ಲೀಡ್….ಜಿಲ್ಲೆಯಾದ್ಯಂತ ಭಕ್ತಿ-ಸಂಭ್ರಮದ ನಾಗಾರಾಧನೆ

KannadaprabhaNewsNetwork |  
Published : Aug 18, 2026, 01:30 AM IST
17ಕೆಪಿಎಂಡಿಎಲ್ 03:  | Kannada Prabha

ಸಾರಾಂಶ

ಹಿಂದೂಗಳ ಪವಿತ್ರ ಮಾಸವಾದ ಶ್ರಾವಣ ಈಗಾಗಲೇ ಆರಂಭ ಕಂಡಿದ್ದು, ಮೊದಲ ಶ್ರಾವಣ ಸೋಮವಾರ ಹಾಗೂ ನಾಗರ ಪಂಚಮಿಯನ್ನು ಜಿಲ್ಲೆಯಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕು, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಮೊದಲ ಶ್ರಾವಣ ಸೋಮವಾರ ಹಾಗೂ ನಾಗರ ಪಂಚಮಿಯನ್ನು ಪ್ರಯುಕ್ತ ನಾಗಪ್ಪ ಕಟ್ಟೆಗಳಿಗೆ ತೆರಳಿ ಹಾಲನ್ನೆರೆದು ವಿಶೇಷ ಪೂಜೆಗಳನ್ನು ನೆರವೇರಿಸಿದರು.

-ವಿವಿಧೆಡೆ ನಾಗನಕಟ್ಟೆಗಳಲ್ಲಿ ವಿಶೇಷ ಪೂಜೆ । ನಾಗರಾಜನಿಗೆ ಹಾಲೆರೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ

---------

ಕನ್ನಡಪ್ರಭ ವಾರ್ತೆ ರಾಯಚೂರು

ಹಿಂದೂಗಳ ಪವಿತ್ರ ಮಾಸವಾದ ಶ್ರಾವಣ ಈಗಾಗಲೇ ಆರಂಭ ಕಂಡಿದ್ದು, ಮೊದಲ ಶ್ರಾವಣ ಸೋಮವಾರ ಹಾಗೂ ನಾಗರ ಪಂಚಮಿಯನ್ನು ಜಿಲ್ಲೆಯಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕು, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಮೊದಲ ಶ್ರಾವಣ ಸೋಮವಾರ ಹಾಗೂ ನಾಗರ ಪಂಚಮಿಯನ್ನು ಪ್ರಯುಕ್ತ ನಾಗಪ್ಪ ಕಟ್ಟೆಗಳಿಗೆ ತೆರಳಿ ಹಾಲನ್ನೆರೆದು ವಿಶೇಷ ಪೂಜೆಗಳನ್ನು ನೆರವೇರಿಸಿದರು.

ಪೂಜಾಸಾಮಗ್ರಿಗಳ ಖರೀದಿ ಜೋರು: ಶ್ರಾವಣ ಮಾಸ ಹಿನ್ನೆಲೆಯಲ್ಲಿ ರಾಯಚೂರು ನಗರದಲ್ಲಿ ಪೂಜಾಸಾಮಗ್ರಿಗಳ ಖರೀದಿ ಜೋರಾಗಿ ನಡೆದಿತ್ತು. ತೆಂಗಿನಕಾಯಿ, ಹೂವು, ಕುಂಕುಮ, ಊದುಕಡ್ಡಿ ಸೇರಿ ಪೂಜಾ ಕಾರ್ಯಕ್ಕೆ ಬಳಸುವ ವಸ್ತುಗಳನ್ನು ಖರೀದಿಸಲು ಬೆಳಗ್ಗೆಯಿಂದಲೆಯೇ ಜನರು ಮುಗಿಬಿದ್ದಿದ್ದ ದೃಶ್ಯಗಳು ಕಂಡುಬಂದವು.

ಶ್ರಾವಣ ಮೊದಲ ಸೋಮವಾರದ ನಿಮಿತ್ತ ವಿವಿಧ ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳಿಗೆ ಹಾಲು, ಮೊಸರು, ಜೇನು, ತುಪ್ಪದಿಂದ ರುದ್ರಾಭಿಷೇಕ ನೆರವೇರಿಸಲಾಯಿತು. ಮಹಿಳೆಯರು ಬಿಲ್ವಪತ್ರೆ, ಅರಿಶಿನ, ಕುಂಕುಮದಿಂದ ಪೂಜಿಸಿ ಪ್ರಾರ್ಥಿಸಿದರು. ನಾಗಪಂಚಮಿ ಹಬ್ಬವು ಸಹ ಜಿಲ್ಲೆಯ ಹಳ್ಳಿಗಳಲ್ಲಿ ವಿಶೇಷವಾಗಿ ಆಚರಿಸಲಾಯಿತು, ರೈತರು ತಮ್ಮ ಹೊಲದ ಬದಿಯಲ್ಲಿರುವ ಹುತ್ತಕ್ಕೆ ಹಾಲು, ಅರಿಶಿನ ಬೆರೆಸಿದ ನೀರು ಎರೆಯುವ ಮೂಲಕ ನಾಗದೇವರನ್ನು ಆರಾಧಿಸಿದರು. ದೇವದುರ್ಗ, ಲಿಂಗಸುಗೂರು, ಸಿಂಧನೂರು, ಮಸ್ಕಿ, ಸಿರವಾರ, ಅರಕೇರಾ ಹಾಗೂ ಮಾನ್ವಿ ಭಾಗದ ಗ್ರಾಮಗಳಲ್ಲಿ ಮಹಿಳೆಯರು ಹುತ್ತಕ್ಕೆ ಹೂವು, ಅಕ್ಷತೆ ಅರ್ಪಿಸಿ, ನಾಗನ ಹಾಡುಗಳನ್ನು ಹಾಡಿದರು.

-----ಬಾಕ್ಸ್ 01-----

ಲಿಂಗಸುಗೂರುಲ್ಲಿ ನಾಗರ ಪಂಚಮಿ

ಲಿಂಗಸುಗೂರು: ತಾಲೂಕಿನಲ್ಲಿ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ನಿಮಿತ್ತ ನಾಗದೇವತೆಗೆ ಹಾಲು ಎರೆದ ಮಹಿಳೆಯರು ಎಲ್ಲೆಡೆ ಸಂಭ್ರಮದ ಸಡಗರದಿಂದ ಪಂಚಮಿ ಹಬ್ಬ ಆಚರಣೆ ಮಾಡಿದರು.

ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆ ಮಾಡಿದ ನಾಗದೇವತೆ ಮೂರ್ತಿಗಳಿಗೆ ಮಹಿಳೆಯರು ಮಡಿಯಿಂದ ತಯಾರಿಸಿದ ಎಳ್ಳು, ಶೇಂಗಾ, ಪುಟಾಣಿ, ಉಂಡಿಗಳ ತಯಾರಿಸಿ, ಗೋದಿ ಹುಗ್ಗಿ ಮಾಡಿ, ಕಡ್ಲೆಕಾಳು ಜೋಳದ ಹರಳು ಹುರಿದು, ಗೊಬ್ಬರಿ ಬಟ್ಟಲಿನಲ್ಲಿ ಬೆಲ್ಲ-ಹಾಲು ಹತ್ತಿಯಿಂದ ನಿರ್ಮಿಸಿದ ಅಂಗನೂಲು ಮಾಲೆಯೊಂದಿಗೆ ತೆರಳಿ ತಾಯಿ-ತಂದೆ ಪಾಲು, ಅಣ್ಣ-ತಮ್ಮನ ಪಾಲು, ಅಕ್ಕ-ತಂಗಿಯ ಪಾಲು ಸರ್ವರು ಪಾಲು ಎಂದು ಹೇಳುತ್ತಾ ನಾಗಪ್ಪ ಹಾಲೆರೆದರು.

ತಾಲೂಕಿನಾಧ್ಯಂತ ಮಹಿಳೆಯರು ಸರ್ಪ ದೋಷ ನಿವಾರಣೆಗಾಗಿ ಹಾಗೂ ಲೋಕ ಕಲ್ಯಾಣಾರ್ಥ ಪ್ರಾರ್ಥಿಸಿದರು. ನಾಗರ ಪಂಚಮಿ ದಿನ ಹಾಲು ಎರೆಯಲು ಬಳಸಿದ ಗೊಬ್ಬರಿ ಬಟ್ಟಲನ್ನು ಗಣೇಶ ಚೌತಿ ದಿನ ಮುರಿದು ತಿನ್ನಲಾಗುತ್ತದೆ. ಹಬ್ಬದ ನಿಮಿತ್ತ ಜೋಕಾಲಿ ಆಟವು ಜೋರಾಗಿ ನಡೆಯುತ್ತದೆ. ಜೋಕಾಲಿ ಆಟದ ಜತೆಗೆ ಅನೇಕ ಜನಪದಗಳನ್ನು ಹಾಗೂ ಸಹೋದರತೆ ಬೆಸೆಯುವ ಸಹೋದರತ್ವದ ಮಹತ್ವ ಸಾರಲಾಗುತ್ತದೆ.

--ಬಾಕ್ಸ್ 02--------

ಹಿರೇವಾಡದ ದೇಗುಲದಲ್ಲಿ ವಿಶೇಷ ಪೂಜೆ

ಮುದಗಲ್: ಪಟ್ಟಣದ ಕಿಲ್ಲಾದಲ್ಲಿರುವ ಹಿರೇವಾಡ ನಾಗರಾಜ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯಕ್ತ ಸೋಮವಾರ ವಿಶೇಷ ಪೂಜೆ ಕಾರ್ಯಕ್ರಮಗಳು ಜರುಗಿದವು. ಹಿರೇವಾಡ ನಾಗರಾಜ ಸ್ವಾಮಿ ದೇಗುದಲ್ಲಿ ನಾಗರ ಪಂಚಮಿ ಪ್ರಯುಕ್ತ 13 ರಂದು ಆಶ್ಲೇಷ ಬಲಿ ಪ್ರಧಾನ ಪೂಜೆ, 14 ಸಂಪ್ರೋಕ್ಷಣಾ, ಮತ್ತು ಧ್ವಜಾರೋಹಣ, ಬ್ರಹ್ಮಕಲಶ ಸ್ಥಾಪನಾ, 15 ರಂದು ಬ್ರಹ್ಮಕಲಶದಿಂದ ಕುಂಭಾಬಿಷೇಕ, ನಾಗರಾಜ ಸ್ವಾಮಿ ಮೂರ್ತಿಗೆ 108 ಕುಂಭಗಳ ಅಭಿಷೇಕ, ಪಂಚಾಮೃತ ಅಭಿಷೇಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು.

ದೇಗುದಲ್ಲಿ ಪ್ರತಿಷ್ಠಾಪಿಸಲಾದ ನಾಗದೇವತೆ ಮೂರ್ತಿಗೆ ಪಂಚಮಿಯ ಪ್ರಯುಕ್ತ ಆಶ್ಲೇಷ ಬಲಿ ಪ್ರಧಾನ ಕೈಂಕರ್ಯ ಹಾಗೂ ಬಗೆಯ ಹೂಗಳ ಅಲಂಕಾರ, ಅಭೀಷೇಕ, ನೈವೇದ್ಯ, ರುದ್ರಾಭಿಷೇಕ, ಮಹಾಮಂಗಳಾರತಿ, ಪೂಜಾ ಪಧ್ಧತಿಗಳು ಮೃತ್ಯುಂಜಯ, ಗಣಪತಿ, ಆಯುಷ್ಯ, ರುದ್ರ, ಸುಬ್ರಮಣ್ಯ, ನಕ್ಷತ್ರ ಹೋಮಗಳು ಜರುಗಿದವು. ಬಳಿಕ ಅನ್ನಸಂತರ್ಪಣೆ ಹಾಗೂ ಮಹಾಪ್ರಸಾದ ವಿನಿಯೋಗ ನಡೆಯಿತು.

ಧರ್ಮದರ್ಶಿ ವೇದ ಬ್ರಹ್ಮಶ್ರೀ ಸೋಮನಾಥ ಜೋಷಿ ಅವರ ಸಾನಿಧ್ಯದಲ್ಲಿ ಅರ್ಚಕ ಬಳಗದ ಪ್ರದೀಪ್ ಜೋಷಿ, ಪ್ರಸನ್ನ ಕುಮಾರ್ ಜೋಷಿ ದಂಪತಿಗಳು, ಬಾಲಸುಬ್ರಮಣ್ಯ ಜೋಷಿ , ಬದ್ರಿನಾರಾಯಣ ಶರ್ಮಾ ಅವರ ನೇತೃತ್ವದೊಂದಿಗೆ ಚೌತಿಯ ಎಲ್ಲ ಧರ್ಮಿಕ ಪೂಜಾ ಕಾರ್ಯಗಳು ನೆರವೇರಿದವು.

----ಫೋಟೊ-----

17ಕೆಪಿಆರ್‌ಸಿಆರ್‌ 03: ರಾಯಚೂರಿನಲ್ಲಿ ಮಹಿಳೆಯರು, ಮಕ್ಕಳು ಕುಟುಂಬ ಸಮೇತರಾಗಿ ಆಗಮಿಸಿ ನಾಗಪ್ಪಕಟ್ಟೆಗೆ ಹಾಲೆರೆದು ನಾಗರ ಪಂಚಮಿ ಆಚರಿಸಿದರು.

17ಕೆಪಿಎಂಡಿಎಲ್ 03: ಮುದಗಲ್ ನ ಅಂದ್ರೋನಿ ಕಿಲ್ಲಾದಲ್ಲಿನ ಹಿರೇವಾಡ ನಾಗರಾಜ ಸ್ವಾಮಿ ದೇಗುಲದಲ್ಲಿ ನಾಗಪಂಚಮಿ ಪ್ರಯುಕ್ತ ವಿಶೇಷ ಪೂಜೆ, ಹೋಮ ಹವನಗಳು, ಅನ್ನಸಂತರ್ಪಣೆ ಸೋಮವಾರ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಿಡಲ್‌ ಪಕ್ಕ...ಕಮಲನಗರದಲ್ಲಿ ಸಂಭ್ರಮದ ನಾಗರ ಪಂಚಮಿ
ದೇವೇಗೌಡರ ಮುಖ ತೋರಿಸದೇ ಗೆದ್ದು ಬನ್ನಿ