ಮೈಷುಗರ್‌ನಲ್ಲಿ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆ ಸಹಿತ ಉತ್ತರಿಸಲು ಮೈಷುಗರ್ ಅಧ್ಯಕ್ಷರಿಗೆ ಒತ್ತಾಯ

KannadaprabhaNewsNetwork |  
Published : Jun 12, 2026, 01:30 AM IST
೧೧ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ಕಾರ್ಖಾನೆಯಲ್ಲಿ ಕಾಯಂ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡದೆ ಇರುವುದಕ್ಕೆ ಕಾರಣವೇನು ಹಾಗೂ ವಾರಕ್ಕೊಮ್ಮೆ ಕಚೇರಿಗೆ ಬರುವ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕರಿಗೆ ಈಗಾಗಲೇ ಕೋಟ್ಯಂತರ ರು. ನಷ್ಟದಲ್ಲಿರುವ ಕಾರ್ಖಾನೆಯಿಂದ ಲಕ್ಷಾಂತರ ರು. ಮೌಲ್ಯದ ಇನ್ನೋವಾ ಕಾರನ್ನು ನೀಡಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್‌ನಲ್ಲಿ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷರು ಪ್ರಶ್ನೆಗಳನ್ನು ಕಳುಹಿಸುವಂತೆ ಕೋರಿದ್ದು, ನಮ್ಮ ಪ್ರತಿ ಪ್ರಶ್ನೆಗಳಿಗೆ ದಾಖಲೆ ಸಹಿತ ಉತ್ತರ ನೀಡುವಂತೆ ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ಒತ್ತಾಯಿಸಿದರು.

ಆರೋಪಗಳಿಗೆ ಸಂಬಂಧಿಸಿದಂತೆ ಮೊದಲು ಪ್ರಶ್ನೆಗಳನ್ನು ಆಹ್ವಾನಿಸಿ ನಂತರ ಬಹಿರಂಗ ಚರ್ಚೆಗೆ ಸಿದ್ಧರಿರುವುದಾಗಿ ಹೇಳಿರುವುದು ಸ್ವಾಗತಾರ್ಹ. ದಾಖಲೆ ಸಹಿತ ಉತ್ತರ ನೀಡುವುದರೊಂದಿಗೆ ತಮ್ಮ ಪಾರದರ್ಶಕ ಆಡಳಿತ ಸಾಬೀತುಪಡಿಸುವಂತೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರಿಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಅಧ್ಯಕ್ಷರು ೨೪ ಫೆಬ್ರವರಿ ೨೦೨೪ ರಿಂದ ೧೧ ಜೂನ್ ೨೦೨೬ರವರೆಗೆ ಕಾರ್ಖಾನೆಯಿಂದ ಪಡೆದುಕೊಂಡಿರುವ ಸೌಲಭ್ಯಗಳ ಪಟ್ಟಿ. ಪ್ರಸ್ತುತ ಕಾರ್ಖಾನೆಯಲ್ಲಿ ೫.೯೫ ಲಕ್ಷ ಟನ್ ಕಬ್ಬನ್ನು ಒಪ್ಪಿಗೆ ಮಾಡಿಕೊಂಡಿದ್ದು, ೨೦೨೬-೨೭ನೇ ಸಾಲಿನಲ್ಲಿ ಎಷ್ಟು ಕಬ್ಬನ್ನು ನುರಿಸುತ್ತೀರಾ ಎಂಬ ಬಗ್ಗೆ ದೃಢೀಕೃತ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿದರು.

೨೮ ಫೆಬ್ರವರಿ ೨೦೨೪ರಿಂದ ೧೧ ಜೂನ್ ೨೦೨೬ರವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾ ಕಾರ್ಖಾನೆಯ ಅಧಿಕೃತ ಬ್ಯಾಂಕ್‌ಗಳಿಂದ ಹೊರಹೋಗಿರುವ ಮತ್ತು ಒಳಗಡೆ ಬಂದಿರುವ ವ್ಯವಹಾರಗಳನ್ನು ದಾಖಲೆಗಳ ರೂಪದಲ್ಲಿ ಹಣಕಾಸು ಅಧಿಕಾರಿ ಮತ್ತು ಅಧ್ಯಕ್ಷರು ದೃಢೀಕೃತ ಪ್ರಮಾಣಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆ ಆರಂಭಗೊಂಡ ದಿನದಿಂದ ದಿನನಿತ್ಯ ತೊಂದರೆಯಾಗಿ ನಿಲ್ಲುವುದಕ್ಕೆ ಕಾರಣ, ಕಾರ್ಖಾನೆ ಲಾಭ, ನಷ್ಟವನ್ನು ಪ್ರತ್ಯೇಕವಾಗಿ ದಾಖಲಿಸುವುದು. ೨೨ ಜುಲೈ ೨೦೨೫ರಿಂದ ೨೧ ಜುಲೈ ೨೦೨೬ರವರೆಗೆ ಕಾರ್ಖಾನೆ ಮುಖ್ಯ ಅಭಿಯಂತರರು ಮತ್ತು ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಲು ಕೆ.ವಿ.ವೀರೇಶ್ ಅವರಿಗೆ ಕಬ್ಬು ಅಭಿವೃದ್ಧಿ ಆಯುಕ್ತರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಅಥವಾ ಅಧೀನ ಕಾರ್ಯದರ್ಶಿಯವರ ಆದೇಶ ಪ್ರತಿಗಳು. ಸಭೆಯ ನಡವಳಿಯಲ್ಲಿ ಆಯ್ಕೆಯಾಗಿದ್ದಲ್ಲಿ ಅದರ ದಾಖಲೆಗಳನ್ನು ನೀಡುವಂತೆ ಕೋರಿದರು.

ಕಾರ್ಖಾನೆಯ ಈ ಹಿಂದಿನ ಮಹಿಳಾ ಆಡಳಿತಾಧಿಕಾರಿ ಅಧ್ಯಕ್ಷರ ವಿರುದ್ಧ ಮಹಿಳಾ ಆಯೋಗ ಮತ್ತು ಕಬ್ಬು ಅಭಿವೃದ್ಧಿ ನಿರ್ದೇಶಕರಿಗೆ ನೀಡಿರುವ ದೂರಿಗೆ ವ್ಯವಸ್ಥಾಪಕ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಕೈಗೊಂಡಿರುವ ಕ್ರಮದ ಬಗ್ಗೆ ದಾಖಲೆ ಸಹಿತ ವಿವರಿಸುವಂತೆ ಹೇಳಿದರು.

ಕಳೆದ ವರ್ಷ ಅಕ್ಟೋಬರ್ ೮ರಂದು ಕಾರ್ಖಾನೆ ಆವರಣದಲ್ಲಿದ್ದ ಅನುಪಯುಕ್ತ ವಸ್ತುಗಳನ್ನು ಟೆಂಡರ್ ಕರೆಯಲು ಸಭಾ ನಡಾವಳಿಯಲ್ಲಿಟ್ಟಿರುವುದು ಸರಿಯಷ್ಟೇ. ಪ್ರಸ್ತುತ ನಿವೃತ್ತ ಹೆಚ್ಚುವರಿ ಆಡಳಿತಾಧಿಕಾರಿ ಸ್ವಾಮಿಗೌಡ ೨೨ ಮೇ ೨೦೨೬ರಂದು ಅನುಪಯುಕ್ತ ವಸ್ತುಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸುಳ್ಳು ಮಾಹಿತಿ ನೀಡಿ ಸಭಾ ನಡವಳಿಯನ್ನು ಮುಚ್ಚಿಟ್ಟಿದ್ದಾರೆ. ಅವರ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ದಾಖಲೆ ಒದಗಿಸುವಂತೆ ತಿಳಿಸಿದರು.

ಕಾರ್ಖಾನೆಯಲ್ಲಿ ಕಾಯಂ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡದೆ ಇರುವುದಕ್ಕೆ ಕಾರಣವೇನು ಹಾಗೂ ವಾರಕ್ಕೊಮ್ಮೆ ಕಚೇರಿಗೆ ಬರುವ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕರಿಗೆ ಈಗಾಗಲೇ ಕೋಟ್ಯಂತರ ರು. ನಷ್ಟದಲ್ಲಿರುವ ಕಾರ್ಖಾನೆಯಿಂದ ಲಕ್ಷಾಂತರ ರು. ಮೌಲ್ಯದ ಇನ್ನೋವಾ ಕಾರನ್ನು ನೀಡಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಮೊಲಾಸಸ್ ಸೋರಿಕೆ ಸಂಬಂಧ ಅಬಕಾರಿ ಅಧಿಕಾರಿಯವರಿಗೆ ದಿಕ್ಕು ತಪ್ಪಿಸುವ ಮಾಹಿತಿ ನೀಡಿ ೭ ಟನ್ ಎಂದು ವರದಿ ನೀಡಿದ್ದು, ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯವರು ೨೦ ಟನ್ ಎಂದು ವರದಿ ನೀಡಿದ್ದಾರೆ. ಈ ಬಗ್ಗೆ ಅನುಮಾನಗೊಂಡು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದಾಗ ಮೊಲಾಸಸ್ ನೋಂದಾವಣೆ ಪುಸ್ತಕದಲ್ಲಿ ಕನಿಷ್ಠ ೧೪೦ ಟನ್ ತಿದ್ದುಪಡಿಯಾಗಿರುವುದು ಕಂಡುಬಂದಿದೆ. ಈ ಕುರಿತು ಪಾರದರ್ಶಕ ತನಿಖೆ ನಡೆಸಿದರೆ ಇನ್ನೂ ಹೆಚ್ಚಿನ ನಷ್ಟ ಬೆಳಕಿಗೆ ಬರಲಿದೆ. ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗೆ ನೋಟೀಸ್ ಮಾತ್ರ ನೀಡಲಾಗಿದೆ. ನಷ್ಟದಲ್ಲಿ ಎಷ್ಟು ಹಣ ವಸೂಲಿ ಮಾಡಲಾಗಿದೆ ಎಂಬುದಕ್ಕೆ ದಾಖಲೆ ನೀಡುವಂತೆ ಒತ್ತಾಯಿಸಿದರು.

ಕಾರ್ಖಾನೆ ನಷ್ಟದಲ್ಲಿದ್ದರೂ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕರು ಕಚೇರಿ ನವೀಕರಣಕ್ಕೆ ಸರ್ಕಾರದಿಂದ ಪಡೆದಿರುವ ಅನುಮತಿ ಪತ್ರ. ೨೮ ಫೆಬ್ರವರಿ ೨೦೨೪ರಿಂದ ೧೧.೦೬. ೨೦೨೬ರವರೆಗೆ ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾಗಳ ಚೆಕ್ ನೀಡಿರುವ ಹೆಸರುಗಳನ್ನು ನೀಡುವುದು. ಹಾಗೆಯೇ ಮಾಜಿ ಅಧ್ಯಕ್ಷ ಶಿವಲಿಂಗಯ್ಯ ಅವಧಿಯಲ್ಲಿ ಅನುಪಯುಕ್ತ ವಸ್ತುಗಳ ಮಾರಾಟಕ್ಕೆ ಟೆಂಡರ್ ಕರೆದಿರುವ ಮೊತ್ತದ ದಾಖಲೆ, ಜೊತೆಗೆ ಮೈಷುಗರ್‌ನಲ್ಲಿ ಭ್ರಷ್ಟಾಚಾರ ನಡೆಸಿ ₹೧೨೭ ಕೋಟಿ ರು. ವಂಚಿಸಿರುವ ನಾಗರಾಜಪ್ಪ ಆಸ್ತಿ ಮುಟ್ಟುಗೋಲಿಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದರು.

ಗೋಷ್ಠಿಯಲ್ಲಿ ಕೇಶವ, ಪ್ರಸನ್ನ, ಸುನೀಲ್, ಮಂಜೇಶ್, ವೆಂಕಟೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೌಡಿಶೀಟರ್ ಮಂಜೇಶ್ ಹತ್ಯೆ ಕೇಸ್‌ ಹತ್ತು ಆರೋಪಿಗಳ ಬಂಧನ
ಮತದಾರರ ಪಟ್ಟಿಗೆ ಅರ್ಹ ಮತದಾರರ ಸೇರ್ಪಡೆ ಮುಖ್ಯ ಉದ್ದೇಶ