೨೦೨೫ರ ನಾಗಮಂಗಲ ತಾಲೂಕಿನ ಕ್ವಾರಿ ದುರಂತ: ಮೃತನ ಕುಟುಂಬಕ್ಕೆ ₹೩೦ ಲಕ್ಷ ಪರಿಹಾರ

KannadaprabhaNewsNetwork |  
Published : Jun 12, 2026, 01:30 AM IST
೧೧ಕೆಎಂಎನ್‌ಡಿ-೨ನಾಗಮಂಗಲ ತಾಲೂಕು ದೊಡ್ಡ ಜಟಕಾದ ಬಸವೇಶ್ವರ ಸ್ಟೋನ್ ಕ್ರಷರ್ ಮತ್ತು ಗಣಿ ಪ್ರದೇಶದ ಹಳ್ಳಕ್ಕೆ ಚಾಲಕನ ಸಮೇತ ಉರುಳಿಬಿದ್ದಿದ್ದ ಟಿಪ್ಪರ್‌ನ್ನು ಕ್ರೇನ್ ಸಹಾಯದಿಂದ ಮೇಲೆತ್ತುತ್ತಿರುವ ಸಂದರ್ಭದ ಚಿತ್ರ. | Kannada Prabha

ಸಾರಾಂಶ

ಗಣಿಗಾರಿಕೆ ಪ್ರದೇಶದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಗಣಿ ಮಾಲೀಕರಿಗೆ ಸೂಚಿಸುವುದು. ನಿಯಮಾನುಸಾರ ಕ್ರಮ ಕೈಗೊಳ್ಳದವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸುವಂತೆ ಪಾಂಡವಪುರ ಉಪ ವಿಭಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಗಮಂಗಲ ತಾಲೂಕಿನ ವಡೇರಪುರ ಸಮೀಪದ ದೊಡ್ಡ ಜಟಕಾ ರಸ್ತೆಯಲ್ಲಿರುವ ಗಣಿ ಪ್ರದೇಶದಲ್ಲಿ ಟಿಪ್ಪರ್ ಲಾರಿಯೊಂದು ಹಳ್ಳಕ್ಕೆ ಉರುಳಿಬಿದ್ದು ಮೃತಪಟ್ಟಿದ್ದ ಚಾಲಕನ ಕುಟುಂಬಕ್ಕೆ ₹೩೦ ಲಕ್ಷ ಪರಿಹಾರ ದೊರಕಿಸಿಕೊಡುವಲ್ಲಿ ಉಪ ಲೋಕಾಯುಕ್ತ ಬಿ.ವೀರಪ್ಪ ಯಶಸ್ವಿಯಾಗಿದ್ದಾರೆ. ಇದು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಪ್ರಕರಣ ಎಂದು ಹೇಳಲಾಗಿದೆ.

ವಡೇರಪುರದ ಕಾಂತರಾಜು ಅವರಿಗೆ ಸೇರಿದ ಬಸವೇಶ್ವರ ಸ್ಟೋನ್ ಕ್ರಷರ್ ಮತ್ತು ಕಲ್ಲು ಗಣಿಗಾರಿಕೆ ಕ್ವಾರಿಯಲ್ಲಿ ಟಿಪ್ಪರ್ ಲಾರಿ ಚಾಲಕನಾಗಿ ಲಕ್ಷ್ಮಣ ಎಂಬಾತ ಕೆಲಸ ಮಾಡುತ್ತಿದ್ದನು. ೨೭ ಡಿಸೆಂಬರ್ ೨೦೨೫ರಂದು ಟಿಪ್ಪರ್ ಲಾರಿಯಲ್ಲಿ ಬೋಡ್ರಸ್ ಕಲ್ಲು ತುಂಬಿಕೊಂಡು ಕಿರಿದಾದ ಕಲ್ಲು ಕ್ವಾರಿಯ ರಸ್ತೆಯಲ್ಲಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿದ ಟಿಪ್ಪರ್ ಪಕ್ಕದಲ್ಲಿ ನೀರು ತುಂಬಿದ್ದ ಹಳ್ಳಕ್ಕೆ ಉರುಳಿಬಿದ್ದು ಚಾಲಕ ಮೃತಪಟ್ಟಿದ್ದನು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಗಣಿ ಮಾಲೀಕ ಕಾಂತರಾಜು ಹಾಗೂ ಮೃತ ಲಕ್ಷ್ಮಣನ ಪತ್ನಿ ಶಶಿಕಲಾ ಅವರ ನಡುವೆ ಆದ ಒಪ್ಪಂದದಂತೆ ₹೨೫ ಲಕ್ಷ ಹಣವನ್ನು ಆರ್‌ಟಿಜಿಎಸ್ ಮೂಲಕ ಕಾಂತರಾಜು ಅವರು ಶಶಿಕಲಾ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಇದರ ಜೊತೆಗೆ ಕಾರ್ಮಿಕ ಇಲಾಖೆಯಿಂದ ₹೫ ಲಕ್ಷ ಪರಿಹಾರ ಹಣ ಸೇರಿ ₹೩೦ ಲಕ್ಷ ಪರಿಹಾರ ಹಣ ಮೃತನ ಕುಟುಂಬಕ್ಕೆ ಸೇರಿದೆ.

ದುರಂತದ ಬಳಿಕ ಬಸವೇಶ್ವರ ಸ್ಟೋನ್ ಕ್ರಷರ್ ಲೈಸೆನ್ಸ್‌ನ್ನು ಅಮಾನತಿನಲ್ಲಿಡಲಾಗಿದ್ದು, ಗಣಿ ಮಾಲೀಕರು ಪರಿಸರ ಇಲಾಖೆ ಅಧಿಕಾರಿಯಿಂದ ಎನ್‌ಓಸಿ ಪಡೆಯುವವರೆಗೆ ಆ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು. ಅಕ್ರಮವಾಗಿ ಗಣಿಗಾರಿಕೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ಬಾಕಿಯನ್ನು ವಸೂಲಿ ಮಾಡಿ ಮುಂದಿನ ವಿಚಾರಣೆ ದಿನಾಂಕದಂದು ವರದಿ ಸಲ್ಲಿಸುವಂತೆ ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಬಿ.ರಶ್ಮಿ ಅವರಿಗೆ ಸೂಚಿಸಿದ್ದಾರೆ.

ಗಣಿಗಾರಿಕೆ ಪ್ರದೇಶದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಗಣಿ ಮಾಲೀಕರಿಗೆ ಸೂಚಿಸುವುದು. ನಿಯಮಾನುಸಾರ ಕ್ರಮ ಕೈಗೊಳ್ಳದವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸುವಂತೆ ಪಾಂಡವಪುರ ಉಪ ವಿಭಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಸೂಚಿಸಿದ್ದಾರೆ.

ಕ್ರಷರ್ ಮಾಲೀಕರಿಂದ ಬಾಕಿ ಇರುವ ತೆರಿಗೆ ಹಣ ₹೮೭,೬೩೪ ಮತ್ತು ದಂಡ ₹೨೬ ಸಾವಿರ ಹಣವನ್ನು ಪಾವತಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಅಲ್ಲದೆ, ತೆರಿಗೆ ಪಾವತಿಸದ ೧೭ ವಾಹನಗಳನ್ನು ವಶಪಡಿಸಿಕೊಂಡು ಅದರ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಹಾಗೂ ೯ ಪ್ರಕರಣಗಳ ಪೈಕಿ ೩ ವಾಹನಗಳ ಕ್ರಷರ್ ಮಾಲೀಕರಿಂದ ₹೭೧,೮೨೬ ತೆರಿಗೆ ಹಣ ಮತ್ತು ₹೩೫೦೦೦ ತೆರಿಗೆ ವಸೂಲಿಗೆ ಕ್ರಮ ವಹಿಸಲಾಗಿದೆ ಎಂದು ಎಆರ್‌ಟಿಓ ಹೊನ್ನೇಗೌಡರು ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.

ಬಸವೇಶ್ವರ ಸ್ಟೋನ್ ಕ್ಷರ್ ಮಾಲೀಕ ಕಾಂತರಾಜು ಅವರಿಂದ ೨೦೨೦- ೨೩ರಿಂದ ಬಾಕಿ ಇದ್ದ ಜಿಎಸ್‌ಟಿ ಹಣ ₹೨,೭೬,೭೦೪ ರು. ಹಣವನ್ನು ವಸೂಲಿ ಮಾಡಿರುವುದಾಗಿ ತಿಳಿಸಿದ್ದಾರೆ. ೨೦೨೪ರಿಂದ ಈ ಸಾಲಿನವರೆಗೆ ಜಿಎಸ್‌ಟಿ ಹಣ ಪಾವತಿಗೆ ಡಿಸೆಂಬರ್ ಅಂತ್ಯದವರೆಗೆ ಕಾಲಾವಕಾಶ ನೀಡಿರುವುದಾಗಿ ಜಿಎಸ್‌ಟಿ ಅಧಿಕಾರಿ ಜಿ.ಎಂ.ವೀರಭದ್ರ ಉಪ ಲೋಕಾಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೌಡಿಶೀಟರ್ ಮಂಜೇಶ್ ಹತ್ಯೆ ಕೇಸ್‌ ಹತ್ತು ಆರೋಪಿಗಳ ಬಂಧನ
ಮತದಾರರ ಪಟ್ಟಿಗೆ ಅರ್ಹ ಮತದಾರರ ಸೇರ್ಪಡೆ ಮುಖ್ಯ ಉದ್ದೇಶ