ದೇಸಿ ಬೀಜೋತ್ಪಾದನೆ ಮಾಡಿ ಕೃಷಿ ಆದಾಯ ಹೆಚ್ಚಿಸಿಕೊಳ್ಳಿ

KannadaprabhaNewsNetwork |  
Published : Sep 03, 2024, 01:34 AM ISTUpdated : Sep 03, 2024, 01:35 AM IST
48 | Kannada Prabha

ಸಾರಾಂಶ

ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಪೂರಕವಾದ ದೇಸಿ ಬೀಜಗಳಿಗೆ ಬಹಳಷ್ಟು ಬೇಡಿಕೆ ಇದೆ

ಕನ್ನಡಪ್ರಭ ವಾರ್ತೆ ಮೈಸೂರು

ರೈತರು ದೇಸಿ ಬೀಜೋತ್ಪಾದನೆ ಮಾಡುವ ಮೂಲಕ ತಮ್ಮ ಕೃಷಿ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಜಿಐಜಡ್ ಜರ್ಮನಿಯ ಹಿರಿಯ ಸಲಹೆಗಾರರಾದ ನಮ್ರತಾ ಶರ್ಮ‌ ತಿಳಿಸಿದರು.

ಬಂಡಿಪಾಳ್ಯ ಎಪಿಎಂಸಿ ಆವರಣದಲ್ಲಿರುವ ದೇಸಿ ಸೀಡ್ಸ್ ಪ್ರಡ್ಯೂಸರ್ ಕಂಪನಿಯ 10ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುತ್ತಿರುವ ರೈತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೈಸರ್ಗಿಕ ಕೃಷಿ ಉತ್ತೇಜನಕ್ಕೆ ಅನೇಕ ಯೋಜನೆಗಳನ್ನು ರೂಪಿಸುವೆ. ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಪೂರಕವಾದ ದೇಸಿ ಬೀಜಗಳಿಗೆ ಬಹಳಷ್ಟು ಬೇಡಿಕೆ ಇದೆ ಎಂದರು.

ಗ್ರಾಹಕರು ವಿಷಮುಕ್ತವಾಗಿ ಬೆಳೆದ ನಾಟಿ ಹಣ್ಣು ತರಕಾರಿ ಮತ್ತು ಧಾನ್ಯಗಳ ಬಳಕೆಗೆ ಆಸಕ್ತಿ ತೋರುತ್ತಿದ್ದಾರೆ. ಗುಣಮಟ್ಟದ ಬಿತ್ತನೆ ಬೀಜಗಳ ಕೊರತೆ ಇರುವುದರಿಂದ, ರೈತ ಗುಂಪು ಮತ್ತು ಮಹಿಳಾ ಸಂಘಗಳು ಸಮುದಾಯ ಬೀಜ ಬ್ಯಾಂಕ್ ಗಳನ್ನು ಆರಂಭಿಸಿ, ದೇಸಿ ಬೀಜೋತ್ಪಾದನೆಗೆ ಉತ್ತೇಜನ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ‌ಸಮಾನ ಮನಸ್ಕ ಬೀಜ ಸಂರಕ್ಷಕರು ಜೊತೆ ಸೇರಿ ಆರಂಭಿಸಿದ ರೈತ ಕಂಪನಿ, ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಿದೆ. 2023-24ರ ಸಾಲಿನಲ್ಲಿ 1.20 ಕೋಟಿ ರೂ. ವಹಿವಾಟು ಮಾಡಿರುವ ಕಂಪನಿ 4.88 ಲಕ್ಷ ಲಾಭಗಳಿಸಿದೆ. ತನ್ನ ಲಾಭಾಂಷವನ್ನು ದೇಸಿ ಬೀಜ ಪೂರೈಸಿದ ಷೇರುದಾರ ರೈತರಿಗೆ ಈ ಸಂದರ್ಭದಲ್ಲಿ ಹಂಚಲಾಯಿತು.

7.5 ಲಕ್ಷ ಮೌಲ್ಯದ ಸಾವಯವ ಬೀಜಗಳನ್ನು ಉತ್ಪಾದಿಸಿದ ಬೆಳಗಾವಿಯ ಶಂಕರ ಲಂಗಟಿ ಮತ್ತು ಅವರ ತಂಡ 37599 ರೂ. ಬೋನಸ್ ಪಡೆದರು. ಪಿರಿಯಾಪಟ್ಟಣದ ಸಹಜ ಸಾವಯವ ಕೃಷಿಕರ ಬಳಗವು 3.51 ಲಕ್ಷ ಮೌಲ್ಯದ ಬೀಜ ಪೂರೈಸಿ, 17790 ರೂ. ಬೋನಸ್ ಪಡೆದರು. ಕೊಳ್ಳೇಗಾಲದ ಅರೇಪಾಳ್ಯದ ಲೋಕೇಶ್ 2.84 ಲಕ್ಷ ಮೌಲ್ಯದ ಬೀಜ ಪೂರೈಸಿ 14207 ರೂ. ಬೋನಸ್ ಪಡೆದರು. ಒಟ್ಟು 23 ರೈತರಿಗೆ ಬೋನಸ್ ವಿತರಿಸಲಾಯಿತು.

ರೈತರಿಗೆ ಚೆಕ್ ಗಳನ್ನು ವಿತರಿಸಿ ಮಾತನಾಡಿದ ಸಹಜ ಸಮೃದ್ಧ ಸಂಸ್ಥೆಯ ಅಧ್ಯಕ್ಷ ಎನ್.ಆರ್. ಶೆಟ್ಟಿ, ಸಹಜ ಆರ್ಗಾನಿಕ್ಸ್ ಕಾರ್ಯನಿರ್ವಹಣಾಧಿಕಾರಿ ಸೋಮೇಶ್, ದೇಸಿ ಸೀಡ್ಸ್ ಪ್ರಡ್ಯೂಸರ್ ಕಂಪನಿಯ ನಿರ್ದೇಶಕರಾದ ನರಸಿಂಹ ರೆಡ್ಡಿ, ಬೋರೇಗೌಡ, ಶ್ರೀನಿವಾಸ್, ಶ್ರೇಣಿಕ್ ರಾಜ್, ಸಂಸ್ಥಾಪಕ ಜಿ. ಕೃಷ್ಣ ಪ್ರಸಾದ್, ಸಹಜ ಸೀಡ್ಸ್ ಕಾರ್ಯನಿರ್ವಹಣಾಧಿಕಾರಿ ರವಿ ಮಾಗಲ್, ಸಿಬ್ಬಂದಿ ಕೆ.ಎಸ್. ಮಂಜು, ಸೈಯದ್ ಜಮಾಲ್, ಶಿವರುದ್ರ, ಅರ್ಪಿತಾ, ಮನು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ