ಪತ್ರಿಕೋದ್ಯಮದಲ್ಲಿ ನಾಗಮಣಿಯವರ ಸಾಧನೆ ಅಗ್ರಗಣ್ಯ: ಹಂಪನಾ ಶ್ಲಾಘನೆ

KannadaprabhaNewsNetwork | Published : Apr 7, 2025 1:34 AM

ಸಾರಾಂಶ

ಪತ್ರಿಕೋದ್ಯಮದಲ್ಲಿ ಪುರುಷರು ಮಾತ್ರ ಸಾಧನೆ ಮಾಡುತ್ತಿದ್ದ ಕಾಲದಲ್ಲಿ ಆಕಾಶವಾಣಿಯ ನಿವೃತ್ತ ಸುದ್ದಿ ಸಂಪಾದಕಿ ನಾಗಮಣಿ ಎಸ್.ರಾವ್‌ ಅವರು ಪತ್ರಿಕೋದ್ಯಮದಲ್ಲಿ ಅಗ್ರಗಣ್ಯ ಸಾಧನೆ ಮಾಡಿದರು ಎಂದು ಹಿರಿಯ ಸಂಶೋಧಕ ಡಾ। ಹಂಪ ನಾಗರಾಜಯ್ಯ (ಹಂಪನಾ) ಶ್ಲಾಘಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪತ್ರಿಕೋದ್ಯಮದಲ್ಲಿ ಪುರುಷರು ಮಾತ್ರ ಸಾಧನೆ ಮಾಡುತ್ತಿದ್ದ ಕಾಲದಲ್ಲಿ ಆಕಾಶವಾಣಿಯ ನಿವೃತ್ತ ಸುದ್ದಿ ಸಂಪಾದಕಿ ನಾಗಮಣಿ ಎಸ್.ರಾವ್‌ ಅವರು ಪತ್ರಿಕೋದ್ಯಮದಲ್ಲಿ ಅಗ್ರಗಣ್ಯ ಸಾಧನೆ ಮಾಡಿದರು ಎಂದು ಹಿರಿಯ ಸಂಶೋಧಕ ಡಾ। ಹಂಪ ನಾಗರಾಜಯ್ಯ (ಹಂಪನಾ) ಶ್ಲಾಘಿಸಿದ್ದಾರೆ.

‘ಮಾಧ್ಯಮ ಚಿಂತನ ವೇದಿಕೆ’ ಭಾನುವಾರ ನಗರದ ಎನ್.ಆರ್. ಕಾಲೋನಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಗಮಣಿ ಎಸ್.ರಾವ್ ಅವರ ಆತ್ಮಕಥನ ‘ಸುದ್ದಿಸಂಗಾತಿಯ ಸ್ವಗತ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ನಾಗಮಣಿ ಅವರು ಕರ್ನಾಟಕ ಮೆಚ್ಚುವಂತ ವಾರ್ತಾ ವಾಚಕಿಯಾಗಿದ್ದರು. ಅವರ ಆತ್ಮಕಥನ ಯಾವುದೇ ಉತ್ಪ್ರೇಕ್ಷೆಯಿಲ್ಲದೆ ಬಹಳ ಸರಳವಾಗಿ ಮೂಡಿಬಂದಿದೆ. ನಿರಂಜನ ಎಂಬುವರು ನಾಗಮಣಿ ಅವರ ಸುದ್ದಿ ಓದುವ ಶೈಲಿಗೆ ಮರುಳಾಗಿದ್ದರು. ತನ್ನ ಮರಣದ ಸುದ್ದಿಯನ್ನು ನಾಗಮಣಿ ಅವರೇ ಓದಬೇಕೆಂದು ಬಯಸಿದ್ದರು. ಆ ವಿಚಾರವನ್ನು ನಾಗಮಣಿ ಅವರಲ್ಲಿಯೂ ಹಂಚಿಕೊಂಡಿದ್ದರು. ನಿರಂಜನ ಮರಣ ಹೊಂದುವ ವೇಳೆಗೆ ನಾಗಮಣಿ ಸುದ್ದಿವಾಚಕ ಕೆಲಸದಿಂದ ನಿವೃತ್ತರಾಗಿದ್ದರು. ಆದರೂ ಅವರ ಮರಣ ಸುದ್ದಿಯನ್ನು ಓದಿದ್ದರು. ಇಂತಹ ಅನೇಕ ರೋಚಕ ಸಂಗತಿಗಳು ಪುಸ್ತಕದಲ್ಲಿವೆ ಎಂದು ತಿಳಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ನಾಗಮಣಿ ಅವರು ದಕ್ಷಿಣ ಭಾರತದಲ್ಲಿ ಮೊದಲ ಮಹಿಳಾ ಪತ್ರಕರ್ತೆ. ಅವರ ಕುರಿತು ಯುವಪೀಳಿಗೆ ತಿಳಿಯಬೇಕು. ಇದೇ ಉದ್ದೇಶದಿಂದ ಕೃತಿ ಖರೀದಿಸಿ, ಮಾಧ್ಯಮ ಅಕಾಡೆಮಿಯಲ್ಲಿ ಇಡಲಾಗುವುದು. ಈ ಆತ್ಮಕಥನವನ್ನು ಇಂಗ್ಲಿಷ್‌ಗೆ ಅನುವಾದಿಸಲು ಸಹಕಾರ ನೀಡಲಾಗುವುದು ಎಂದು ಹೇಳಿದರು.

ನಾಗಮಣಿ ಎಸ್. ರಾವ್ ಮಾತನಾಡಿ, ಆತ್ಮಕಥನ ಬರೆಯುವ ಯೋಚನೆ ಬಂದಿರಲಿಲ್ಲ. ಕೆಲಸ ಮಾಡುವುದರಲ್ಲಿ ತೃಪ್ತಿ ಕಾಣುತ್ತಿದ್ದೆ ಎಂದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ, ಪತ್ರಕರ್ತೆಯರಾದ ಮಾಲತಿ ಭಟ್, ಕೆ.ಎಚ್.ಸಾವಿತ್ರಿ, ಆರ್. ಪೂರ್ಣಿಮಾ, ಪದ್ಮಾ ಶಿವಮೊಗ್ಗ ಮತ್ತಿತರರು ಉಪಸ್ಥಿತರಿದ್ದರು.

Share this article