ಜೈವಿಕ ತಂತ್ರಜ್ಞಾನದ ಸಾಮರ್ಥ್ಯ ವಿಶಾಲವಾಗಿದೆ: ಡಾ.ಪಿ.ರಂಜಿನಿ

KannadaprabhaNewsNetwork |  
Published : Aug 10, 2025, 01:30 AM IST
8 | Kannada Prabha

ಸಾರಾಂಶ

ಅಣ್ವಿಕ ಜೀವಶಾಸ್ತ್ರ, ತಳಿಶಾಸ್ತ್ರ, ಜೀನೋಮ್ ಅನುಕ್ರಮ, ತಳಿವಿಜ್ಞಾನ ಮಾರ್ಪಡಿಸಿದ (ಜಿಎಂ) ಬೆಳೆಗಳು, ಬಲವರ್ಧಿತ ಆಹಾರಗಳು, ನ್ಯೂಟ್ರಾಸ್ಯುಟಿಕಲ್ಸ್, ಪುನರುತ್ಪಾದಕ ಔಷಧ, ಜೈವಿಕ ವಿಘಟನೀಯ ಪ್ಲಾಸ್ಟಿಕ್‌ ಗಳು ಇತ್ಯಾದಿ ಸೇರಿದಂತೆ ಮಾನವ ಕಲ್ಯಾಣಕ್ಕಾಗಿ ಜೈವಿಕ ತಂತ್ರಜ್ಞಾನದ ಇತ್ತೀಚಿನ ಪ್ರವೃತ್ತಿಗಳು ಮತ್ತು ಅನ್ವಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ.

ಕನ್ನಡಪ್ರಭ ವಾರ್ತೆ ಮೈಸೂರು

ಜೈವಿಕ ತಂತ್ರಜ್ಞಾನದ ಸಾಮರ್ಥ್ಯವು ವಿಶಾಲವಾಗಿದೆ. ನಾವೆಲ್ಲರೂ ಒಟ್ಟಾಗಿ ಭವಿಷ್ಯವನ್ನು ಸೃಷ್ಟಿಸಲು ಅವಕಾಶವಿದೆ ಎಂದು ಭದ್ರಾವತಿಯ ಸರ್ ಎಂವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ.ಪಿ. ರಂಜಿನಿ ತಿಳಿಸಿದರು.

ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಡಬಲ್ ಹೆಲಿಕ್ಸ್ ಕ್ಲಬ್ (ಬಯೋಟೆಕ್ನಾಲಜಿ ಕ್ಲಬ್) ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಜೀನ್ ಚಿಕಿತ್ಸೆ ಮತ್ತು ಮಾನವ ಜೀನೋಮ್ ಯೋಜನೆಯಲ್ಲಿ ಡಿಎನ್ಎ ಆವಿಷ್ಕಾರದ ಪಾತ್ರವನ್ನು ವಿವರಿಸಿದರು.

ಅಣ್ವಿಕ ಜೀವಶಾಸ್ತ್ರ, ತಳಿಶಾಸ್ತ್ರ, ಜೀನೋಮ್ ಅನುಕ್ರಮ, ತಳಿವಿಜ್ಞಾನ ಮಾರ್ಪಡಿಸಿದ (ಜಿಎಂ) ಬೆಳೆಗಳು, ಬಲವರ್ಧಿತ ಆಹಾರಗಳು, ನ್ಯೂಟ್ರಾಸ್ಯುಟಿಕಲ್ಸ್, ಪುನರುತ್ಪಾದಕ ಔಷಧ, ಜೈವಿಕ ವಿಘಟನೀಯ ಪ್ಲಾಸ್ಟಿಕ್‌ ಗಳು ಇತ್ಯಾದಿ ಸೇರಿದಂತೆ ಮಾನವ ಕಲ್ಯಾಣಕ್ಕಾಗಿ ಜೈವಿಕ ತಂತ್ರಜ್ಞಾನದ ಇತ್ತೀಚಿನ ಪ್ರವೃತ್ತಿಗಳು ಮತ್ತು ಅನ್ವಯಗಳ ಕುರಿತು ವಿದ್ಯಾರ್ಥಿಗಳಿಗೆ ಅವರು ಮಾರ್ಗದರ್ಶನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ ಮಾತನಾಡಿ, ಜೈವಿಕ ತಂತ್ರಜ್ಞಾನವು ಔಷಧ, ಕೃಷಿ ಮತ್ತು ಪರಿಸರ ನಿರ್ವಹಣೆಯಂತಹ ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯಮಯ ಅನ್ವಯಿಕೆಗಳನ್ನು ಹೊಂದಿದೆ. ವೈದ್ಯಕೀಯದಲ್ಲಿ ಇದನ್ನು ಹೊಸ ಔಷಧಗಳು, ಲಸಿಕೆಗಳು ಮತ್ತು ರೋಗನಿರ್ಣಯ ಸಾಧನಗಳನ್ನು ಅಭಿವೃದ್ಧಿಪಡಿಸಲು ಬಳಸಲಾಗುತ್ತದೆ ಎಂದರು.

ಕೃಷಿಯಲ್ಲಿ, ಇದು ಕೀಟ- ನಿರೋಧಕ ಮತ್ತು ಹೆಚ್ಚಿನ ಇಳುವರಿ ನೀಡುವ ಬೆಳೆಗಳನ್ನು ರಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಜೈವಿಕ ಸಂಸ್ಕರಣೆ, ತ್ಯಾಜ್ಯ ಸಂಸ್ಕರಣೆ ಮತ್ತು ನಿರ್ವಹಣೆ, ಇಂಧನ ಉತ್ಪಾದನೆ ಮತ್ತು ನಮ್ಮ ಗ್ರಹದ ಸಂರಕ್ಷಣೆಯಲ್ಲಿ ಜೈವಿಕ ತಂತ್ರಜ್ಞಾನವು ಪ್ರಮುಖ ಪಾತ್ರವಹಿಸುತ್ತದೆ ಎಂದರು.

ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅಭಿಜಿತ್ ಎಂ.ಸಿಂಗ್ ಅವರು, ಕ್ಲಬ್‌ಗುರಿ ಮತ್ತು ಉದ್ದೇಶಗಳನ್ನು ವಿವರಿಸಿದರು.

ಧಾತ್ರಿ ಮತ್ತು ಭವ್ಯಾ ಪ್ರಾರ್ಥಿಸಿದರು. ಧನ್ಯಶ್ರೀ ಸ್ವಾಗತಿಸಿದರು. ಎಸ್. ಶ್ರೇಯಾ ವಂದಿಸಿದರು. ವಂದನಾ ವಿವೇಕ್ ನಿರೂಪಿಸಿದರು.

ರಾಜ್ಯ ಶಿಕ್ಷಣ ನೀತಿಯಲ್ಲಿ ಕಡ್ಡಾಯ ಕನ್ನಡ ಕಲಿಕೆ ಇಲ್ಲದಿರುವುದು ಖಂಡನೀಯ: ಸ.ರ.ಸುದರ್ಶನ

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯ ಶಿಕ್ಷಣ ನೀತಿ ಆಯೋಗವು 5ನೇ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆ ಶಿಕ್ಷಣ ಮಾಧ್ಯಮವನ್ನು ಶಿಫಾರಸು ಮಾಡಿರುವುದು ಸ್ವಾಗತಾರ್ಹವಾದರೂ ಈ ನೀತಿಯಲ್ಲಿ ಗೋಕಾಕ್ ಚಳವಳಿಯಿಂದಾಗಿ ರಾಜ್ಯ ಶಿಕ್ಷಣ ನೀತಿಯಲ್ಲಿ ಕಡ್ಡಾಯವಾಗಿದ್ದ ಕನ್ನಡ ಕಲಿಕೆ ಇಲ್ಲದಿರುವುದು ಖಂಡನೀಯ ಎಂದು ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ.ರ. ಸುದರ್ಶನ ಹೇಳಿದ್ದಾರೆ.

ರಾಜ್ಯದಲ್ಲಿ ಕಲಿಯುವ ಅನ್ಯಭಾಷಿಕರು, ಅದರಲ್ಲೂ ಭಾಷಾ ಅಲ್ಪಸಂಖ್ಯಾತರು ಕನ್ನಡ ಕಲಿಯದೆ ಹೋದರೆ ಅವರು ಮುಖ್ಯ ವಾಹಿನಿಯಿಂದ ದೂರ ಉಳಿಯುತ್ತಾರೆ. ಪ್ರಜಾಪ್ರಭುತ್ವದಲ್ಲಿ ಬಹು ಜನರ ಭಾಷೆ ಆಡಳಿತ ಭಾಷೆಯಾಗಬೇಕಾದ ಅನಿವಾರ್ಯ ಸಂದರ್ಭದಲ್ಲಿ ಅದು ತೊಡಕಾಗುತ್ತದೆ.

ಕಡ್ಡಾಯ ಕನ್ನಡ ಕಲಿಕೆಯನ್ನು ಕೈಬಿಟ್ಟರೆ ಅದು ಗೋಕಾಕ್ ಚಳುವಳಿಯನ್ನು ಮರೆತಂತೆ ಆಗುತ್ತದೆ. ಆದ್ದರಿಂದ ಈ ಸರ್ಕಾರ ಈ ಲೋಪವನ್ನು ಸರಿಪಡಿಸಿ ಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಕನ್ನಡ ಕ್ರಿಯಾ ಸಮಿತಿ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.

ಈ ದಿಸೆಯಲ್ಲಿ ಮತ್ತೆ ಎಲ್ಲ ಸಾಹಿತಿಗಳು, ಕನ್ನಡ ಹೋರಾಟಗಾರರು, ಅಭಿಮಾನಿಗಳು ಒಂದೆಡೆ ಸೇರಿ ಕ್ರಮ ಕೈಗೊಳ್ಳಲು ಮುಂದಾಗಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ