ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕೋಟೆ ಶ್ರೀ ಸೀತರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಬಸವನಗುಡಿ, ಕೀರ್ತಿನಗರದ ನಾಗರಕಟ್ಟೆ, ಸೀಗೆಹಟ್ಟಿ, ರವೀಂದ್ರನಗರ, ಗಾಂಧಿನಗರ, ವಿದ್ಯಾನಗರದ ಅರಳೀಕಟ್ಟೆ, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿನ ನಾಗರಕಲ್ಲಿಗೆ ಸಾರ್ವಜನಿಕರು ಹಣ್ಣು, ಕಾಯಿ ಅರ್ಪಿಸಿ, ಹಾಲಿನ ಅಭಿಷೇಕ ಮಾಡಿದರು.
ಕೆಲವೆಡೆ ಹುತ್ತದ ಮಣ್ಣಿನಿಂದ ಮಾಡಿದ ಮಣ್ಣಿನ ನಾಗರಕ್ಕೆ ಹಾಲೆರೆದರು. ಇನ್ನು ಕೆಲ ಬಡಾವಣೆಗಳಲ್ಲಿ ಮಹಿಳೆಯರು ಭಕ್ತಿಯಿಂದ ಹುತ್ತಕ್ಕೆ ಹಾಲೆರೆದರು. ವಿವಿಧ ದೇವಾಲಯಗಳಲ್ಲಿ ಪಂಚಮಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರಾವಣ ಮಾಸದ ಪ್ರಥಮ ಹಬ್ಬ ಇದಾಗಿದ್ದು, ನಾಗರಪಂಚಮಿಯೊಂದಿಗೆ ವಿವಿಧ ಹಬ್ಬಗಳಿಗೂ ಚಾಲನೆ ದೊರೆಯುತ್ತದೆ. ನಾಗಚೌತಿಯ ನಂತರ ಬರುವ ಪಂಚಮಿಯಂದು ಹಾಲೆರೆದರೆ ಒಳಿತಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ನಾಗಾರಾಧನೆಗೆ ಹೆಚ್ಚು ಪ್ರಾಶಸ್ತ್ಯ ನೀಡುವುದರಿಂದ ನಾಗರಪಂಚಮಿ ಪ್ರಮುಖ ಹಬ್ಬವಾಗಿದೆ. ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.ನಾಗ ದೇವನ ಬಳಿ ಬರುವ ಭಕ್ತರು, ನಾಗ ದೇವನ ಮೂರ್ತಿಯನ್ನು ಸ್ವಚ್ಛಗೊಳಿಸಿ, ಅರಿಶಿನ ಕುಂಕುಮವನ್ನು ಹಚ್ಚಿ, ಹತ್ತಿಹಾರವನ್ನು ಹಾಕಿ, ಹೂವುಗಳಿಂದ ಅಲಂಕರಿಸಿ, ಬಳಿಕ ವಿವಿಧ ಹಣ್ಣು, ಎಳ್ಳುಂಡೆ ಇಟ್ಟು ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಿಸುತ್ತಾರೆ. ನಂತರ ನಾಗಪ್ಪನಿಗೆ ಹಾಲನ್ನು ಸಮರ್ಪಿಸಿದರು.
ಪೋಟೋ: 17ಎಸ್‌ಎಂಜಿಕೆಪಿ11