ಕನ್ನಡಪ್ರಭ ವಾರ್ತೆ ಮೈಸೂರುನಮ್ಮ ಮುಂದಿನ ಪೀಳಿಗೆಗೆ ಈ ನೆಲದ ಇತಿಹಾಸವನ್ನು ಅರಿಯುವ ಪಠ್ಯಕ್ರಮವನ್ನು ಶಿಕ್ಷಣದಲ್ಲಿ ಅಳವಡಿಸಬೇಕು ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್. ರಘು ಕೌಟಿಲ್ಯ ಕರೆ ನೀಡಿದರು.ನಗರದ ರೋಟರಿ ಸಭಾಂಗಣದಲ್ಲಿ ಕರ್ನಾಟಕ ಸೇನಾ ಪಡೆ ಗುರುವಾರ ಆಯೋಜಿಸಿದ್ದ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಮತ್ತು ಕುವೆಂಪು ಸ್ಮರಣೆ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಕರ್ನಾಟಕ ಸುವರ್ಣ ಸಂಭ್ರಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ಸಾಮರಸ್ಯದ ಹೆಸರಿನಲ್ಲಿ ಆಕ್ರಮಣಕಾರಿ ಪ್ರವೃತ್ತಿ ಬೆಳೆಸಿಕೊಳ್ಳದೇ ಇತಿಹಾಸದಲ್ಲಿ ಸಾಕಷ್ಟು ತ್ಯಾಗ ಮಾಡಿದೆ. ಗಡಿ ಪ್ರದೇಶಗಳಲ್ಲಿ ಉದಕಮಂಡಲ, ಕಾಸರಗೋಡು, ಹೊಸೂರು, ನಿಪ್ಪಾಣಿ, ಮೊದಲಾದ ಅಚ್ಚ ಕನ್ನಡ ಪ್ರದೇಶಗಳನ್ನು ರಾಜಕೀಯ ಹಿಚ್ಛಾಶಕ್ತಿ ಇಲ್ಲದೇ ಕಳೆದುಕೊಂಡಿದೆ. ಆದರೆ ಸದ್ಯ ಈಗಲಾದರೂ ಕನ್ನಡ ಸಂಸ್ಕೃತಿ ಉಳಿಸಿಕೊಳ್ಳಲು ಎಚ್ಚೆತ್ತುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದರು.ಬ್ರಿಟಿಷರು ಇಂಗ್ಲೀಷ್ ಹೇರಿದರೆ, ಉತ್ತರ ಭಾರತದವರು ಹಿಂದಿ ಭಾಷೆ ಹೇರುತ್ತಿದ್ದಾರೆ. ರಾಷ್ಟ್ರಭಾಷೆಯ ಕಲ್ಪನೆ ಇಲ್ಲದ ಕೆಲವರು ಕನ್ನಡವೂ ಹಿಂದಿಯಷ್ಟೇ ಮಾನ್ಯತೆ ಹೊಂದಿರುವ ರಾಷ್ಟ್ರಭಾಷೆ ಎಂಬ ವಾಸ್ತವ ಸ್ಥಿತಿ ಅರಿತುಕೊಂಡಿಲ್ಲ. ಹಲವು ಭಾಷೆ ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ ವ್ಯವಸ್ಥಿತವಾಗಿ ಅನ್ಯ ಭಾಷೆ ಹೇರಿಕೆ ಹಿಸಿಕೊಂಡು ಕುಳಿತುಕೊಳ್ಳುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು.ತ್ರಿಭಾಷಾ ಸೂತ್ರ ಒಪ್ಪಿಕೊಳ್ಳುವುದೇ ಆದರೆ ನಮ್ಮ ಗಡಿ ರಾಜ್ಯದ ಭಾಷೆಗಳನ್ನು ಕಲಿಯುವುದರಿಂದ ಒಕ್ಕೂಟ ವ್ಯವಸ್ಥೆ ಹಾಗೂ ಗಡಿ ಭಾಗದ ಸೌಹಾರ್ಧತೆ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ. ಇದರ ಜೊತೆ ಜೊತೆಗೇ ವ್ಯವಹಾರಿಕವಾಗಿಯೂ ಗಡಿ ರಾಜ್ಯದೊಂದಿಗೆ ಸಂಬಂಧ ಸುಧಾರಿಸುತ್ತದೆ. ಇದು ವೈಜ್ಞಾನಿಕವಾಗಿ ಒಪ್ಪಿಕೊಳ್ಳಬಹುದಾದ ಸೂತ್ರ ಎಂದು ಅವರು ಹೇಳಿದರು.ಹಳೆಯ ಮೈಸೂರು ಸಂಸ್ಥಾನ ಕಟ್ಟಿದ ನಮ್ಮ ಮೈಸೂರು ಮಹಾರಾಜರ ಇತಿಹಾಸವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಅಪಚಾರ ಎಸಗಲಾಗಿದೆ. ಇನ್ನು ಮುಂದಾದರೂ ಈ ಲೋಪ ಸರಿಪಡಿಸುವ ಕಾರ್ಯ ಆಗಲೇಬೇಕಿದೆ. ಮೈಸೂರು ವಿವಿ ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ನಾಮಕರಣ ಮಾಡಲು ನಮ್ಮಿಂದ ಆಗಿಲ್ಲ ಎಂದರೆ ನಾವೆಷ್ಟು ಆತ್ಮವಂಚನೆಯಿಂದ ನಡೆದುಕೊಂಡಿದ್ದೇವೆ ಎಂಬುದನ್ನು ತೋರಿಸಿಕೊಡುತ್ತದೆ ಎಂದು ಅವರು ಹೇಳಿದರು.ಮಾನಸಗಂಗೋತ್ರಿಗೆ 800 ಎಕರೆ ಧಾರೆ ಎರೆದ ರಾಜಮನೆತನವನ್ನು ನಾವೆಷ್ಟು ಸ್ಮರಿಸಿಕೊಳ್ಳುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮೈಸೂರು ವಿವಿಗೆ ನಾಲ್ವಡಿ ಹೆಸರು ಇಡಲು ತಡೆದಿರುವ ಶಕ್ತಿಯಾದರೂ ಯಾವುದು ಎಂದು ಅವರು ಪ್ರಶ್ನಿಸಿದರು.ವಿವಿಧ ಕ್ಷೇತ್ರಗಳ ಸಾಧಕರಿಗೆ ಡಿಡಿಪಿಐ ಎಸ್.ಟಿ. ಜವರೇಗೌಡ, ಕೆವಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ತಜ್ಞ ಡಾ.ಕೆ.ಸಿ. ನಂದೀಶ್ ಕುಮಾರ್, ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಿ. ಬಸಪ್ಪ, ಕರ್ನಾಟಕ ಚಲನಚಿತ್ರ ನಿರ್ಮಾಪಕ ವರುಣ ಮಹೇಶ್, ಕರ್ನಾಟಕ ತೆಂಗಿನ ನಾರಿನ ಅಭಿವೃದ್ಧಿ ನೌಕರರ ಸಂಘದ ರಾಜ್ಯಾಧ್ಯಕ್ಷ ಬಿ.ಎಚ್. ಗೋವಿಂದೇಗೌಡ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಆಲತ್ತೂರು ಜಯರಾಮ್, ಮೈಸೂರು ಚಾಮರಾಜನಗರ ಒಕ್ಕಲಿಗರ ಸಂಘದ ನಿರ್ದೇಶಕ ಎ. ಕುಮಾರ್, ಉಮ್ಮತ್ತೂರು ವೀರಗಾಸೆ ಕಲಾವಿದ ಎಂ. ಜಯಕುಮಾರ್ ಅವರಿಗೆ ಕರ್ನಾಟಕ ಸುವರ್ಣ ಸಂಭ್ರಮ ಸೇವಾ ಪ್ರಶಸ್ತಿ ಪ್ರದಾನ ಮಾಡಿದರು.ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸುಮಾರು ಐವತ್ತು ವಿದ್ಯಾರ್ಥಿನಿಯರಿಗೆ ಕೆಪಿಸಿಸಿ ಸದಸ್ಯ ಆರ್. ಜೇಸುದಾಸ್ ಪ್ರತಿಭಾ ಪುರಸ್ಕಾರ ನೀಡಿದರು.ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬ್ರಾಹ್ಮಣ ಸಮಾಜದ ಮುಖಂಡ ಕೆ. ರಘುರಾಮ್ವಾಜಪೇಯಿ, ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಸೇನಾ ಪಡೆ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ, ಪ್ರಭುಶಂಕರ್, ಪ್ರೊ. ರಮೇಶ್ ಬಾಬು, ಕೃಷ್ಣಪ್ಪ, ನಾಗರಾಜು, ಶಿವಲಿಂಗಯ್ಯ, ಸಿಂಧುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ, ನೇಹಾ, ಹನುಮಂತಯ್ಯ, ಭಾಗ್ಯಮ್ಮ, ಪ್ರಭಾಕರ್, ಲಕ್ಷ್ಮೀ, ಭಾಗ್ಯಮ್ಮ, ಬೇಬಿ ರತ್ನ, ರಘು ಅರಸ್, ಕುಮಾರ್, ಗಣೇಶ್ ಪ್ರಸಾದ್, ರವೀಶ್, ವಿಷ್ಣು, ವಿಜಯೇಂದ್ರ ಮೊದಲಾದವರು ಇದ್ದರು.