ಕನ್ನಡಪ್ರಭ ವಾರ್ತೆ ಉಡುಪಿ
ಈ ಪ್ರಶಸ್ತಿಯನ್ನು ಟಿ.ವಿ. ಮೋಹನ್‌ದಾಸ್ ಪೈ ಸ್ಥಾಪಿಸಿದ್ದು, ಪ್ರಶಸ್ತಿಯು ೧ ಲಕ್ಷ ರು. ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಮಾ.23ರಂದು ಗೋವಿಂದ ಪೈ ಸಂಶೋಧನ ಸಂಪುಟದ ದ್ವಿತೀಯ ಭಾಗದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಂಪನಾ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಹಂ.ಪ ನಾಗರಾಜಯ್ಯ ಅವರು, ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರು ತಾಲೂಕಿನ ಹಂಪಸಂದ್ರ ಹಳ್ಳಿಯಲ್ಲಿ ಪದ್ಮಾವತಮ್ಮ- ಪದ್ಮನಾಭಯ್ಯ ದಂಪತಿ ಮಗನಾಗಿ ಜನಿಸಿದರು. ಹಂಪಸಂದ್ರ, ಗೌರೀಬಿದನೂರು, ಮಂಡ್ಯ, ಮಧುಗಿರಿ ಶಾಲೆಗಳಲ್ಲಿ ಆರಂಭಿಕ ಶಿಕ್ಷಣ ಪಡೆದ ಹಂಪನಾ, ತುಮಕೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಶಿಕ್ಷಣ ಪೂರೈಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ., ಸ್ನಾತಕೋತ್ತರ ಪದವಿ ಪಡೆದರು.ವಿದ್ವಾಂಸ ರಂ.ಶ್ರೀ.ಮುಗಳಿ ಮಾರ್ಗದರ್ಶನದಲ್ಲಿ ‘ವಡ್ಡಾರಾಧನೆ : ಸಮಗ್ರ ಅಧ್ಯಯನ’ ಎಂಬ ವಿಷಯವಾಗಿ ಸಂಶೋಧನ ಪ್ರಬಂಧ ಬರೆದು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ.
ಹಂ.ಪ.ನಾ. ಸವ್ಯಸಾಚಿ ಲೇಖಕ. ನೂರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ್ದಾರೆ. ಭಾಷಾವಿಜ್ಞಾನ, ಜನಪದ, ಅನುವಾದ, ಕಾದಂಬರಿ, ಪ್ರಬಂಧ, ಶಿಶುಸಾಹಿತ್ಯ, ಕಾವ್ಯ, ವಿಮರ್ಶೆ, ಜೀವನಚರಿತ್ರೆ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ‘ಚಾರುವಸಂತ’ ಮಹಾಕಾವ್ಯ ದೇಸಿ ಮತ್ತು ಜಾನಪದೀಯ ನೆಲೆಗಳಲ್ಲಿ ರೂಪಿತವಾಗಿದ್ದು ರಾಷ್ಟ್ರೀಯ ಖ್ಯಾತಿ ಗಳಿಸಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣ, ಕಮ್ಮಟ ಕಾರ್ಯಾಗಾರಗಳಲ್ಲಿ ಪ್ರಬಂಧ ಮಂಡಿಸಿರುವ ಇವರು ಕನ್ನಡ ಕಟ್ಟುವ ಕಾಯಕದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡವರು.