ನಾಗಮಂಗಲ ಗಲಭೆ ಪೂರ್ವನಿಯೋಜಿತ ಕೃತ್ಯ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ ಆರೋಪ

KannadaprabhaNewsNetwork |  
Published : Sep 14, 2024, 01:51 AM ISTUpdated : Sep 14, 2024, 12:43 PM IST
ಸುನೀಲಕುಮಾರ | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಹಿಂದುಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಸುನೀಲಕುಮಾರ ಆರೋಪಿಸಿದರು.

 ಬೆಳಗಾವಿ :  ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಹಿಂದುಗಳ ಮೇಲೆ ಹಲ್ಲೆ ಮಾಡಲಾಗಿದೆ. ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಸುನೀಲಕುಮಾರ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿ ಮೇಲಿಂದ ಪೆಟ್ರೋಲ್‌ ಬಾಂಬ್‌ ಎಸೆಯಲಾಗಿದೆ. ಹಿಂದುಗಳ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಗಲಭೆಯಾಗಿದ್ದರೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಇದಕ್ಕೆ ಸಣ್ಣ ಗಲಾಟೆ ಎನ್ನುತ್ತಿದ್ದಾರೆ. ಇದು ಪೂರ್ವನಿಯೋಜಿತ ಕೃತ್ಯ ಎಂದು ಪುನರುಚ್ಚರಿಸಿದರು.

ಗಣೇಶೋತ್ಸವ ಮಂಡಳಿ ಹಾಗೂ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಕಾಂಗ್ರೆಸ್‌ ಸರ್ಕಾರ ಮಸೀದಿ ಮೇಲೆ ಏಕೆ ಪ್ರಕರಣ ದಾಖಲಿಸಿಲ್ಲ? ಮಸೀದಿಯಿಂದಲೂ ಕಲ್ಲು ಎಸೆಯಲಾಗಿದೆ. ಸರ್ಕಾರ ಕರ್ನಾಟಕವನ್ನು ತಾಲಿಬಾನ್‌, ಬಾಂಗ್ಲಾ ಆಗಲು ಬಿಡಬಾರದು. ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಅದ್ಧೂರಿ, ವಿಜೃಂಭಣೆಯಿಂದ ನಡೆಯಬೇಕು, ಅಂಗಡಿಕಾರರಿಗೆ ಸೂಕ್ತ ಪರಿಹಾರ ನೀಡಬೇಕು, ಗಣೇಶೋತ್ಸವ ಮಂಡಳಿ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದಲೂ ಆರ್ಥಿಕ ಸ್ಥಿತಿ ಕುಸಿದಿದೆ. ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಹೊರೆ ಹಾಕಲಾಗಿದೆ. ಹಲವು ಯೋಜನೆಗಳಿಗೆ ಕತ್ತರಿ ಹಾಕಲು ಕಾಂಗ್ರೆಸ್‌ ಸರ್ಕಾರ ಹೊರಟಿದೆ. ಈಗ 11 ಲಕ್ಷ ರೇಷನ್‌ ಕಾರ್ಡ್‌ ರದ್ದುಗೊಳಿಸಲು ಕಾಂಗ್ರೆಸ್‌ ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಇಲ್ಲವೆ ಸಮಾವೇಶ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ. ಈ ಸಂಬಂಧ ಪಕ್ಷದ ಹೈಕಮಾಂಡ್‌ ನಮಗೆ ಸಲಹೆ ನೀಡಿದೆ. ಅದು ಬಸನಗೌಡ ಪಾಟೀಲ ಯತ್ನಾಳ ಪಾದಯಾತ್ರೆಯಲ್ಲ, ಬಿಜೆಪಿ ಪಾದಯಾತ್ರೆ. ಪಾದಯಾತ್ರೆ ದಿನಾಂಕ ಮತ್ತು ಹೋರಾಟದ ರೂಪುರೇಷೆಗಳನ್ನು ಪಕ್ಷದ ನಾಯಕರು ಚರ್ಚೆ ಮಾಡಲಿದ್ದಾರೆ ಎಂದು ಹೇಳಿದರು. ಬಿಜೆಪಿ ಎಂದಿಗೂ ಹೊಂದಾಣಿಕೆ ರಾಜಕಾರಣ ಒಪ್ಪುವುದಿಲ್ಲ. ಚಿಕ್ಕೋಡಿ ಪುರಸಭೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಕೈಜೋಡಿಸಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದ ಅವರು, ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ಕರ್ನಾಟಕಲ್ಲಿ 1.50 ಕೋಟಿ ಬಿಜೆಪಿ ಸದಸ್ಯರು ಸೇರ್ಪಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಶಾಸಕ ವಿಠ್ಠಲ ಹಲಗೇಕರ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅರವಿಂದ ಪಾಟೀಲ, ಮಾಜಿ ಸಂಸದೆ ಮಂಗಲಾ ಅಂಗಡಿ, ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ, ಹನುಮಂತ ಕೊಂಗಾಲಿ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ