ರಸ್ತೆಯಲ್ಲಿ ನಮಾಜ್‌ ಮುಂದುವರಿದರೆ ಮಸೀದಿಗಳ ಎದುರು ಚಾಲೀಸ್‌ ಪಠಣ: ಬಜರಂಗದಳ ಎಚ್ಚರಿಕೆ

KannadaprabhaNewsNetwork |  
Published : Jun 01, 2024, 12:46 AM IST
ಹಿಂದು ಸಂಘಟನೆಗಳ ಪ್ರತಿಭಟನೆಯಲ್ಲಿ ಬಜರಂಗದಳ ಮುಖಂಡ ಪುನಿತ್‌ ಅತ್ತಾವರ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಹಿಂಪ ಮುಖಂಡ ಶರಣ್‌ ಪಂಪುವೆಲ್‌ ಮೇಲೆ ಪೊಲೀಸರು ಕೇಸು ದಾಖಲಿಸಿರುವುದು, ನಮಾಜ್‌ ಮಾಡಿದವರ ಮೇಲೆ ಹಾಕಿದ ಕೇಸಿಗೆ ‘ಬಿ’ ರಿಪೋರ್ಟ್‌ ಹಾಕಿದ ಸರ್ಕಾರದ ನಡೆಯನ್ನು ಖಂಡಿಸಿ ಶುಕ್ರವಾರ ಮಲ್ಲಿಕಟ್ಟೆ ವೃತ್ತದಲ್ಲಿ ಹಿಂದು ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ರಸ್ತೆಯಲ್ಲಿ ನಮಾಜ್ ಮುಂದುವರಿದರೆ ಜಿಲ್ಲೆಯ ಮಸೀದಿಗಳ ಎದುರು ಬಜರಂಗದಳ ಹನುಮಾನ್ ಚಾಲೀಸಾ ಪಠಿಸಿಯೇ ಸಿದ್ಧ ಎಂದು ಬಜರಂಗದಳ ವಿಭಾಗ ಸಂಯೋಜಕ್ ಪುನಿತ್‌ ಅತ್ತಾವರ ಹೇಳಿದ್ದಾರೆ.

ರಸ್ತೆಯಲ್ಲಿ ನಮಾಜ್‌ ಮಾಡಿರುವುದನ್ನು ಪ್ರಶ್ನಿಸಿದ ವಿಹಿಂಪ ಮುಖಂಡ ಶರಣ್‌ ಪಂಪುವೆಲ್‌ ಮೇಲೆ ಪೊಲೀಸರು ಕೇಸು ದಾಖಲಿಸಿರುವುದು, ನಮಾಜ್‌ ಮಾಡಿದವರ ಮೇಲೆ ಹಾಕಿದ ಕೇಸಿಗೆ ‘ಬಿ’ ರಿಪೋರ್ಟ್‌ ಹಾಕಿದ ಸರ್ಕಾರದ ನಡೆಯನ್ನು ಖಂಡಿಸಿ ಶುಕ್ರವಾರ ಮಲ್ಲಿಕಟ್ಟೆ ವೃತ್ತದಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಉಳ್ಳಾಲ ಮುಡಿಪು ಬಳಿ ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ನಡೆಸಿದ್ದಾರೆ. ಅದರಿಂದಾಗಿ ಮುಸ್ಲಿಮರಿಗೆ ಧೈರ್ಯ ಬಂದಿದೆ. ಹೀಗಾಗಿಯೇ ಕಂಕನಾಡಿಯಲ್ಲಿ ರಸ್ತೆಯಲ್ಲಿ ನಮಾಜ್ ಮಾಡಿದ್ದಾರೆ. ಆ ರಸ್ತೆಯ ಕೆಲವು ಫ್ಲ್ಯಾಟ್‌ಗಳಲ್ಲಿ ಇಂಥವರೇ ತುಂಬಿದ್ದಾರೆ. ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಯ ಬಂಧನವಾದ್ದು ಕೂಡ ಇಲ್ಲಿಯೇ. ಎನ್ಐಎ ತಂಡ ಕೂಡ ಅಲ್ಲಿ ದಾಳಿ ನಡೆಸಿ ನಿಷೇಧಿತ ಸಂಘಟನೆಯ ಓರ್ವ ಮುಖಂಡನನ್ನು ಬಂಧಿಸಿತ್ತು. ಅಲ್ಲಿ ಇಂತಹ ದೇಶ ವಿರೋಧಿಗಳೇ ಇದ್ದಾರೆ ಎಂದು ಅವರು ಹೇಳಿದರು. ರಸ್ತೆಯಲ್ಲಿ ನಮಾಜ್‌ ಮಾಡಿದರೆ ಸಾಂಕೇತಿಕ ಹನುಮಾನ್ ಚಾಲೀಸ್ ಪಠಣ ಮಾಡುತ್ತೇವೆ ಎಂದು ಶರಣ್‌ ಪಂಪ್‌ವೆಲ್‌ ಹೇಳಿದ್ದಾರೆ. ಆದರೆ ನಾವು ಮತ್ತೆ ಹೇಳ್ತೇವೆ, ಮತ್ತೆ ನಮಾಜ್ ರಸ್ತೆಯಲ್ಲಿ ನಡೆಸಿದರೆ, ಮಸೀದಿಗಳ ಎದುರು ಹನುಮಾನ್ ಚಾಲೀಸ್‌ ಪಠಣ ಮಾಡಿಯೇ ಮಾಡುತ್ತೇವೆ ಎಂದರು.

ಇನ್ನು ಮುಂದೆ ನಮ್ಮ ಕೈಯ್ಯಲ್ಲಿ ಧ್ವಜ ಇರುವುದಿಲ್ಲ, ಬದಲಾಗಿ ದಂಡ ಇರುತ್ತದೆ. ಬಾವುಟಗುಡ್ಡೆ ಮಸೀದಿ ಸೇರಿ ಹಲವೆಡೆ ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ, ಇನ್ನು ಮುಂದೆ ಇಂಥ ನಮಾಜ್‌ಗಳು ನಿಲ್ಲಬೇಕು ಎಂದರು.

ಶರಣ್‌ ಪಂಪ್‌ವೆಲ್‌ ವಿರುದ್ಧವೂ ‘ಬಿ’ ರಿಪೋರ್ಟ್‌ ಸಲ್ಲಿಸಿ:

ವಿಹಿಂಪ ಮುಖಂಡ ಜಗದೀಶ್‌ ಶೇಣವ ಮಾತನಾಡಿ, ರಾಜ್ಯ ಸರ್ಕಾರ ಮುಸ್ಲಿಂ ಓಲೈಕೆಯ ರಾಜಕಾರಣ ಮಾಡುತ್ತಿದೆ. ವಿಶ್ವಹಿಂದು ಪರಿಷತ್‌ ಮುಖಂಡ ಶರಣ್‌ ಪಂಪುವೆಲ್‌ ಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಬೇಕು ಎಂದು ಪೊಲೀಸ್‌ ಇಲಾಖೆಯನ್ನು ಆಗ್ರಹಿಸಿದರು.

ಪ್ರಕರಣ ದಾಖಲಾಗಿ ಒಂದೇ ದಿನದಲ್ಲಿ ‘ಬಿ’ ರಿಪೋರ್ಟ್‌ ಹಾಕುವುದು, ಬೆಳ್ತಂಗಡಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿ ಎರಡೇ ದಿನದಲ್ಲಿ ಚಾಜ್‌ರ್ಶೀಟ್‌ ಹಾಕುವುದು ರಾಷ್ಟ್ರದಲ್ಲೇ ನಮ್ಮ ಜಿಲ್ಲೆಯಲ್ಲಿ ಮೊದಲು. ಇಲ್ಲಿ ನ್ಯಾಯ ಕೇಳಿದವರಿಗೆ ಶಿಕ್ಷೆ, ತಪ್ಪು ಮಾಡಿದವರಿಗೆ ರಾಜ ಮರ್ಯಾದಿ ಸಿಗುವುದು ವಿಪರ್ಯಾಸ ಎಂದರು.

ಹಿಂದೂ ಸಮಾಜ ಒಟ್ಟಾಗಿದೆ. ಪೊಲೀಸ್‌ ಆಯುಕ್ತರು ಹಿಂದೂ ಸಂಘಟನೆಯ ಇತಿಹಾಸವನ್ನು ಅರಿತುಕೊಳ್ಳಬೇಕು. ಶರಣ್‌ ಪಂಪುವೆಲ್‌ ವಿರುದ್ಧ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣ ‘ಬಿ’ ರಿಪೋರ್ಟ್‌ ಸಲ್ಲಿಸಬೇಕು. ತಪ್ಪಿದಲ್ಲಿ ಹಿಂದೂ ಸಮಾಜ ಸೂಕ್ತ ರೀತಿಯಲ್ಲಿ ಉತ್ತರ ನೀಡಲು ಸಿದ್ಧವಿದೆ ಎಂದವರು ಎಚ್ಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಮಾಜಿ ಮೇಯರ್‌ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯ ಕಿರಣ್‌ ಕುಮಾರ್‌ ಕೋಡಿಕಲ್‌, ಪೊಳಲಿ ಗಿರಿಪ್ರಕಾಶ್‌ ತಂತ್ರಿ, ಹಿಂದೂ ಸಂಘಟನೆ ಮುಖಂಡರಾದ ಶಿವಾನಂದ ಮೆಂಡನ್‌, ರವಿ ಅಸೈಗೊಳಿ ಮತ್ತಿತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ