ಡಿಸೆಂಬರ್ 18ರಿಂದ ನೀನಾಸಂ ತಂಡದಿಂದ ನಾಟಕ ಪ್ರದರ್ಶನ

KannadaprabhaNewsNetwork | Published : Dec 13, 2024 12:48 AM

ಸಾರಾಂಶ

ಶಾಸಕ ಶಿವರಾಮ ಹೆಬ್ಬಾರ ನಾಟಕ ಪ್ರದರ್ಶನವನ್ನು ಉದ್ಘಾಟಿಸುವರು. ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಇತರರು ಪಾಲ್ಗೊಳ್ಳುವರು.

ಯಲ್ಲಾಪುರ: ಪ್ರತಿವರ್ಷದಂತೆ ಅಡಿಕೆ ವ್ಯಾಪಾರಸ್ಥರ ಸಂಘ, ಸಂಕಲ್ಪ ಸೇವಾ ಸಂಸ್ಥೆ ಆಶ್ರಯದಲ್ಲಿ ನೀನಾಸಂ ತಿರುಗಾಟ ತಂಡದವರಿಂದ ಡಿ. ೧೮, ೧೯ರಂದು ಗಾಂಧೀ ಕುಟೀರದಲ್ಲಿ ಮಾಲತಿ ಮಾಧವ, ಅಂಕದ ಪರದೆ ಎಂಬ ಸಾಮಾಜಿಕ, ಸಂಗೀತಮಯ ನಾಟಕ ಸಂಜೆ ೬.೩೦ಕ್ಕೆ ನಡೆಯಲಿದೆ ಎಂದು ಸಂಘಟಕರ ಪರವಾಗಿ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ತಿಳಿಸಿದರು. ಡಿ. ೧೨ರಂದು ಅಡಿಕೆ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕ್ರಿಶ ೮ನೇ ಶತಮಾನದ ಸಂಸ್ಕೃತ ನಾಟಕಕಾರ ಭವದೂತಿ ಅವರ ಪ್ರಭಾವಪೂರ್ಣ ನಾಟಕವನ್ನು ಕೆ.ವಿ. ಅಕ್ಷರ ಕನ್ನಡಕ್ಕೆ ಅನುವಾದಿಸಿ, ನಿರ್ದೇಶನ ನೀಡಿದ್ದಾರೆ. ಸಂಗೀತದಲ್ಲಿ ವಿದ್ಯಾ ಹೆಗಡೆ, ಭಾರ್ಗವ ಕೆ.ಎನ್., ಎಂ.ಎಚ್. ಗಣೇಶ ಅಲ್ಲದೇ ನೀನಾಸಂದಲ್ಲಿ ಉತ್ತಮ ತರಬೇತಿ ಪಡೆದ ಕಲಾವಿದರು ಈ ನಾಟಕಕ್ಕೆ ಜೀವಂತಿಕೆ ತುಂಬಲಿದ್ದಾರೆ ಎಂದರು.

೨ನೇ ದಿನ ಅಂಕದ ಪರದೆ ಅಭಿರಾಮ ಭಡ್ಕಮಕರ್ ರಚಿಸಿದ ನಾಟಕವನ್ನು ಜಯಂತ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಅದನ್ನು ವಿದ್ಯಾನಿಧಿ ವನಾರಸೆ(ಪ್ರಸಾದ) ನಿರ್ದೇಶಿಸಿದ್ದಾರೆ. ಇದು ಕೂಡಾ ಹಿರಿಯ ನಾಗರಿಕರ ಬದುಕು ಬವಣೆಗಳ ಸನ್ನಿವೇಶವನ್ನು ಸುಂದರವಾಗಿ ಹೆಣೆಯಲಾಗಿದೆ ಎಂದರು.

ಶಾಸಕ ಶಿವರಾಮ ಹೆಬ್ಬಾರ ನಾಟಕ ಪ್ರದರ್ಶನವನ್ನು ಉದ್ಘಾಟಿಸುವರು. ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ರಂಗಕರ್ಮಿ ಆರ್.ಎನ್. ಭಟ್ಟ ಧುಂಡಿ, ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಟಿಎಸ್ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ್, ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ ಇತರರು ಪಾಲ್ಗೊಳ್ಳುವರು.೨ನೇ ದಿನದ ನಾಟಕಕ್ಕೆ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಚಾಲನೆ ನೀಡುವರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ, ತಾಪಂ ಸಿಇಒ ರಾಜೇಶ ಧನವಾಡಕರ್, ಸಂಕಲ್ಪ ಸೇವಾ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ, ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ, ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್. ಗಾಂವ್ಕರ ಇತರರು ಪಾಲ್ಗೊಳ್ಳುವರು ಎಂದರು.ಈ ಸಂದರ್ಭದಲ್ಲಿ ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ, ಸಂಘಟಕರಾದ ಲೋಕನಾಥ ಗಾಂವ್ಕರ, ನಾರಾಯಣ ಭಟ್ಟ ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ಸಿರಿಧಾನ್ಯ, ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ

ಕಾರವಾರ: ಕೃಷಿ ಇಲಾಖೆಯಿಂದ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಡಿ. 23ರಂದು ಬೆಳಗ್ಗೆ 10 ಗಂಟೆಗೆ ಶಿರಸಿಯ ಅರಣ್ಯ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದೆ.ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲ ಸಾರ್ವಜನಿಕರು ಭಾಗವಹಿಸಿಬಹುದು. ಸಸ್ಯಹಾರ ತಿನಿಸುಗಳಿಗೆ ಮಾತ್ರ ಅವಕಾಶವಿದೆ. ಪ್ರತಿ ಸ್ಪರ್ಧಿಗೆ ಸಿರಿಧಾನ್ಯದ ಒಂದೇ ತಿನಿಸು(ಅಡುಗೆ) ಸಿಹಿ ಅಥವಾ ಖಾರ ಮಾಡಲು ಜತೆಗೆ ಒಂದು ಮರೆತುಹೋದ ಖಾದ್ಯವನ್ನು ಮಾಡಲು ಅವಕಾಶವಿದೆ.ಅರ್ಜಿಯಲ್ಲಿ ನಮೂದಿಸಿದ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿ ಸ್ಪರ್ಧೆಯಲ್ಲಿ ಪ್ರದರ್ಶಿಸಬೇಕು. ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ ವಿಜೇತರು ಜನವರಿ 2025ರಲ್ಲಿ ನಡೆಯುವ ರಾಜ್ಯ ಮಟ್ಟದ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಅಭ್ಯರ್ಥಿಗಳು ತಮ್ಮ ಭಾವಚಿತ್ರದೊಂದಿಗೆ ಹೆಸರು ವಿಳಾಸ ಮತ್ತು ತಯಾರಿಸುವ ಖಾದ್ಯಕ್ಕೆ ಬೇಕಾಗುವ ಸಾಮಗ್ರಿಗಳು, ತಯಾರಿಸಲು ಬೇಕಾಗುವ ಸಮಯ ಹಾಗೂ ತಯಾರಿಸುವ ವಿಧಾನ ಸಂಕ್ಷಿಪ್ತ ಮಾಹಿತಿಯೊಂದಿಗೆ ಅರ್ಜಿಯನ್ನು ಕಚೇರಿಯ ಇ ಮೇಲ್: ukmillets@gmail.com ಗೆ ಅಥವಾ ಅಂಚೆ ಮೂಲಕ ಜಂಟಿ ಕೃಷಿ ನಿರ್ದೇಶಕರು ಕಾರವಾರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 8277933002, 8277933064 ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article