ಹೂವಿನಹಡಗಲಿ: ಇಲ್ಲಿನ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಲ್ಕಿ ಒಡೆಯರ್ ನಾಗಭೂಷಣ, ಉಪಾಧ್ಯಕ್ಷರಾಗಿ ಎಲ್.ಚಂದ್ರನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಜಿ.ಸಂತೋಷಕುಮಾರ ಘೋಷಣೆ ಮಾಡಿದರು.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದವು, ಆದರಿಂದ ಅವಿರೋಧ ಆಯ್ಕೆ ಮಾಡಲಾಯಿತು.ಕಳೆದೊಂದು ವಾರದ ಹಿಂದೆ ಟಿಎಪಿಸಿಎಂಎಸ್‌ನ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದರು.
ಮಾದರಿ ಸಂಘದ ಗುರಿ:ಸಹಕಾರ ಸಂಘದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡದೇ, ರೈತ ಹಿತ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ, ಸರ್ಕಾರ ನೀಡುವ ಪ್ರತಿಯೊಂದು ಸೌಲಭ್ಯಗಳನ್ನು ರೈತರಿಗೆ ನೀಡುವ ಮೂಲಕ ಇನ್ನಷ್ಟು ಅಭಿವೃದ್ಧಿ ಪಡಿಸಿ, ಜಿಲ್ಲೆಯಲ್ಲೇ ಮಾದರಿ ಸಹಕಾರ ಸಂಘವನ್ನಾಗಿ ನಿರ್ಮಾಣ ಮಾಡುತ್ತೇವೆಂದು ನೂತನ ಅಧ್ಯಕ್ಷ ಮಲ್ಕಿ ಒಡೆಯರ್ ನಾಗಭೂಣಷ ಹೇಳಿದರು.ರೈತರು ಬೆಳೆದ ಉತ್ಪನ್ನಗಳನ್ನು ಖರೀದಿ ಕೇಂದ್ರ ತೆರೆಯಲು ಸರ್ಕಾರದ ಮಾರ್ಗದರ್ಶನದಡಿಯಲ್ಲಿ ತೆರೆಯಲಾಗುವುದು, ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಮತ್ತು ರಸ ಗೊಬ್ಬರ ಪೂರೈಕೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಮತ್ತು ಗ್ರಾಹಕರಿಗೆ ಯಾವುದೇ ಚ್ಯುತಿ ತರಲಾರದಂತೆ ಎಚ್ಚರಿಕೆ ವಹಿಸಿ ಆಡಳಿತ ನಡೆಸುತ್ತೇವೆ. ಜನರ ಬೇಡಿಕೆಗೆ ತಕ್ಕಂತೆ ಕ್ರಮ ವಹಿಸುತ್ತೇವೆಂದು ಹೇಳಿದರು.
ನೂತನ ಉಪಾಧ್ಯಕ್ಷ ಎಲ್.ಚಂದ್ರನಾಯ್ಕ ಮಾತನಾಡಿ, ಹಿಂದಿನ ಆಡಳಿತ ಮಂಡಳಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆಂದು ಬೊಬ್ಬೆ ಹೊಡೆಯುತ್ತಾರೆ, ಆದರೆ ಅವರು ಏನೂ ಮಾಡಿಲ್ಲ, ಸಾಲ ಪಡೆದು ಕಟ್ಟಡ ನಿರ್ಮಿಸಿದ್ದಾರೆ ಹೊರತು, ಸಕಾಲದಲ್ಲಿ ರೈತರಿಗೆ ರಸಗೊಬ್ಬರ ನೀಡುವಲ್ಲಿ ವಿಫಲರಾಗಿದ್ದರಿಂದ, ರೈತರು ಗೊಬ್ಬರಕ್ಕಾಗಿ ಬೀದಿ ಬೀದಿ ಅಲೆಯುವ ಪರಿಸ್ಥಿತಿ ತಂದಿದ್ದರು ಎಂದು ದೂರಿದರು.ನೂತನ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ಪಡೆದು, ಉತ್ತಮ ಆಡಳಿತ ನೀಡುವ ಮೂಲಕ ರೈತರ ಹಿತ ಕಾಯುವ ಕೆಲಸ ಮಾಡುತ್ತೇವೆಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ ಮಾತನಾಡಿ, ಶಾಸಕ ಕೃಷ್ಣನಾಯ್ಕ ಇವರ ಮಾರ್ಗದರ್ಶನದಲ್ಲಿ ಟಿಎಪಿಸಿಎಂಎಸ್‌ನ ಎಲ್ಲ 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಜಯ ಗಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರತಿಯೊಂದು ಸಹಕಾರಿ ಕ್ಷೇತ್ರದಲ್ಲಿಯೂ ಬಿಜೆಪಿಯೇ ಗೆಲವು ಸಾಧಿಸಲಿದೆ ಎಂದರು.ಈ ಸಂದರ್ಭದಲ್ಲಿ ಪರಶೆಟ್ಟಿ ಕೇಶಪ್ಪ, ಬೀರಬ್ಬಿ ಬಸವರಾಜ, ಎಚ್.ಪೂಜೆಪ್ಪ, ಓಲಿ ಈಶಪ್ಪ, ಗಡಿಗಿ ನಾಗರಾಜ, ಮಲ್ಕಿ ಒಡೆಯರ್ ಮಲ್ಲಿಕಾರ್ಜುನ, ಹಣ್ಣಿ ವೀರೇಶ, ಬಾವಿಮನಿ ಕೊಟ್ರೇಶ, ಸೊಪ್ಪಿನ ರಾಕೇಶ, ಪುನೀತ ದೊಡ್ಮನಿ, ವಿಲ್ಸನ್ ಸ್ವಾಮಿ ಸೇರಿದಂತೆ ಇತರರಿದ್ದರು.