ನಂದಿ ರಥಯಾತ್ರೆಗೆ ನಗರದಲ್ಲಿ ಭವ್ಯ ಸ್ವಾಗತ

KannadaprabhaNewsNetwork |  
Published : Mar 06, 2025, 12:33 AM IST
5ಕೆಎಂಎನ್‌ಡಿ-3ಮಂಡ್ಯಕ್ಕೆ ಆಗಮಿಸಿದ ನಂದಿ ರಥಯಾತ್ರೆಯನ್ನು ಭವ್‌ಯ ಸ್ವಾಗತದೊಂದಿಗೆ ಬರಮಾಡಿಕೊಂಡು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. | Kannada Prabha

ಸಾರಾಂಶ

ದೇಶಿ ಜಾನುವಾರುಗಳ ಸಂರಕ್ಷಣೆ ಮತ್ತು ಉಳಿವಿಗಾಗಿ ಹಮ್ಮಿಕೊಂಡಿರುವ ನಂದಿ ರಥಯಾತ್ರೆಗೆ ನಗರದಲ್ಲಿ ಭವ್ಯ ಸ್ವಾಗತ ನೀಡುವುದರೊಂದಿಗೆ ಬರಮಾಡಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ದೇಶಿ ಜಾನುವಾರುಗಳ ಸಂರಕ್ಷಣೆ ಮತ್ತು ಉಳಿವಿಗಾಗಿ ಹಮ್ಮಿಕೊಂಡಿರುವ ನಂದಿ ರಥಯಾತ್ರೆಗೆ ನಗರದಲ್ಲಿ ಭವ್ಯ ಸ್ವಾಗತ ನೀಡುವುದರೊಂದಿಗೆ ಬರಮಾಡಿಕೊಳ್ಳಲಾಯಿತು.

ಗೋಸೇನಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ವತಿಯಿಂದ ನಗರದ ಹೊಸಹಳ್ಳಿ ವೃತ್ತದಿಂದ ಆರಂಭವಾದ ನಂದಿ ರಥಯಾತ್ರೆಗೆ ಪೂರ್ಣಕುಂಭ, ಮಂಗಳವಾದ್ಯಗಳೊಂದಿಗೆ ಎತ್ತಿನ ಗಾಡಿ ಮೆರವಣಿಗೆ, ಜೋಡೆತ್ತಿನ ಮೆರವಣಿಗೆ ಭಜನಾ ತಂಡಗಳು, ಜಾನಪದ ತಂಡಗಳೊಂದಿಗೆ ನಗರದ ವಿ.ವಿ. ರಸ್ತೆ ಮೂಲಕ ಜೆ.ಸಿ. ವೃತ್ತ, ಆರ್.ಪಿ. ರಸ್ತೆ, ಕೆ.ಆರ್. ರಸ್ತೆ ಮಾರ್ಗವಾಗಿ ನಗರದ ಶ್ರೀ ರಾಘವೇಂದ್ರ ಮಠದ ಆವರಣ ತಲುಪಿತು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಸಾವಯವ ಕೃಷಿಕ ಕೆ.ಜೆ. ಅನಂತರಾವ್ ಮಾತನಾಡಿ, ಕ್ಷೀಣಿಸುತ್ತಿರುವ ಗೋ ಸಂತತಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ರಥಯಾತ್ರೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.

ಪ್ರತಿಯೊಬ್ಬರೂ ದೇಶಿ ತಳಿಗಳ ಜಾನುವಾರುಗಳನ್ನು ಸಾಕುವುದರೊಂದಿಗೆ ಉತ್ತಮ ಗೊಬ್ಬರ, ಉತ್ಪನ್ನಗಳನ್ನು ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಭೂಮಿ, ದೇಶಿ ತಳಿ, ನೆಲ, ಜಲವನ್ನು ಉಳಿಸುವ ಉದ್ದೇಶದಿಂದ ಗೋಸಂಪತ್ತನ್ನು ರಕ್ಷಿಸಬೇಕಿದೆ. ನಮ್ಮ ರಾಷ್ಟ್ರದಲ್ಲಿ 108 ದೇಶಿ ತಳಿಗಳ ಜಾನುವಾರುಗಳು ಇದ್ದವು. ಆದರೆ ಈಗ ಅವುಗಳ ಸಂಖ್ಯೆ ಕೇವಲ 36ಕ್ಕೆ ಕುಸಿದಿದೆ. ಇರುವಂತಹ ದೇಶಿ ತಳಿಗಳನ್ನಾದರೂ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಹೆಚ್ಚಾಗಿ ಹಳ್ಳಿಕಾರ್ ತಳಿಯ ಜಾನುವಾರುಗಳನ್ನು ಸಾಕುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಬೇರೆ ಬೇರೆ ಪ್ರಾಂತ್ಯದ ಜಾನುವಾರುಗಳನ್ನು ತಂದು ಸಾಕಿದಲ್ಲಿ ಅವುಗಳಿಗೆ ಇಲ್ಲದ ಕಟ್ಟು ಕಥೆ ಹೇಳಿ ಕಸಾಯಿಖಾನೆಗೆ ಅಟ್ಟುವಂತಹ ಪರಿಸ್ಥಿತಿಯನ್ನು ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ಮಾಡುತ್ತಿವೆ. ಇದೂ ಸಹ ದೇಶಿ ತಳಿ ಅವನತಿಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗೋಮಯದಿಂದ ಗಣಪತಿ, ಧೂಪ ಮಾಡುವುದು ಹಾಗೂ ಮುಂದಿನ ದಿನಗಳಲ್ಲಿ ಹಣತೆ ತಯಾರಿಸುವುದನ್ನು ಮಹಿಳೆಯರು ಮಾಡುತ್ತಾರೆ ಎಂದು ಹೇಳಿದರು. ಎತ್ತುಗಳಿಗೆ ಗೋಗ್ರಾಸ, ಅಕ್ಕಿ- ಬೆಲ್ಲ ನೀಡಲಾಯಿತು. ಅದ್ಧೂರಿಯ ಮೆರವಣಿಗೆ ನಡೆಸಲಾಯಿತು.

ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಗೋಸೇವಾ ಸಮಿತಿಯ ರವಿ ಪಟೇಲ್, ಮಾರಪ್ಪನಹಳ್ಳಿ ರವಿ, ಚೀರನಹಳ್ಳಿ ನಾಗೇಶ್, ಹನಿಯಂಬಾಡಿ ಸೋಮಣ್ಣ, ಹೊಸಹಳ್ಳಿ ಮಂಚೇಗೌಡ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ