ಕನ್ನಡಪ್ರಭ ವಾರ್ತೆ ಕಾರ್ಕಳ
ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ, ಸ್ವಯಂ ಸೇವಕರ ನಿಷ್ಠೆಯ ಸೇವೆಯಿಂದ ಕಳೆದ ಅನೇಕ ದಶಕಗಳಿಂದ ಆಯನೋತ್ಸವ ಉತ್ತಮವಾಗಿ ಮೂಡಿಬರುತ್ತಿದೆ. ಮಾ.25ರಂದು ನಡೆಯುವ ಸಿರಿಜಾತ್ರೆ ಆಯನೋತ್ಸವಕ್ಕೆ 1500ಕ್ಕೂ ಅಧಿಕ ಪುರುಷ ಹಾಗೂ ಮಹಿಳಾ ಸ್ವಯಂ ಸೇವಕರು ದುಡಿಯಲಿದ್ದಾರೆ. ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಸಕಲ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಸಮಿತಿಗಳು ಕಾರ್ಯಾಚರಿಸಲಿವೆ. ಅಲ್ಲದೆ ಜಾತ್ರೆಯ ಸೊಬಗು ಹೆಚ್ಚಿಸುವಲ್ಲಿ ನಾನಾ ಭಾಗದ ವಿವಿಧ ಕಲಾ ತಂಡಗಳು ಕೂಡ ಭಾಗವಹಿಸಲಿದೆ ಎಂದರು.ಇದೇ ಸಂದರ್ಭ ವಿವಿಧ ಸಮಿತಿಗಳಾದ ಪಾರ್ಕಿಂಗ್, ಊಟೋಪಚಾರ, ಸ್ವಾಗತ ಸಮಿತಿ, ಹೆಲ್ಪ್‌ಲೈನ್, ಮೆರವಣಿಗೆ ತಂಡ ಹಾಗೂ ನಾನಾ ಸಮಿತಿಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ದೇವಾಲಯದ ಪ್ರಧಾನ ಅರ್ಚಕ ಹರೀಶ್ ತಂತ್ರಿ, ವ್ಯವಸ್ಥಾಪಕ ಪಿ.ರವಿರಾಜ್ ಭಟ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ನಿವೃತ್ತ ಶಿಕ್ಷಕ ವಿ.ಕೆ.ರಾವ್ ನಂದಳಿಕೆ ಮತ್ತಿತರರು ಉಪಸ್ಥಿತರಿದ್ದರು.