ಕಂಪ್ಲಿ: ಪಟ್ಟಣದ ಕೋಟೆ ಸೇತುವೆ ಸಮೀಪ ಸ್ವಾಗತ ನಾಮಫಲಕ ಅಳವಡಿಸುವ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಕಾರ್ಮಿಕನೊಬ್ಬ ಪ್ರಾಣ ಕಳೆದುಕೊಂಡಿರುವುದು ಪುರಸಭೆ ಆಡಳಿತದ ನಿರ್ಲಕ್ಷ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ ಜಿ.ಶ್ರೀನಿವಾಸುಲು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಮೃತ ಕಾರ್ಮಿಕನ ಕುಟುಂಬಕ್ಕೆ ತಕ್ಷಣವೇ ₹50 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ತಲಾ ₹25 ಲಕ್ಷ ಪರಿಹಾರವನ್ನು ಸರ್ಕಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರ ಸಂಸ್ಥೆಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಹಣ ಬಳಸಿ ಕೈಗೊಂಡ ಕಾಮಗಾರಿಯಲ್ಲಿ ಗುಣಮಟ್ಟ ಹಾಗೂ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಕಂಪ್ಲಿ ಪುರಸಭೆಗೆ ಕೆಎಂಎಎಸ್ ದರ್ಜೆಯ ಶಾಶ್ವತ ಮುಖ್ಯಾಧಿಕಾರಿಯನ್ನು ತಕ್ಷಣ ನೇಮಕ ಮಾಡಬೇಕು. ಆಡಳಿತ ಯಂತ್ರ ನಿರ್ಲಕ್ಷ್ಯ ಮುಂದುವರಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಸಭೆಯಲ್ಲಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಎನ್. ಮನೋಜಗೌಡ, ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಪ್ರಶಾಂತ, ನಗರ ಉಪಾಧ್ಯಕ್ಷ ಎಂ.ಭಾಸ್ಕರ, ನಗರ ಪ್ರಧಾನ ಕಾರ್ಯದರ್ಶಿಗಳಾದ ಕೆ. ಬಸವಪ್ರಭು, ಕಟ್ಟೆ ವಿಶ್ವನಾಥ ಸೇರಿದಂತೆ ಕಾರ್ಯಕರ್ತರಾದ ಸಿ.ಎ. ಚನ್ನಪ್ಪ, ಶಂಶುದ್ದೀನ್, ಮಾಜಿ ಶಾಸಕರ ಆಪ್ತ ಸಹಾಯಕ ಎಚ್.ಎಂ. ವಿರುಪಾಕ್ಷಯ್ಯಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.