ಕನ್ನಡಪ್ರಭ ವಾರ್ತೆ ಯಾದಗಿರಿ
ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರು, ಅಭಿಮಾನಿಗಳ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಜನರು ಅಭಿಮಾನಿಗಳು ಗೌಡರ ಅಂತಿಮ ದರ್ಶನ ಪಡೆದರು. ವಿವಿಧ ಮಠಾಧೀಶರುಗಳು ಅಲ್ಲಿ ಉಪಸ್ಥಿತರಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಸಮರೋಪಾದಿಯಲ್ಲಿ ಹರಿದು ಬಂದ ನಾಗನಗೌಡರ ಅಭಿಮಾನಿಗಳ ನಿಯಂತ್ರಿಸಲು, ಅಂತಿಮ ದರುಶನಕ್ಕೆ ಅನುವಾಗಲೆಂದು ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸರ್ಕಾರಿ ಗೌರವಾರ್ಥ ಅಂಗವಾಗಿ, ಪೊಲೀಸ್ ಪಡೆಗಳು ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿದವು.
ಬೆಳಿಗ್ಗೆಯಿಂದಲೇ ಕಂದಕೂರಿನತ್ತ ಜನಸಾಗರ ಹರಿದು ಬಂದಿತ್ತು. ಮಾಜಿ ಪ್ರಧಾನಿ ದೇವೇಗೌಡರ ಪರಮಾಪ್ತರಾಗಿರುವ ಕಂದಕೂರು ಕುಟುಂಬಕ್ಕೆ ಸಾಂತ್ವನ ಹೇಳಲು ದೊಡ್ಡ ಗೌಡರ ಕುಟುಂಬದ ಪರವಾಗಿ ನಿಖಿಲ್ ಕುಮಾರಸ್ವಾಮಿ ಅವರು ಆಗಮಿಸಿದ್ದರು. ನಾಗನಗೌಡರ ಪುತ್ರ, ಗುರುಮಠಕಲ್ ಹಾಲಿ ಶಾಸಕ ಶರಣಗೌಡರ ಕಣ್ಣೀರ ಕಟ್ಟೆಯೊಡೆದಿತ್ತು.ಸೋಲುಗಳನ್ನೇ ಸೋಲಿಸಿ ಗೆದ್ದ ಗೌಡರು:
ಕಂದಕೂರು ಕುಟುಂಬದ ರಾಜಕೀಯವೇ ಮುಗಿಯಿತು ಎಂಬ ಕುಹಕಗಳ ಮೆಟ್ಟಿ ನಿಂತು, ಸೋಲುಗಳನ್ನೇ ಸವಾಲಾಗಿಸಿಕೊಂಡು 2018 ರ ಚುನಾವಣೆಯಲ್ಲಿ ಬಾಬುರಾವ್ ವಿರುದ್ಧ 24 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಭಾರಿ ಗೆಲುವು ಕಂಡಿದ್ದರು.
ಬದುಕಿರುವವರೆಗೂ ಜೆಡಿಎಸ್‌ನಲ್ಲೇ ಎಂದಿದ್ದ ಗೌಡರು:
ಕಂದಕೂರು ಕುಟುಂಬದ ರಾಜಕೀಯ ಶತ್ರುವೆಂದೇ ಕರೆಯಲ್ಪಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆ ಚುನಾವಣೆಯಲ್ಲಿ ಬೆಂಬಲ ಕೋರಿ ಕಂದಕೂರು ಅವರ ಮನೆಗೆ ಖುದ್ದು ಆಗಮಿಸಿದ್ದಾಗ, ಹಿಂದಿನ ಕಹಿಗಳ ಮರೆದು ಖರ್ಗೆ ಕೈ ಬಲಪಡಿಸಿದ್ದರು ನಾಗನಗೌಡರು.