85.30 ಹೆ. ಪ್ರದೇಶದಲ್ಲಿ ನಂಜನಗೂಡು ರಸಬಾಳೆ ಉತ್ಪಾದನೆ

KannadaprabhaNewsNetwork |  
Published : Dec 12, 2025, 01:00 AM IST
46 | Kannada Prabha

ಸಾರಾಂಶ

ರಾಜ್ಯದಲ್ಲಿ ಒಟ್ಟಾರೆ 48,853 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯನ್ನು ಬೆಳೆಯಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ನಂಜನಗೂಡು ರಸಬಾಳೆ ಬೆಳೆಯುವ ರೈತರನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಬೆಳಗಾವಿ ಅಧಿವೇಶನದ ವೇಳೆ ವಿಧಾನ ಪರಿಷತ್ ಕಲಾಪದಲ್ಲಿ ಪರಿಷತ್‌ ಸದಸ್ಯ ಕೆ. ಶಿವಕುಮಾರ್‌ ಅವರು ನಂಜನಗೂಡು ರಸಬಾಳೆ ತಳಿಯನ್ನು ಎಷ್ಟು ಹೆಕ್ಟೇರ್ ಪ್ರದೇಶಗಳಲ್ಲಿ ಮತ್ತು ಯಾವ ಯಾವ ಭಾಗಗಳಲ್ಲಿ ಬೆಳೆಯಲಾಗುತ್ತಿದೆ. ಈ ತಳಿಯನ್ನು ಹೆಚ್ಚಿನದಾಗಿ ಬೆಳೆಯಲು ಸರ್ಕಾರದಿಂದ ಉತ್ತೇಜನ ನೀಡುವ ಯೋಜನೆಗಳಾವುವು? ಎಂದು ಪ್ರಶ್ನಿಸಿದರು.

ಈ ಕುರಿತ ಪ್ರಶ್ನೆಗೆ ಉತ್ತರಿಸಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ನಂಜನಗೂಡು ರಸಬಾಳೆ ತಳಿಯನ್ನು 85.30 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆ 48,853 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಗ್ರಾಂಡ್ ನೈನ್ (ಜಿ9). ನೇಂದ್ರನ್. ಏಲಕ್ಕಿಬಾಳೆ. ನಂಜನಗೂಡು ರಸಬಾಳೆ, ಕಮಲಾಪುರ ಕೆಂಪು ಬಾಳೆ ಮತ್ತು ಇತರೆ ತಳಿಗಳನ್ನು ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.

ಹಾಗೆಯೇ ಈ ತಳಿಯನ್ನು ನಂಜನಗೂಡು ತಾಲೂಕಿನ ಹನುಮನಪುರ, ಸಿಂಧುವಳ್ಳಿ, ಮಾಡ್ರಹಳ್ಳಿ, ಹೆಮ್ಮರಗಾಲ, ಹಂಪಾಪುರ, ವೀರದೇವರಪುರ, ತಾಂಡವಪುರ, ಹಗಿನವಾಳು, ಹಳೇಪುರ, ಅಂಬಳೆ, ಕೂಗಲೂರು, ಕುರಹಟ್ಟಿ, ದೇವಿರಮ್ಮನಹಳ್ಳಿ, ಸಿದ್ದಯ್ಯನಹುಂಡಿ, ಹೆಡತಲೆ, ಹಳೇಪುರ, ಚಿನ್ನಂಬಳ್ಳಿ, ಅಂಬಳೆ, ಕಾರ್ಯ, ಕಾರಾಪುರ, ಚುಂಚನಹಳ್ಳಿ. ದೇವರಸನಹಳ್ಳಿ ಮತ್ತು ಕೋಡಿನರಸೀಪುರ ಗ್ರಾಮಗಳಲ್ಲಿ ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.

ನಂಜನಗೂಡು ರಸಬಾಳೆ ತಳಿಯನ್ನು ಹೆಚ್ಚಿನದಾಗಿ ಬೆಳೆಯಲು ಸರ್ಕಾರ ಹಲವು ಉತ್ತೇಜನ ನೀಡುವ ಯೋಜನೆಗಳು ಕೈಗೊಳ್ಳುತ್ತಿದ್ದು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಭೌಗೋಳಿಕ ಗುರುತು ಬೆಳೆಯಾದ ನಂಜನಗೂಡು ರಸಬಾಳೆಯ ಸಂರಕ್ಷಣೆ, ಪ್ರದೇಶ ವಿಸ್ತರಣೆ ಮತ್ತು ಉತ್ಪಾದನೆಗೆ ಉತ್ತೇಜನ ಕಾರ್ಯಕ್ರಮದಡಿ ಪ್ರದೇಶ ವಿಸ್ತರಣೆಗಾಗಿ ಹನಿ ನೀರಾವರಿ ಸಹಿತ 0.20 ಹೆಕ್ಟೇರ್ ಪ್ರದೇಶಕ್ಕೆ ಪ.ಜಾತಿ / ಪ.ಪಂಗಡದ ರೈತರಿಗೆ ಶೇ. 90ರಂತೆ 67,312 ರೂ. ಹಾಗೂ ಇತರ ರೈತರಿಗೆ ಶೇ. 75 ರಂತೆ 56,093 ರೂ. ಸಹಾಯಧನ ನೀಡಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ತೋಟಗಾರಿಕೆ ಮಹಾ ವಿದ್ಯಾಲಯ ಹಾಗೂ ಎನ್‌.ಆರ್‌.ಸಿ ಆನ್‌ಬನಾನ, ತ್ರಿಚಿ ಅವರ ಸಹಯೋಗದೊಂದಿಗೆ ನಂಜನಗೂಡು ರಸಬಾಳೆ ತಳಿಯ ಬೇಸಾಯದ ತಾಂತ್ರಿಕತೆ ಕುರಿತು 340 ರೈತರಿಗೆ ತರಬೇತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಹಾಗೆಯೇ ನಂಜನಗೂಡು ರಸಬಾಳೆ ತಳಿಯ ಪ್ರಾತ್ಯಕ್ಷಿಕೆ ತಾಕುಗಳನ್ನು ಹುಣಸೂರು ತಾಲೂಕಿನ ವಾರಂಚಿ ಕ್ಷೇತ್ರ ಹಾಗೂ ಮೈಸೂರು ತಾಲೂಕಿನ ಯಲಚನಹಳ್ಳಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿದೆ. ನಂಜನಗೂಡು ರಸಬಾಳೆ ತಾಕುಗಳಲ್ಲಿ ಕ್ಷೇತ್ರೋತ್ಸವವನ್ನು ಕೈಗೊಂಡು ಉತ್ತಮ ಬೇಸಾಯ ಪದ್ಧತಿಯನ್ನು ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.

ವಿವಿಧ ಫಲಪುಷ್ಪ ಪ್ರದರ್ಶನದಲ್ಲಿ ನಂಜನಗೂಡು ರಸಬಾಳೆ ಪ್ರದರ್ಶನಗೊಂಡು ಬಳಕೆದಾರರಿಗೂ ಈ ಬೆಳೆ ಬಗ್ಗೆ 5. ವಿವಿಧ ಫಲ-ಪುಷ್ಪ ಪ್ರದರ್ಶನಗಳಲ್ಲಿ ಆಸಕ್ತಿ ಮೂಡಿಸಿ ಕೈಗೊಳ್ಳಲಾಗುತ್ತಿದೆ. ಮಾರುಕಟ್ಟೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ