ಕನ್ನಡಪ್ರಭ ವಾರ್ತೆ ಸೊರಬ
ವೃತ್ತಿಯಲ್ಲಿಯೆ ಶ್ರೇಷ್ಠ ವೃತ್ತಿಯಾಗಿರುವ ಶಿಕ್ಷಕರ ಸೃಜನಾತ್ಮಕತೆಗೆ ಅವಕಾಶವಿದ್ದರೆ ಇನ್ನಷ್ಟು ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಮುಖ್ಯ ಶಿಕ್ಷಕಿ ಸಾವಿತ್ರಮ್ಮ ಹೇಳಿದರು.ತಾಲೂಕಿನ ಕಾರೆಹೊಂಡ ಗ್ರಾಮದ ಸರ್ಕಾರಿ ಕಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ ಗ್ರಾಮಸ್ಥರು ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಆತ್ಮೀಯ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಇತ್ತೀಚಿನ ಆಡಳಿತಗಳ ಹಲವಾರು ಯೋಜನೆಯ ನಿರ್ವಹಣೆಯಲ್ಲಿ ಮುಖ್ಯ ಶಿಕ್ಷಕರು ಕೇವಲ ಲೆಕ್ಕಪತ್ರದಲ್ಲೇ ಮುಳುಗಿರುವ ಕಾರಣ ಮಕ್ಕಳಿಗೆ ಜ್ಞಾನ ನೀಡುವಲ್ಲಿ ವಿಫಲರಾಗಿದ್ದಾರೆ. ಶಾಲೆಯ ಭೌತಿಕ ಯೋಜನೆಯ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆಯಾದರೆ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕ ಮೌಲ್ಯವನ್ನು ಕೊಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಸುದೀರ್ಘ 26 ವರ್ಷದ ಕಾರೆಹೊಂಡ ಗ್ರಾಮದಲ್ಲಿನ ತಮ್ಮ ಸೇವೆಯನ್ನು ನೆನಪಿಸಿಕೊಂಡ ಅವರು ಸೇವಾವಧಿಯ ಸಹಕಾರಕ್ಕೆ ನೆರವಾದ ಗ್ರಾಮಸ್ಥರನ್ನು, ಶಿಕ್ಷಣ ಇಲಾಖೆಯನ್ನು ಸ್ಮರಿಸಿದರು.
ಹೊಸಬಾಳೆ ಕ್ಲಸ್ಟರ್ ಸಿಆರ್‌ಪಿ ಶಿವಕುಮಾರ್ ಮಾತನಾಡಿ, ಗ್ರಾಮಸ್ಥರ ಮತ್ತು ಶಿಕ್ಷಕರ ಸಂಬಂಧ ಅನನ್ಯವಾಗಿದ್ದರೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂಬುದನ್ನು ಗ್ರಾಮ ನಿರೂಪಿಸಿದೆ. ತಾಲೂಕಿನ ಮೂಲೆಯಲ್ಲಿರುವ ಇಂತಹ ಶಾಲೆಯಲ್ಲಿ ವೃತ್ತಿ ಸೇವೆ ನಡೆಸಿ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶಿಕ್ಷಕಿ ಸಾವಿತ್ರಮ್ಮ ಅವರ ಸೇವೆಯ ಮೌಲ್ಯವನ್ನು ಇಂದು ಇಂತಹ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಗುರುತಿಸಿದೆ ಎಂದು ಹೇಳಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚೌಡಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಭೂತಪ್ಪ, ಬೀರಪ್ಪ, ಬುದ್ಧಿವಂತ ಬೀರಪ್ಪ ಶಾಲಾ ಸಮಿತಿ ಉಪಾಧ್ಯಕ್ಷೆ ಗೌರಮ್ಮ, ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ, ಶಿಕ್ಷಕ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ರಾಜು, ಶಿಕ್ಷಕರ ಸಂಘದ ನಿರ್ದೇಶಕ ಗುಡ್ಡಪ್ಪ, ಕೇಶವ, ಆಶಾ, ರಾಜ್ಯ ಗ್ರಾಮೀಣ ಶಿಕ್ಷಕರ ಸಂಘದ ಹಾಲೇಶ್ ನವುಲೆ, ತೀರ್ಥಹಳ್ಳಿ ಶಿಕ್ಷಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆರಿಯಪ್ಪ, ಸಹ ಶಿಕ್ಷಕ ಸುರೇಶ್ ನಾಯ್ಕ್, ಸುಜಾತಾ, ಅಂಗನವಾಡಿ ಕಾರ್ಯಕರ್ತೆ ರೇಣುಕಾ, ಶಾಲಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.