ನಾಗಮಂಗಲ: ಐವರು ಮಹಿಳಾ ಸಾಧಕಿಯರಿಗೆ ಭೈರವಿ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jan 18, 2026, 01:45 AM IST
17ಕೆಎಂಎನ್ ಡಿ12 | Kannada Prabha

ಸಾರಾಂಶ

ಭೈರವೈಕ್ಯ ಶ್ರೀಗಳು ಭೌತಿಕವಾಗಿ ನಮ್ಮೊಂದಿಗಿದ್ದಾಗ ಪ್ರತಿವರ್ಷ ಬೇಸಿಗೆಯಲ್ಲಿ ರಾಜ್ಯದ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತ ಊಟ ವಸತಿ ಸಹಿತ 15 ದಿನಗಳ ಕಾಲ ಶಿಬಿರ ಆಯೋಜಿಸುತ್ತಿದ್ದರು. ಸರ್ವ ಸಮಾಜದ ಜನರಿಗೆ ಆದಿಚುಂಚನಗಿರಿ ಮಠ ಸದಾ ಬಾಗಿಲು ತೆರೆದಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಇಡೀ ರಾಷ್ಟ್ರದಲ್ಲಿ ಒಕ್ಕಲಿಗ ಸಮಾಜಕ್ಕೆ ಜನರು ಗೌರವ ಕೊಟ್ಟು ಅಭಿಮಾನ ತೋರಿಸುತ್ತಾರೆಂದರೆ ಅದಕ್ಕೆ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಲೋಕ ಸಮರ್ಪಿತ ಕೆಲಸ ಕಾರ್ಯಗಳೇ ಕಾರಣ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಅಭಿಪ್ರಾಯಪಟ್ಟರು.

ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ನಾರಿಯರು ಸಾಕ್ಷತ್ ದೇವಿಯರಿದ್ದಂತೆ ಎಂದು ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು ಮತ್ತು ಭಾರತದ ಶಾಸ್ತ್ರಗಳು ಹೇಳುತ್ತವೆ. ಅಂತಹ ನಾರಿ ಶಕ್ತಿಗೆ ಸದಾ ಕಾಲ ಚೈನತ್ಯ ಮಾರ್ಗದರ್ಶ ತುಂಬುತ್ತಿರುವ ಆದಿಚುಂಚನಗಿರಿ ಮಹಾಕ್ಷೇತ್ರವು ಭೈರವೈಕ್ಯಶ್ರೀಗಳ ಜಯಂತ್ಯುತ್ಸವ ಮತ್ತು ಸಂಸ್ಮರಣೋತ್ಸದದಲ್ಲಿ ಮಹಿಳೆಯರಿಗೆ ಹೊಸ ದಿಕ್ಕನ್ನು ಕೊಡುವ ಸಲುವಾಗಿ ಚುಂಚಾದ್ರಿ ಮಹಿಳಾ ಸಮಾವೇಶ ಆಯೋಜಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.

ಭೈರವೈಕ್ಯ ಶ್ರೀಗಳು ಭೌತಿಕವಾಗಿ ನಮ್ಮೊಂದಿಗಿದ್ದಾಗ ಪ್ರತಿವರ್ಷ ಬೇಸಿಗೆಯಲ್ಲಿ ರಾಜ್ಯದ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತ ಊಟ ವಸತಿ ಸಹಿತ 15 ದಿನಗಳ ಕಾಲ ಶಿಬಿರ ಆಯೋಜಿಸುತ್ತಿದ್ದರು. ಸರ್ವ ಸಮಾಜದ ಜನರಿಗೆ ಆದಿಚುಂಚನಗಿರಿ ಮಠ ಸದಾ ಬಾಗಿಲು ತೆರೆದಿದೆ ಎಂದು ಬಣ್ಣಿಸಿದರು.

450ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ವಿದ್ಯೆ ಸಿಗುವಂತೆ ಮಾಡಿರುವ ಭೈರವೈಕ್ಯ ಶ್ರೀಗಳು ರಾಜ್ಯಾದ್ಯಂತ 5 ಕೋಟಿ ಸಸಿಗಳನ್ನು ನಡೆವ ಮೂಲಕ ಪರಿಸರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಹಿಳೆಯರ ಪುನರುದ್ಧಾನ ಸಬಲೀಕರಣಕ್ಕಾಗಿ ಆದಿಚುಂಚನಗಿರಿ ಮಠದಿಂದ ಉತ್ತಮ ಮಾರ್ಗದರ್ಶನ ಸಿಗುತ್ತಿದೆ ಎಂದರು.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಪ್ರಭುದೇವ್ ಮಾತನಾಡಿ, ಸ್ತ್ರೀ ಎಂದರೆ ಸೃಷ್ಟಿಯ ಮೂಲ ರೂಪದ ಜಾಲಬಂಧ. ಈ ಜಗತ್ತನ್ನು ಕಾಯುವ ಶಕ್ತಿ. ಯಾವ ಜಾಗದಲ್ಲಿ ಸ್ತ್ರೀಯರಿಗೆ ಗೌರವ ಸಿಗುತ್ತದೆಯೋ ಅಲ್ಲಿ ಎಲ್ಲವೂ ಬೆಳಕಾಗಿರುತ್ತದೆ. ಎಲ್ಲದಕ್ಕೂ ಮೂಲ ರೂಪವಾಗಿರುವ ಮಹಿಳೆಯರ ಸೇವೆ ಮಹತ್ತರವಾದದ್ದು ಎಂದರು.

ಜನ್ಮ ಕೊಟ್ಟ 7 ದಿನದ ಮಗುವನ್ನು ಬಿಟ್ಟು ಮಹಿಳೆಯರು ಕೆಲಸಕ್ಕೆ ಹೋಗುವ ಪ್ರಸಂಗ ಅಮೆರಿಕಾದಲ್ಲಿದೆ. ಆದರೆ, ನಮ್ಮ ದೇಶದ ಮಹಿಳೆಯರಿಗೆ ಹುಟ್ಟಿದ ಮಗುವನ್ನು 9 ತಿಂಗಳ ಕಾಲ ಪೋಷಣೆ ಮಾಡಿ ಬಾಣಂತನ ಮಾಡಿಸಿಕೊಳ್ಳುವ ಸೌಭಾಗ್ಯವಿದೆ. ಇದಲ್ಲೆವನ್ನು ಅರಿತಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳು ಸಮಾಜದ ಯಾರೊಬ್ಬರೂ ಕೂಡ ಯಾವುದರಿಂದಲೂ ವಂಚಿತರಾಗಬಾರದೆಂಬ ಉದ್ದೇಶದಿಂದ ಅಮೆರಿಕಾದಲ್ಲಿಯೂ ಸಹ 50 ಎಕರೆ ಪ್ರದೇಶದಲ್ಲಿ ದೊಡ್ಡದಾದ ಶ್ರೀಮಠವನ್ನು ಸ್ಥಾಪಿಸಿದ್ದಾರೆ ಎಂದರು.

ಧರ್ಮ, ಸಂಸ್ಕೃತಿ, ವಿಜ್ಞಾನ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಪಾಂಡಿತ್ಯಹೊಂದಿರುವ ವೈಜ್ಞಾನಿಕ ಪೀಠಾಧ್ಯಕ್ಷರು ನಮ್ಮ ಸಮಾಜದಲ್ಲಿರುವುದು ನಮ್ಮೆಲ್ಲರ ಪುಣ್ಯ ಎಂದು ಶ್ರೀಗಳನ್ನು ಬಣ್ಣಿಸಿದರು.

ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ರಾಜ್ಯಾಧ್ಯಕ್ಷೆ ಭಾರತಿ ಶಂಕರ್ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಕ್ರೀಡಾ ಕ್ಷೇತ್ರದ ಸಾಧಕಿ ಮತ್ತು ಭೈರವಿ ಪ್ರಶಸ್ತಿ ಪುರಸ್ಕೃತೆ ಬಿಂಧುರಾಣಿ, ಬೆಂಗಳೂರಿನ ಪುಣ್ಯ ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ.ಪುಣ್ಯವತಿ ನಾಗರಾಜ್ ಮಾತನಾಡಿದರು. ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಆಶೀರ್ವಚನ ನೀಡಿದರು.

ಭೈರವಿ ಪ್ರಶಸ್ತಿ ಪ್ರದಾನ:

ಇದೇ ವೇಳೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೋಲಾರ ಜಿಲ್ಲೆಯ ಪ್ರಗತಿಪರ ರೈತಮಹಿಳೆ ರತ್ನಮ್ಮ, ವೈದ್ಯಕೀಯ ಕ್ಷೇತ್ರದಿಂದ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆ ಡೀನ್ ಡಾ.ಸತ್ಯಪ್ರಭ, ನಿರೂಪಕಿ ಹಾಗೂ ಜಾನಪದ ಗಾಯಕಿ ದಿವ್ಯ ಆಲೂರು, ಶಿಕ್ಷಣ ಕ್ಷೇತ್ರದಿಂದ ಕ್ಷಿಜ್ ಸಾಧಕಿ ಮೇಘವಿ, ಭುವನೇಶ್ವರಿದೇವಿ ಒಕ್ಕಲಿಗರ ಸಂಘದ ಸಂಸ್ಥಾಪಕಿ ದಿ.ಮಹದೇವಮ್ಮ ಅವರ ಪುತ್ರಿ ಶುಭ ಅವರಿಗೆ ಈ ಸಾಲಿನ ಭೈರವಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಮಠದ ಚೈತನ್ಯನಾಥ ಸ್ವಾಮೀಜಿ, ತುರುವೇಕೆರೆ ಮಾಜಿ ಶಾಸಕ ಲಕ್ಷ್ಮೀನಾರಾಯಣ್, ವಿವಿಧ ಶಾಖಾ ಮಠಗಳ ಶ್ರೀಗಳು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಹಿಳಾ ಸಂಘಗಳ ಪದಾಧಿಕಾರಿಗಳು ಮತ್ತು ಭಕ್ತರು ಇದ್ದರು.ತಾಯಂದಿರ ಕಾಣಿಕೆಯನ್ನು ಮಕ್ಕಳು ಸಂಶಯಿಸಬಾರದು: ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಇಂದಿನ ತಾಯಂದಿರಿಗೆ ಹೆಚ್ಚು ಸವಾಲುಗಳು ಎದುರಾಗುತ್ತವೆ. ಆದರೂ ಸಹ ಕೆಲಸದ ಒತ್ತಡದ ನಡುವೆ ತಾಯ್ತತನದ ಜವಾಬ್ದಾರಿ ನಿಲ್ಲಿಸುವುದಿಲ್ಲ. ಹಾಗಾಗಿ ತಾಯಂದಿರ ಕಾಣಿಕೆಯನ್ನು ಮಕ್ಕಳು ಸಂಶಯಿಸಬಾರದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ನಡೆದ ರಾಜ್ಯ ಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ತಾಯಂದಿರ ಪ್ರಜ್ಞೆ ಬಹಳ ಮುಖ್ಯ. ಮನೆಯಲ್ಲಿ ಹುಟ್ಟುವ ಮಕ್ಕಳು ಜಗತ್ತಿಗೆ ಕಾಣಿಕೆಯಾಗಬೇಕು ಎಂದರು.

ಸಂಘಟನೆ ಹೆಸರಿನಲ್ಲಿ ಶ್ರೀಮಠಕ್ಕೆ ಮುಕ್ತವಾಗಿ ಬರಲು ಅವಕಾಶವಿದೆ. ಇಲ್ಲಿಗೆ ಬಂದು ಹೋಗುವ ಮನಸ್ಸು ಪ್ರಫುಲ್ಲವಾಗುತ್ತದೆ. ಪ್ರಜ್ಞೆ ಜಾಗೃತವಾಗುತ್ತದೆ. ಒಳ್ಳೆಯ ಆಲೋಚನೆಯಿಂದ ಬದುಕು ವಿಕಾಸವಾಗುತ್ತದೆ ಎಂದರು.

ಆಧುನಿಕತೆ, ವಿದ್ಯೆ, ಸಂಪತ್ತು, ಅಹಂ ಪ್ರದರ್ಶಿಸಲು ಸಮಾವೇಶ ಆಯೋಜನೆಯಾಗಿಲ್ಲ. ನಮ್ಮ ಪ್ರಜ್ಞೆಯನ್ನು ಎತ್ತರೆತ್ತರಕ್ಕೆ ಏರಿಸಿಕೊಂಡು ಹೋಗಲು. ಮಾನವ ಪ್ರಜ್ಞೆ ಹೆಚ್ಚೆಚ್ಚು ಜಾಗೃತವಾಗಲು ಸಮಾವೇಶ ಆಯೋಜನೆಗೊಂಡಿದೆ ಎಂದರು.

ತಾಯಂದಿರು ಕೋಪದ ಕೈಗೆ ಬುದ್ದಿ ಕೊಡಬಾರದು. ಬದುಕನ್ನು ಹಾಳು ಮಾಡುವ ಕೋಪದ ಮಾತುಗಳಿಗೆ ಕಡಿವಾಣ ಹಾಕಿ. ಕೋಪ ಬಂದಾಗ ಮೌನದ ಮೊರೆ ಹೋದರೆ ಮನೆ ಮತ್ತು ಮನಸ್ಸು ಎರಡೂ ಕ್ಷೇಮದಿಂದಿರುತ್ತದೆ. ಶ್ರೀಮಠವು ಎಲ್ಲಾ ತಾಯಂದಿರು ಹಾಗೂ ಹೆಣ್ಣು ಮಕ್ಕಳಿಗೆ ತವರುಮನೆ ಇದ್ದಂತೆ ಎಂದು ಆಶೀರ್ವದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಮಣ್ಣ ಖಂಡ್ರೆ ಸಮಾಜಮುಖಿ ಚಿಂತನೆಯಲ್ಲೇ ಬದುಕಿದವರು
ಅಂಬೇಡ್ಕರ್‌ ಹಾದಿಯಲ್ಲಿ ನಡೆದರೆ ಬದುಕು ಸಾರ್ಥಕ; ಶಾಸಕ ಗಣೇಶ್‌ ಪ್ರಸಾದ್