ಕನ್ನಡಪ್ರಭ ವಾರ್ತೆ ಮಂಡ್ಯ
ಜೀವ ವೈವಿಧ್ಯತೆ ಇಲ್ಲದೆ ಕೊಳೆಯದ ಮಣ್ಣಿನ ಉಳಿವು ಮತ್ತು ಜನ-ಜಾನುವಾರುಗಳ ಆರೋಗ್ಯ ಸಂರಕ್ಷಣೆಗಾಗಿ ಜಾನುವಾರುಗಳನ್ನು ಹೆಚ್ಚು ಹೆಚ್ಚಾಗಿ ಸಾಕುವಂತೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿರುವ ನಂದಿ ರಥಯಾತ್ರೆ ಮಾ.೪ರಂದು ಮಂಡ್ಯಕ್ಕೆ ಆಗಮಿಸಲಿದೆ ಎಂದು ಸಾವಯವ ಕೃಷಿಕ ಕೆ.ಜೆ.ಅನಂತರಾವ್ ತಿಳಿಸಿದರು.ಗೋ ಸೇನಾ ಗತಿವಿಧಿ ಕರ್ನಾಟಕ, ರಾಧ ಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನದ ವತಿಯಿಂದ ಆಯೋಜಿಸಿರುವ ನಂದಿ ರಥಯಾತ್ರೆ ಸಂಜೆ ೪ ಗಂಟೆಗೆ ಮಂಡ್ಯದ ಹೊಸಹಳ್ಳಿ ಸರ್ಕಲ್‌ನಿಂದ ವಿ.ವಿ.ರಸ್ತೆ ಮೂಲಕ ಜೆ.ಸಿ. ವೃತ್ತ, ಆರ್.ಪಿ.ರಸ್ತೆ, ಕೆ.ಆರ್.ರಸ್ತೆ ಮಾರ್ಗವಾಗಿ ಪೂರ್ಣಕುಂಭ, ಮಂಗಳವಾದ್ಯಗಳೊಂದಿಗೆ ಎತ್ತಿನ ಗಾಡಿ ಮೆರವಣಿಗೆ, ಜೋಡೆತ್ತಿನ ಮೆರವಣಿಗೆ ಭಜನಾ ತಂಡಗಳು, ಜಾನಪದ ಕಲಾ ತಂಡಗಳೊಂದಿಗೆ ನಗರದ ಶ್ರೀರಾಘವೇಂದ್ರ ಮಠದ ಆವರಣಕ್ಕೆ ತಲುಪಲಿದೆ ಎಂದರು.
ಶ್ರೀಮಠದ ಆವರಣದಲ್ಲಿ ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ಕ್ಷೀಣಿಸುತ್ತಿರುವ ಗೋ ಸಂತತಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ರಥಯಾತ್ರೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ರಾಸಾಯನಿಕಗಳ ಬಳಕೆಯಿಂದಾಗಿ ಕ್ಯಾನ್ಸರ್ ಆಸ್ಪತ್ರೆಗಳು ಹೆಚ್ಚುತ್ತಿವೆ. ಜೊತೆಗೆ ಬಂಜೆತನದ ಕೇಂದ್ರಗಳು ಸಹ ಹೆಚ್ಚಾಗುತ್ತಿದ್ದು, ಜನರಲ್ಲಿ ವೀರ್ಯಾಣುಗಳು, ಅಂಡಾಶಯಗಳ ಕೊರತೆಯಾಗುತ್ತಿದೆ. ಇದು ಹೀಗೆ ಮುಂದುವರಿದಲ್ಲಿ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಪ್ರತಿಯೊಬ್ಬರೂ ದೇಶೀ ತಳಿಗಳ ಜಾನುವಾರುಗಳನ್ನು ಸಾಕುವುದರೊಂದಿಗೆ ದೇಸಿ ತಳಿ ಜಾನುವಾರುಗಳ ಉತ್ಪನ್ನಗಳನ್ನು ಬಳಸುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.ಗೋ ಸೇವಾ ಸಮಿತಿಯ ರವಿ ಪಟೇಲ್ ಮಾತನಾಡಿ, ಭೂಮಿ, ದೇಸಿ ತಳಿ, ನೆಲ, ಜಲವನ್ನು ಉಳಿಸುವ ಉದ್ದೇಶದಿಂದ ಗೋಸಂಪತ್ತನ್ನು ರಕ್ಷಿಸಬೇಕಾಗಿದೆ. ನಮ್ಮ ರಾಷ್ಟ್ರದಲ್ಲಿ ೧೦೮ ದೇಸಿ ತಳಿಗಳ ಜಾನುವಾರುಗಳು ಇದ್ದವು. ಆದರೆ, ಈಗ ಕೇವಲ ೩೬ಕ್ಕೆ ಇಳಿದಿದೆ. ಇರುವಂತಹ ದೇಸಿ ತಳಿಗಳನ್ನಾದರೂ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗಿ ಹಳ್ಳಿಕಾರ್ ತಳಿಯ ಜಾನುವಾರುಗಳನ್ನು ಸಾಕುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಇವುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಬೇರೆ ಬೇರೆ ಪ್ರಾಂತ್ಯದ ಜಾನುವಾರುಗಳನ್ನು ತಂದು ಸಾಕಿದಲ್ಲಿ ಅವುಗಳಿಗೆ ಇಲ್ಲದ ಕಟ್ಟು ಕಥೆ ಹೇಳಿ ಕಸಾಯಿಖಾನೆಗೆ ಅಟ್ಟುವಂತಹ ಪರಿಸ್ಥಿತಿಯನ್ನು ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ಮಾಡುತ್ತಿವೆ. ಇದೂ ಸಹ ದೇಸಿ ತಳಿ ಅವನತಿಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ನಂದಿ ರಥಯಾತ್ರೆ ಸಮಿತಿಯ ರಾಮಕೃಷ್ಣ, ಸೋಮಶೇಖರ್, ಮಾದೇಗೌಡ, ಮಂಚೇಗೌಡ ಗೋಷ್ಠಿಯಲ್ಲಿದ್ದರು.