ನಾಡಿದ್ದು ವಿಟಿಯು ಘಟಿಕೋತ್ಸವ ಭಾಗ-2

KannadaprabhaNewsNetwork | Published : Feb 6, 2025 12:20 AM

ಸಾರಾಂಶ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವದ ಭಾಗ-2 ಅನ್ನು ಫೆ.8 ರಂದು ಬೆಳಗ್ಗೆ 11 ಗಂಟೆಗೆ ವಿಟಿಯು ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವದ ಭಾಗ-2 ಅನ್ನು ಫೆ.8 ರಂದು ಬೆಳಗ್ಗೆ 11 ಗಂಟೆಗೆ ವಿಟಿಯು ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್‌ ತಿಳಿಸಿದ್ದಾರೆ.ಈ ಕುರಿತು ಬುಧವಾರ ಪ್ರಕಟಣೆ ನೀಡಿರುವ ಅವರು, ಈ ಮೊದಲು 24ನೇ ವಾರ್ಷಿಕ ಘಟಿಕೋತ್ಸವದ ಮೊದಲ ಭಾಗ -1 ಅನ್ನು 2024ರ ಜು.18 ರಂದು ಹಮ್ಮಿಕೊಳ್ಳಲಾಗಿತ್ತು. ಈ ವೇಳ‍ೆ ಸ್ನಾತಕ (ಯು ಜಿ - ಪದವಿ) ಮತ್ತು ಸಂಶೋಧನಾ ಪದವಿಗಳನ್ನು ಪ್ರದಾನ ಮಾಡಲಾಗಿದೆ. ಆದರೆ, 2ನೇ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವದ (ಭಾಗ -2)ಲ್ಲಿ ಎಂಬಿಎ-7194 (4947 + 2247 from Autonomous Colleges), ಎಂಸಿಎ- 3784 (2648 +1136 from Autonomous Colleges), ಎಂಟೆಕ್‌-1313 (477+836 from Autonomous Colleges), ಎಂ ಆರ್ಚ್‌-83 (72 +11 from Autonomous Colleges), ಎಂ.ಪ್ಲಾನ್‌-23 ಹಾಗೂ ಸಂಶೋಧನಾ ಪದವಿಗಳಾದ ಪಿಎಚ್‌ಡಿ 425, ಎಂಎಸ್ಸಿ (Engg) ಬೈ ರಿಸರ್ಚ್ ೦೩ ಹಾಗೂ ಇಂಟಿಗ್ರೇಟೆಡ್ ಡುಯಲ್ ಡಿಗ್ರಿ 05 ಪದವಿಗಳನ್ನು ನೀಡಲಾಗುವುದು. ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪಾಲಕರು ಹಾಗೂ ಆಹ್ವಾನಿತರಿಗೆ ಫೆ.8 ರಂದು ಕೇಂದ್ರ ಬಸ್ ನಿಲ್ದಾಣ, ಬೆಳಗಾವಿಯಿಂದ ಬೆಳಗ್ಗೆ 7.00 ರಿಂದ 9.00 ಗಂಟೆಯವರೆಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯಪಾಲ, ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಇಲಾಖೆ ಸಚಿವ ಮತ್ತು ವಿವಿ ಸಮ ಕುಲಾಧಿಪತಿ ಡಾ.ಎಂ.ಸಿ.ಸುಧಾಕರ್, ಖ್ಯಾತ ವಿಜ್ಞಾನಿ, ಮಾನ್ಯ ಕುಲಪತಿಗಳು, ನೂರುಲ್ ಇಸ್ಲಾಂ ಸೆಂಟರ್ ಫಾರ್ ಹೈಯರ್ ಎಜುಕೇಶನ್, ಕನ್ಯಾಕುಮಾರಿ, ಮಾಜಿ ಮಹಾನಿರ್ದೇಶಕರು ಏರೋನಾಟಿಕಲ್ ಸಿಸ್ಟಮ್ಸ್ ಮತ್ತು ಮಾಜಿ ಯೋಜನಾ ನಿರ್ದೇಶಕರು, ಅಗ್ನಿ - ೪ ಮಿಸೈಲ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ನವ ದೆಹಲಿ ಡಾ.ಟೆಸ್ಸಿ ಥಾಮಸ್‌ ಅವರು ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡುವರು ಎಂದು ತಿಳಿಸಿದ್ದಾರೆ.ಎರಡನೇ ಘಟಿಕೋತ್ಸವ ಯಾಕೆ?:

ವಿದೇಶಿ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನ ಪಡುವ ವಿಟಿಯು ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ, ಅಡೆತಡೆಗಳು ಎದುರಿಸಬಾರದು ಎಂದು ವಿಟಿಯು ಅಂತಾರಾಷ್ಟ್ರೀಯ ಶೈಕ್ಷಣಿಕ ಕ್ಯಾಲೆಂಡರ್‌ಗೆ ಸರಿ ಹೊಂದುವಂತೆ ಪರೀಕ್ಷಾ ಫಲಿತಾಂಶವನ್ನು ನೀಡುತ್ತಿದೆ. ಅಲ್ಲದೆ, ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ಅಥವಾ ಪ್ರತಿಷ್ಠಿತ ಸಂಸ್ಥೆಗಳಿಗೆ ಹೋಗಲು ಬಯಸಿದರೆ, ಅವರಿಗೆ ಅಂತಾರಾಷ್ಟ್ರೀಯ ಮಟ್ಟದಂತೆಯೇ ಪರೀಕ್ಷಾ ಫಲಿತಾಂಶ ಬಂದಿರಬೇಕು. ಅಲ್ಲಗೆ, ಅಂಕಪಟ್ಟಿ ಕೂಡ ಕೈಸೇರಬೇಕು. ಹೀಗಾಗಿ 2ನೇ ಘಟಿಕೋತ್ಸವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ.ಅಷ್ಟೇ ಅಲ್ಲದೆ ಉನ್ನತ ವ್ಯಾಸಂಗ ಜೊತೆಗೆ ವಿದ್ಯಾರ್ಥಿಗಳಿಗೆ ಬರುವ ಔದ್ಯೋಗಿಕ ಕ್ಷೇತ್ರದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ನೀಡುವಲ್ಲಿ ವಿಳಂಬ ತಪ್ಪಿಸಲು ಇದು ಸಹಾಯಕವಾಗಿದೆ. ಈ ಕಾರಣಕ್ಕಾಗಿ ಪದವಿ ಶಿಕ್ಷಣ ಮುಗಿಸಿ ಕ್ಯಾಂಪಸ್ ಆಯ್ಕೆ ಅಥವಾ ನೇರ ಆಯ್ಕೆಯಾಗಿ ಉದ್ಯೋಗ ಸೇರುವ ಪದವೀಧರರಿಗೆ ಹಲವಾರು ಕಂಪನಿಗಳು ಮತ್ತು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಸಂಸ್ಥೆಗಳು ಉದ್ಯೋಗಕ್ಕೆ ಸೇರಿಕೊಳ್ಳುವ ಸಮಯದಲ್ಲೇ ಪದವಿ ಪ್ರಮಾಣಪತ್ರಗಳನ್ನು ಸಲ್ಲಿಸಲು ಸೂಚಿಸುತ್ತವೆ. ಆದರೆ, ಒಂದೇ ಘಟಿಕೋತ್ಸವ ಮಾಡುವುದರಿಂದ ಪದವಿ ಪ್ರಮಾಣ ಪತ್ರ ನೀಡಲು ಆಗುವುದಿಲ್ಲ. ಹೀಗಾಗಿ ವಿಶ್ವವಿದ್ಯಾಲಯವು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಘಟಿಕೋತ್ಸವಗಳನ್ನು ನಡೆಸಲು ಯೋಜಿಸಿದೆ.

Share this article