ಹಾವೇರಿ ಜಿಲ್ಲಾದ್ಯಂತ ನಾಗರ ಪಂಚಮಿ ಸಡಗರ

KannadaprabhaNewsNetwork |  
Published : Aug 17, 2026, 02:30 AM IST
16ಎಚ್‌ವಿಆರ್1 | Kannada Prabha

ಸಾರಾಂಶ

ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ನಾಗರ ಪಂಚಮಿ ಹಬ್ಬವನ್ನು ಭಾನುವಾರ ಜಿಲ್ಲಾದ್ಯಂತ ಮಹಿಳೆಯರು ಮತ್ತು ಮಕ್ಕಳು ಕಲ್ಲು ನಾಗರ ಮೂರ್ತಿಗಳಿಗೆ ಹಾಗೂ ಹುತ್ತಕ್ಕೆ ಹಾಲು ಎರೆಯುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದರು.

ಹಾವೇರಿ: ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ನಾಗರ ಪಂಚಮಿ ಹಬ್ಬವನ್ನು ಭಾನುವಾರ ಜಿಲ್ಲಾದ್ಯಂತ ಮಹಿಳೆಯರು ಮತ್ತು ಮಕ್ಕಳು ಕಲ್ಲು ನಾಗರ ಮೂರ್ತಿಗಳಿಗೆ ಹಾಗೂ ಹುತ್ತಕ್ಕೆ ಹಾಲು ಎರೆಯುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದರು.

ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಮನೆಮನೆಗಳಲ್ಲಿ ಬೆಳಗ್ಗೆಯಿಂದ ತರಹೇವಾರಿ ಹಬ್ಬದ ಅಡುಗೆಯ ಸಿದ್ಧತೆ ನಡೆಸಿದರು. ಮುತ್ತೈದೆಯರು ಮಕ್ಕಳೊಂದಿಗೆ ಹೊಸ ಬಟ್ಟೆ ತೊಟ್ಟು, ಕೈಯಲ್ಲಿ ಪೂಜಾ ಸಾಮಗ್ರಿ ಹಿಡಿದು ನಾಗದೇವತೆ ದೇವಸ್ಥಾನ, ಕಲ್ಲು ನಾಗರ ಮೂರ್ತಿ, ಹುತ್ತಗಳಿರುವ ಪ್ರದೇಶಗಳಿಗೆ ತೆರಳಿ ಅಕ್ಕ-ತಂಗಿಯರ ಪಾಲು, ಸಹೋದರರ ಪಾಲು, ತಂದೆ ತಾಯಿಯರ ಪಾಲು, ಗುರು-ಹಿರಿಯರ ಪಾಲು ಹೀಗೆ ಕುಟುಂಬದಲ್ಲಿರುವ ಎಲ್ಲರಿಗೂ ಒಳ್ಳೆಯದಾಗಲೆಂದು ಬೇಡಿಕೊಳ್ಳುತ್ತಾ ದೇವರಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು.

ಹಾವೇರಿಯ ವಿದ್ಯಾನಗರ, ಶಿವಯೋಗೀಶ್ವರ ನಗರ, ಹೊಸನಗರ, ಆನೆ ಪಾರ್ಕ, ಹುಕ್ಕೇರಿಮಠ, ಹೊಸಮಠ, ಸಿಂಧಗಿಮಠ, ಹರಸೂರ ಬಣ್ಣದಮಠ, ಬಸವೇಶ್ವರ ನಗರ, ಮಂಜುನಾಥ ನಗರ, ಅಶ್ವಿನಿನಗರ, ಶಿವಾಜಿನಗರ, ದಾನೇಶ್ವರಿ ನಗರ, ಇಜಾರಿ ಲಕಮಾಪೂರ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಕಲ್ಲು ನಾಗರ ಮೂರ್ತಿಗಳಿಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಣ್ಣಿನ ಹುತ್ತಗಳಿಗೆ ಹಾಲೆರೆಯುವ ಮೂಲಕ ಶ್ರದ್ದಾ ಭಕ್ತಿಯಿಂದ ಹಬ್ಬವನ್ನು ಆಚರಿಸಿದರು.

ತರಹೇವಾರಿ ಲಾಡುಗಳು: ನಾಗರ ಪಂಚಮಿ ಹಬ್ಬದ ನಿಮಿತ್ತ ಮನೆಮನೆಗಳಲ್ಲಿ ಹಾಗೂ ಮಕ್ಕಳ ಕೈಯಲ್ಲಿ ಬಗೆಬಗೆಯ ಲಾಡುಗಳದ್ದೇ ದರ್ಬಾರು ಕಂಡುಬಂದಿತು. ಪ್ರಮುಖವಾಗಿ ಕಡ್ಲಿ, ಪುಟಾಣಿ, ಗೋಧಿ ಹಿಟ್ಟು, ಬುಂದೆ, ಶೇಂಗಾ, ಹೆಸರು, ತೆಂಬಿಟ್ಟು, ರವೆ, ದಾಣಿ, ಗುಳಿಗಿ, ಎಳ್ಳು, ಅಳ್ಳಿಟ್ಟು ಹೀಗೆ ನಾನಾ ತರಹದ ಉಂಡಿಗಳು, ಕಡಬು ತಯಾರಿಸಿ ನೈವೇದ್ಯ ಮಾಡಿ ನೆರೆಹೊರೆಯವರಿಗೆ ಹಂಚಿ ಸಂಭ್ರಮಿಸಿದರು.

ಮಕ್ಕಳ ಕೈಯಲ್ಲಿ ಬುಗುರಿ: ಪಂಚಮಿ ಹಬ್ಬದಲ್ಲಿ ಚಿಕ್ಕಮಕ್ಕಳು ಜೋಕಾಲಿ ಆಟವನ್ನು ಸಂಭ್ರಮಿಸುವುದರ ಜತೆಗೆ ಒಣಕೊಬ್ಬರಿ ಬಟ್ಟಲುಗಳಲ್ಲಿ ದಾರ ಕಟ್ಟಿಕೊಂಡು ಬುಗರಿಯಂತೆ ತಿರುಗಿಸಿ ಆಟವಾಡಿದರು. ನೂಲು ತುಂಡಾದ ಬಳಿಕ ಲಾಡುಗಳೊಂದಿಗೆ ಒಣಕೊಬ್ಬರಿ ಬಟ್ಟಲುನ್ನು ತಿಂದು ಸಂತೋಷಪಟ್ಟರು.

ದೇವಸ್ಥಾನದಲ್ಲಿ ದೇವರ ದರ್ಶನ: ಶ್ರಾವಣ ಮಾಸ ಹಾಗೂ ಪಂಚಮಿ ಹಬ್ಬದ ಹಿನ್ನೆಲೆ ನಗರದ ಪುರಸಿದ್ದೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ವಿದ್ಯಾನಗರ ಆನೆ ಪಾರ್ಕನಲ್ಲಿರುವ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ, ಹುಕ್ಕೇರಿಮಠ, ಹೊಸಮಠ, ಸಿಂಧಗಿ ಮಠ, ಹರಸೂರ ಬಣ್ಣದ ಮಠ, ಬಸವೇಶ್ವರನಗರ ಆಂಜನೇಯ ದೇವಸ್ಥಾನ, ದುಂಡಿಬಸವೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭಕ್ತರು ತೆರಳಿ ದೇವರ ದರ್ಶನ ಪಡೆದರು.

ಜೋಕಾಲಿ ಹಬ್ಬ: ಪಂಚಮಿ ಹಬ್ಬದ ಸಂಭ್ರಮದಲ್ಲಿ ಚಿಕ್ಕಮಕ್ಕಳು ಮನೆಗಳಲ್ಲಿ ಕಟ್ಟಿದ ಜೋಕಾಲಿ ಆಡುವಲ್ಲಿ ತಲ್ಲೀನರಾಗಿದ್ದರೆ, ದೊಡ್ಡವರು ಬಯಲಿನ ದೊಡ್ಡ ಮರಗಳಿಗೆ ಕಟ್ಟಿದ ಜೋಕಾಲಿ ಜೀಕುತ್ತಾ ಖುಷಿಪಟ್ಟರು. ಇನ್ನೂ ಗ್ರಾಮೀಣ ಮಹಿಳೆಯರೂ ಜೋಕಾಲಿ ಆಡಿದ್ದು ಕಂಡುಬಂದಿತು. ವಿಶೇಷವಾಗಿ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಅತ್ಯಂತ ಸಂಭ್ರಮದಿಂದ ತವರು ಮನೆಗೆ ಆಗಮಿಸಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ನಾಗದೇವರುಗಳಿಗೆ ಹಾಲೆರೆದು, ಜೋಕಾಲಿ ಆಡುವುದರ ಮೂಲಕ ಹಬ್ಬವನ್ನು ಸಂಭ್ರಮಿಸಿದ್ದು ವಿಶೇಷವಾಗಿತ್ತು.

16ಎಚ್‌ವಿಆರ್1

ಪಂಚಮಿ ಹಬ್ಬದ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ನಾಗದೇವತೆಗಳ ಮೂರ್ತಿಗಳಿಗೆ ಸುಮಂಗಲಿಯರು ಹಾಲೆರೆದು ವಿಶೇಷ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಪಾಯಿ ದಂಗೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಜನಸಾಮಾನ್ಯರಿಗೂ ಶಿಕ್ಷಣ ಸಿಗುತ್ತಿರುವುದೇ ದೊಡ್ಡ ಬದಲಾವಣೆ: ಶಾಸಕ ಮಾನೆ