ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಿಸಲು ಶ್ರಮಿಸಿ

KannadaprabhaNewsNetwork | Published : Jul 24, 2024 12:23 AM

ಸಾರಾಂಶ

ಕೇಂದ್ರದ ನಾಯಕರು, ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯನ್ನೂ ಗಮನಿಸುತ್ತಿದ್ದಾರೆ.

- ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಣಿಯಲ್ಲಿ ಸಲು ನಂದೀಶ್ ರೆಡ್ಡಿ ಸಲಹೆ----ಕನ್ನಡಪ್ರಭ ವಾರ್ತೆ ಮೈಸೂರು

ಜಿಪಂ, ತಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಯಾವಾಗ ಬೇಕಾದರೂ ಘೋಷಣೆಯಾಗಬಹುದು. ಹೀಗಾಗಿ, ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಕ್ಷ ಗೆಲ್ಲುವುದಕ್ಕಾಗಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಘಟಿತರಾಗಿ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಕರೆ ನೀಡಿದರು.ನಗರದ ಬೋಗಾದಿ ವೃತ್ತದಲ್ಲಿರುವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಕೇಂದ್ರದ ನಾಯಕರು, ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯನ್ನೂ ಗಮನಿಸುತ್ತಿದ್ದಾರೆ. ಪ್ರತಿ ದಿನವೂ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ದೂರವಾಣಿ ಕರೆಗಳನ್ನು ಮಾಡುವ ಮೂಲಕ ಪಕ್ಷದ ಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕೆಂಬ ನಿರೀಕ್ಷೆಯನ್ನು ಮಾಡುತ್ತಿದ್ದಾರೆ. ಹೀಗಾಗಿ ಪಕ್ಷವನ್ನು ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರ ಗುರಿ ಆಗಿರಬೇಕು. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಂತಾಗಬೇಕು ಎಂದು ಅವರು ಹೇಳಿದರು.ಆ.15 ರಿಂದ 15 ದಿನಗಳ ಕಾಲ ಕಾರ್ಯಕರ್ತರು ತಮ್ಮ ಬೂತ್ ಗಳ ವ್ಯಾಪ್ತಿಗೆ ಬರುವ ಪ್ರತಿ ಮನೆಗೂ ಹೋಗಬೇಕು. ಮತದಾರರನ್ನು ಮಾತನಾಡಿಸುವ ಮೂಲಕ ಅವರ ಮನ ಗೆಲ್ಲುವ ಪ್ರಯತ್ನವನ್ನು ಮಾಡಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಮಿತಿ ಮೀರಿದ ಭ್ರಷ್ಟಾಚಾರ, ಆಡಳಿತ ವೈಫಲ್ಯವನ್ನು ಜನರಿಗೆ ತಿಳಿಸಬೇಕು ಎಂದು ಅವರು ಸೂಚಿಸಿದರು.ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್. ರಘು ಮಾತನಾಡಿ, ವಾಲ್ಮೀಕಿ ನಿಗಮದಲ್ಲಿ ಕೇವಲ ಭ್ರಷ್ಟಾಚಾರ ಮಾಡಿ, ಕಮಿಷನ್ ದಂಧೆ ನಡೆಸಿ ಹಣ ಲೂಟಿ ಹೊಡೆದಿಲ್ಲ. ಅದರ ಬದಲಿಗೆ ಘಜನಿ ಮಹಮ್ಮದ್ ನ ರೀತಿ ನೇರವಾಗಿ 187 ಕೋಟಿ ರೂ. ಕೊಳ್ಳೆ ಹೊಡೆದಿದ್ದಾರೆ. ಎಸ್ಟಿ, ಎಸ್ಸಿಗಳ ಅಭಿವೃದ್ಧಿಗೆಂದು ಮೀಸಲಾಗಿಟ್ಟಿದ್ದ 14 ಸಾವಿರ ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ವಿವಿಧ ನಿಗಮ, ಮಂಡಳಿಗಳಿಗೆ ನೀಡಲಾಗಿದ್ದ ಅನುದಾನವನ್ನು ಕೂಡ ವಾಪಾಸ್ ಪಡೆದುಕೊಂಡಿದ್ದಾರೆ. ಹೀಗಾಗಿ, ಇವುಗಳಿಂದ ಈಗ ಜನರಿಗೆ ಯಾವುದೇ ಸೌಲಭ್ಯಗಳು ಸಿಗದಂತಾಗಿದೆ. ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಈ ವರ್ಗದ ಜನರ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ ಎಂದು ದೂರಿದರು.ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ, ಜು.24 ಮತ್ತು 25 ರಂದು ಪಕ್ಷದಿಂದ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುವುದು. ಆ.15 ರಿಂದ ಬೂತ್ ಚಲೋ ಕಾರ್ಯಕ್ರಮವನ್ನು ನಡೆಸಿ, ಪ್ರತಿಯೊಬ್ಬ ಮತದಾರರನ್ನು ಮಾತಾಡಿಸಿ, ಅವರಿಂದ ವಿಚಾರ ತಿಳಿದುಕೊಳ್ಳಬೇಕು. ಪ್ರತಿಯೊಂದು ಬೂತ್ ನಲ್ಲಿ ಪಕ್ಷದ ಸಂಘಟನಾ ಶಕ್ತಿ ಹೆಚ್ಚಾದರೆ ಮಾತ್ರ ಜಿಪಂ, ತಾಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗುತ್ತದೆ. ಪಿರಿಯಾಪಟ್ಟಣ ಹಾಗೂ ಹುಣಸೂರಿನಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಇದಕ್ಕಾಗಿ ಹೊಸ ನಾಯಕರನ್ನು ಹುಟ್ಟು ಹಾಕಬೇಕಾಗಿದೆ ಎಂದು ಹೇಳಿದರು. ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್, ಮಾಜಿ ಶಾಸಕರಾದ ಬಿ. ಹರ್ಷವರ್ಧನ್, ಎಸ್. ಬಾಲರಾಜು, ಸಿದ್ದರಾಜು, ಬಿಜೆಪಿ ಮೈಸೂರು ವಿಭಾಗ ಪ್ರಭಾರಿ ಮೈ.ವಿ. ರವಿಶಂಕರ್, ಮುಖಂಡರಾದ ಎಸ್. ಮಹದೇವಯ್ಯ, ಹೇಮಂತ್ ಕುಮಾರ್ ಗೌಡ, ಪುಟ್ಟಬುದ್ಧಿ, ಬಾಲಕೃಷ್ಣ, ಮಹೇಶ್ ಮಡವಾಡಿ, ಕಿರಣ್ ಜಯರಾಮೇಗೌಡ, ದಯಾನಂದ ಪಟೇಲ್, ಅನಿಲ್ ಥಾಮಸ್ ಮೊದಲಾದವರು ಇದ್ದರು.

Share this article