಳಿಸಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ನಾಗಮೋಹನ್ ದಾಸ್ ಅವರು ವೇತನವನ್ನೂ ಪಡೆಯದೆ, ಸಂವಿಧಾನ ಬದ್ಧವಾಗಿ ಸಮೀಕ್ಷೆ ನಡೆಸಿದ್ದಾರೆ. ಪ್ರತಿ ವರದಿ ಬಂದಾಗಲೂ ಸಣ್ಣ ಪುಟ್ಟ ವಿರೋಧ ಇರುತ್ತದೆ. ಮುಖ್ಯಮಂತ್ರಿಗಳು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಗೌರವ ನೀಡಿ ವರದಿ ಅನುಷ್ಠಾನಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಕೆಲವು ಸಮುದಾಯಗಳು ವರದಿಯ ಬಗ್ಗೆ ಅಪಸ್ವರ ಎತ್ತಿವೆ. ನಾವು ಈ ಹಿಂದೆಯೇ ಮೀಸಲಾತಿಯ ಸಮಾನ ಹಂಚಿಕೆಗೆ ಸಮ್ಮತಿ ಸೂಚಿಸಿದ್ದೆವು, ಅದನ್ನು ಅವರು ಒಪ್ಪಿರಲಿಲ್ಲ. ಈಗ ಎಲ್ಲರೂ ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಬೇಕು. ಒಳಮೀಸಲಾತಿಗಾಗಿ ಸಮುದಾಯವು ಅನೇಕ ವರ್ಷದಿಂದ ಕಾದಿದೆ. ಇನ್ನೂ ವಿಳಂಬ ಧೋರಣೆ ಅನುಸರಿಸಿದರೆ ನಾವು ರಸ್ತೆಗಿಳಿದು ಹೋರಾಡುತ್ತೇವೆ ಎಂದು ಎಚ್ಚರಿಸಿದರು.ಒಕ್ಕೂಟದ ಪದಾಧಿಕಾರಿಗಳಾದ ಡಿ.ಟಿ.ವೆಂಕಟೇಶ್, ಸುಬ್ರಹ್ಮಣ್ಯ, ಚಂದ್ರು ತರಹುಣಿಸೆ ಇದ್ದರು.