ಕನ್ನಡಪ್ರಭ ವಾರ್ತೆ ಬೆಂಗಳೂರು
ಸೋಮವಾರ ಅಧಿವೇಶನದ ಕಲಾಪ ಮುಂದೂಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಧ್ಯಕ್ಷ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಉಭಯ ಸದನಗಳ ಸಲಹಾ ಸಮಿತಿಗಳ ಜಂಟಿ ಸಭೆ ನಡೆಯಿತು.
ಸಭೆಯಲ್ಲಿ ಶಾಸಕರ ವೇತನ ಹೆಚ್ಚಳ ಕುರಿತು ಕೆಲ ಶಾಸಕರು ಪ್ರಸ್ತಾಪಿಸಿದರು ಎಂದು ತಿಳಿದು ಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ಗಮನಹರಿಸಲಾಗುವುದು ಎಂಬುದಾಗಿ ಅಶ್ವಾಸನೆ ನೀಡಿದರು ಎಂದು ತಿಳಿದು ಬಂದಿದೆ.ಶಾಸಕರ ವೇತನ ಹೆಚ್ಚಳ ಸಂಬಂಧ ತಜ್ಞರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸುವುದು ಸೂಕ್ತ. ಆಯೋಗದ ಮೂಲಕ ವೇತನವನ್ನು ವೈಜ್ಞಾನಿಕ ಹೆಚ್ಚಳ ಮಾಡಬೇಕು. ಇದರಿಂದ ಪ್ರತಿಬಾರಿ ಇಂತಿಷ್ಟು ಶೇಕಡವಾರು ವೇತನ ಹೆಚ್ಚಳವಾಗುವಂತೆ ನಿಗಧಿಗೊಳಿಸಲು ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾದವು ಎಂದು ಹೇಳಲಾಗಿದೆ.
ಇನ್ನುಳಿದಂತೆ ರಾಜ್ಯಪಾಲರ ಭಾಷಣದ ಮೇಲೆ ಮಂಗಳವಾರದಿಂದ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಗುರುವಾರದವರೆಗೆ ಚರ್ಚೆ ನಡೆಯಲಿದ್ದು, ಮುಂದಿನ ಸೋಮವಾರ (ಮಾ.10) ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಮಾ.11ರಂದು ವಿಧಾನಪರಿಷತ್‌ನಲ್ಲಿ ಉತ್ತರ ನೀಡಲಿದ್ದಾರೆ. ಶುಕ್ರವಾರ ಸಿದ್ದರಾಮಯ್ಯ ಬಜೆಟ್ ಮಂಡಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಇದೇ ವೇಳೆ ವಿಧೇಯಕಗಳನ್ನು ಅಂಗೀಕರಿಸಿಕೊಳ್ಳುವ ಎರಡು ದಿನ ಮುನ್ನ ಸದನದಲ್ಲಿ ಮಂಡಿಸಬೇಕು. ಸದಸ್ಯರಿಗೆ ಚರ್ಚೆಯಲ್ಲಿ ಭಾಗವಹಿಸಲು ಇದು ಸಹಕಾರಿಯಾಗಲಿದೆ. ವಿಧೇಯಕ ಮೇಲಿನ ಚರ್ಚೆಗಳು ನಡೆಯಲು ಅವಕಾಶ ನೀಡಬೇಕು. ಕೊನೇ ಗಳಿಗೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲು ಮುಂದಾದರೆ ಸದಸ್ಯರು ಚರ್ಚಿಸಲು ಸಾಧ್ಯವಿಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖಾ ಸಚಿವರು ಗಮನಹರಿಸಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.