ಕನ್ನಡಪ್ರಭ ವಾರ್ತೆ ಮದ್ದೂರು
ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವವನ್ನು ಪಟ್ಟಣದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.ಕೋಟೆ ಬೀದಿಯ ಶ್ರೀನರಸಿಂಹಸ್ವಾಮಿ ದೇಗುಲದ ಆವರಣದಲ್ಲಿ ಕೆಂಪೇಗೌಡರ ಪುಷ್ಪಾಲಂಕೃತ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ತಹಸೀಲ್ದಾರ್ ಡಾ.ಸ್ಮಿತಾರಾಮು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ದೇಶದ ಹೆಮ್ಮೆಯ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ನೂರಾರು ವರ್ಷಗಳ ಹಿಂದೆಯೇ ಕೆರೆಕಟ್ಟೆಗಳ, ರಸ್ತೆಗಳ ನಿರ್ಮಾಣ ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ ಎಂದು ಬಣ್ಣಿಸಿದರು.ನಂತರ ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಆರಂಭಗೊಂಡ ಮೆರವಣಿಗೆಯಲ್ಲಿ ಜನಪ್ರತಿನಿಧಿಗಳು, ಒಕ್ಕಲಿಗರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಮೆರಗು ನೀಡಿದರು.
ಬಳಿಕ ಕೋಟೆ ಬೀದಿ, ಹಳೇ ಎಂ.ಸಿ.ರಸ್ತೆ ಮೂಲಕ ಪ್ರವಾಸಿ ಮಂದಿರದ ಮಾರ್ಗವಾಗಿ ತಾಲೂಕು ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಯಿತು. ಬಳಿಕ ಕ್ರೀಡಾಂಗಣದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಕೆಂಪೇಗೌಡರ ಕುರಿತ ಆಕರ್ಷಕ ನೃತ್ಯ ಪ್ರದರ್ಶನ ಜರುಗಿತು.ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ.ಉದಯ್ ಗೈರುಕೆಂಪೇಗೌಡರ ಜಯಂತ್ಯುತ್ಸವ ಆಚರಣೆ ಸಂಬಂಧ ತಾಲೂಕು ಆಡಳಿತದಿಂದ ನಡೆದ ಪೂರ್ವಭಾವಿ ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಬೇಸರಗೊಂಡ ಶಾಸಕ ಕೆ.ಎಂ.ಉದಯ್ ಶುಕ್ರವಾರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜಯಂತ್ಯುತ್ಸವಕ್ಕೆ ಗೈರಾದರು.
ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಜೂನ್ 12ರಂದು ವಿವಿಧ ಇಲಾಖೆ ಅಧಿಕಾರಿಗಳು, ಒಕ್ಕಲಿಗರ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳ ಪೂರ್ವಭಾವಿ ಸಭೆ ನಿಗದಿ ನಡೆದಿತ್ತು.ಆದರೆ, ತಾಲೂಕು ಆಡಳಿತದಿಂದ ಸಭೆ ಕುರಿತಂತೆ ಶಾಸಕರಿಗೆ ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳು ಕರ್ತವ್ಯ ಲೋಪವೇಸಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಶಾಸಕ ಉದಯ್ ಜಯಂತ್ಯುತ್ಸವಕ್ಕೆ ಗೈರಾಗಿದ್ದರು. ಕಾರ್ಯಕ್ರಮಕ್ಕೆ ಶಾಸಕರ ಬರುವಿಕೆಗಾಗಿ ತಹಸೀಲ್ದಾರ್ ಡಾ.ಸ್ಮಿತಾರಾಮು ಹಾಗೂ ಅಧಿಕಾರಿಗಳು ಸುಮಾರು 1 ಗಂಟೆಗಳ ಕಾಲ ಕಾದು ಕುಳಿತಿದ್ದರು. ಆದರೆ, ಶಾಸಕರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಗದೆ ತಮ್ಮ ಸಿಟ್ಟನ್ನು ಹೊರಹಾಕಿದರು. ವಿವಿಧ ಕ್ಷೇತ್ರದ ಮಹನೀಯರಿಗೆ ಅಭಿನಂದನೆ
ನಾಡಪ್ರಭು ಕೆಂಪೇಗೌಡರ 516 ನೇ ಜಯಂತೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರನ್ನು ಅಭಿನಂದಿಸಲಾಯಿತು.ತಾಲೂಕು ಆಡಳಿತದಿಂದ ನಡೆದ ಸಮಾರಂಭದಲ್ಲಿ ಮದ್ದೂರು ಕೆರೆಗೆ ಹಾರವಾದ ಹೊನ್ನಮ್ಮ ದೇವಿ ವಂಶಸ್ಥರಾದ ಕೆ. ಶಿವಾನಂದ, ಉತ್ತಮ ಗ್ರಾಹಕ ಸ್ನೇಹಿಗಳಾದ ನಾರಾಯಣಸ್ವಾಮಿ, ಇಬ್ರಾಹಿಂ, ಪರಿಸರ ಪ್ರೇಮಿ ಭೀಮನಕೆರೆ ಬಿ.ಸಿ. ಜಯಶಂಕರ, ಸಮಾಜ ಸೇವೆ, ಆಲೂರು ಚನ್ನಪ್ಪ, ಯುವಜನ ಸೇವೆ ಮಾಲಗಾರನಹಳ್ಳಿ ಸುರೇಶ್ ಗೌಡ, ಪ್ರಗತಿಪರ ರೈತ ಬಿ.ಎಂ. ಪ್ರಕಾಶ್, ರಂಗಭೂಮಿ ಎ.ನಾಗರಾಜ ಹಾಗೂ ಕದಲೂರು ಸಿ.ಕೃಷ್ಣೇಗೌಡ ಅವರುಗಳಿಗೆ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಶಾಸಕರ ಗೈರು ಹಾಜರಿಯಲ್ಲಿ ಪುರಸಭಾಧ್ಯಕ್ಷೆ ಕೋಕಿಲ ಅರುಣ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪ್ರೊ.ಬೋರೇಗೌಡ ಕೆಂಪೇಗೌಡರ ಕುರಿತು ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಸ್ಮಿತಾ ರಾಮು, ತಾಪಂ ಇಒ ಎಚ್.ಆರ್.ರಾಮಲಿಂಗಯ್ಯ, ಬಿಇಒ ಎಸ್.ಬಿ.ಧನಂಜಯ, ಪುರಸಭೆ ಮುಖ್ಯ ಅಧಿಕಾರಿ ಮೀನಾಕ್ಷಿ, ಉಪಾಧ್ಯಕ್ಷ ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಸುರೇಶ್ ಕುಮಾರ್, ಸರ್ವ ಮಂಗಳ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಶಿವಪ್ಪ, ಮುಖಂಡರಾದ ಡಾ. ಬಿ.ಕೃಷ್ಣ, ನ.ಲೀ,ಕೃಷ್ಣ , ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.