ನಿಗದಿತ ಅವಧಿಯಲ್ಲಿ ಸಾಲ, ಸಹಾಯಧನ ಬಿಡುಗಡೆ ಆಗಲಿ

KannadaprabhaNewsNetwork | Published : Mar 12, 2024 2:03 AM

ಸಾರಾಂಶ

ಸರ್ಕಾರವು ಸುಸ್ಥಿರ ಅಭಿವೃದ್ಧಿ, ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಮಾರ್ಗಸೂಚಿಗಳ ಪ್ರಕಾರ ನಿಗದಿತ ಅವಧಿಯಲ್ಲಿ ಸಾಲ, ಸಹಾಯಧನ ಬಿಡುಗಡೆ ಮಾಡಬೇಕು.

ಧಾರವಾಡ:

ಸರ್ಕಾರವು ಸುಸ್ಥಿರ ಅಭಿವೃದ್ಧಿ, ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಮಾರ್ಗಸೂಚಿಗಳ ಪ್ರಕಾರ ನಿಗದಿತ ಅವಧಿಯಲ್ಲಿ ಸಾಲ, ಸಹಾಯಧನ ಬಿಡುಗಡೆ ಮಾಡಬೇಕೆಂದು ಜಿಪಂ ಸಿಇಒ ಸ್ವರೂಪ ಟಿ.ಕೆ. ಹೇಳಿದರು.

ಜಿಪಂ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ, ಜಿಲ್ಲಾ ಸಲಹಾ ಸಮಿತಿ ಸಭೆ ಜರುಗಿಸಿ ಮತ್ತು ಜಿಲ್ಲೆಯ ವಾರ್ಷಿಕ ವಿತ್ತಿಯ ಯೋಜನೆ 2024-25 ಬಿಡುಗಡೆಗೊಳಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ವಿವಿಧ ಇಲಾಖೆಗಳಿಂದ ಆಯ್ಕೆ ಮಾಡಿ, ಬ್ಯಾಂಕ್‌ಗಳಿಗೆ ಸಾಲ ಮತ್ತು ಸಹಾಯಧನ ಬಿಡುಗಡೆ ಮಾಡಲು ವಿಳಂಬವಾಗುತ್ತಿದೆ. ಈ ಕುರಿತು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಆಯಾ ಬ್ಯಾಂಕ್ ಮುಖ್ಯಸ್ಥರು ಪರಿಶೀಲಿಸಿ ತಕ್ಷಣ ಕ್ರಮ ಜರುಗಿಸಬೇಕೆಂದರು.

ಬ್ಯಾಂಕ್ ಸೌಲಭ್ಯಗಳ ಕುರಿತು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ಹೆಚ್ಚು ಪ್ರಚಾರ ನೀಡಬೇಕು. ಸರ್ಕಾರ ನೀಡಿರುವ ಆರ್ಥಿಕ ಸೌಲಭ್ಯಗಳು ಅರ್ಹರಿಗೆ ತಲುಪುವಂತೆ ಮಾಡಬೇಕು. ಜಿಲ್ಲೆಯಲ್ಲಿ ಡಿಸೆಂಬರ್ 2023ರ ಅಂತ್ಯಕ್ಕೆ ದುರ್ಬಲ ವರ್ಗದವರಿಗೆ ಒಟ್ಟು ₹ 5222.52 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಮಹಿಳೆಯರಿಗೆ ₹ 4365.10 ಕೋಟಿ ಸಾಲ ವಿತರಿಸಲಾಗಿದೆ ಹಾಗೂ ಅಲ್ಪತರಿಗೆ ₹1676 ಕೋಟಿ ಸಾಲ ವಿತರಣೆ ಆಗಿದೆ ಎಂದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್.ಜಿ. ಮಾತನಾಡಿ, ಡಿಸೆಂಬರ್ 2023ರ ಅಂತ್ಯಕ್ಕೆ ಬೆಳೆ ಸಾಲವು ₹1230.20 ಕೋಟಿ ಗುರಿ ಹೊಂದಿದ್ದು, ಡಿಸೆಂಬರ್‌ ಅಂತ್ಯಕ್ಕೆ ₹1785.65 ಸಾಧನೆ ಆಗಿದೆ. ಕೃಷಿ ಅವಧಿ ಸಾಲವು ಡಿಸೆಂಬರ್ ಅಂತ್ಯಕ್ಕೆ 1306.32 ಗುರಿ ಹೊಂದಿದ್ದು ಡಿಸೆಂಬರ್ ಅಂತ್ಯಕ್ಕೆ 1621.23 ಸಾಧನೆ ಆಗಿದೆ. ಸೂಕ್ಷ್ಮ ಸಣ್ಣ ಹಾಗೂ ಮಾಧ್ಯಮ ಉದ್ಯಮಗಳಿ ಸಾಧನೆ ಶೇ. 218ರಷ್ಟಾಗಿದೆ. ಶಿಕ್ಷಣ ಸಾಲವು ಶೇ. 77ರಷ್ಟಾಗಿದೆ. ಗೃಹ ಸಾಲವು ಶೇ. 60ರಷ್ಟು ಆಗಿದೆ. ಈ ಎಲ್ಲವು ಸೇರಿ ಒಟ್ಟು ಆದ್ಯತಾ ವಲಯದಿಂದ ಡಿಸೆಂಬರ್ ಅಂತ್ಯಕ್ಕೆ ಶೇ. 171ರಷ್ಟು ಸಾಧನೆ ಆಗಿದೆ ಎಂದ ಅವರು, ತಾಲೂಕಾವಾರು ಸಾಧನೆಯಲ್ಲಿ ಹುಬ್ಬಳ್ಳಿ ಗ್ರಾಮಾಂತರ ಪ್ರಥಮ ಸ್ಥಾನದಲ್ಲಿ, ಹುಬ್ಬಳ್ಳಿ ನಗರ ದ್ವಿತೀಯ ಹಾಗೂ ಇನ್ನುಳಿದ ನವಲಗುಂದ, ಕುಂದಗೋಳ, ಧಾರವಾಡ, ಕಲಘಟಗಿ, ಅಣ್ಣಿಗೇರಿ ಮತ್ತು ಅಳ್ಳಾವರ ತಾಲೂಕುಗಳು ಕ್ರಮವಾಗಿ ನಂತರದ ಸ್ಥಾನದಲ್ಲಿವೆ ಎಂದರು. ಜತೆಗೆ 2024-25ನೇ ಸಾಲಿನ ಗುರಿಯ ಮಾಹಿತಿ ನೀಡಿದರು.

ಬ್ಯಾಂಕ್ ಆಫ್. ಬರೋಡಾ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಮುಖ್ಯಸ್ಥ ವಡೆ ಶ್ರೀಹರಿ, ಸಬಾರ್ಡ ಡಿಡಿಎಂ ಮಯೂರ ಕಾಂಬಳೆ, ಕೆವಿಜಿಬಿ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರು ಇದ್ದರು.

Share this article