ಪಟ್ಟಣದ ಅರಮನೆ ಮೈದಾನದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಪಂಜ ಕುಸ್ತಿ ಪಂದ್ಯಾವಳಿ
ಕನ್ನಡಪ್ರಭ ವಾರ್ತೆ ನಂಜನಗೂಡು
ಜೂ. 6 ರಂದು ಪಟ್ಟಣದಲ್ಲಿ ಆಯೋಜಿಸಲಾಗಿರುವ ಹನುಮ ಜಯಂತಿ ಪ್ರಯುಕ್ತ ನಂಜನಗೂಡು ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘದ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅರಮನೆ ಮೈದಾನದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಪಂಜ ಕುಸ್ತಿ ಪಂದ್ಯಾವಳಿ ಭರ್ಜರಿಯಾಗಿ ನಡೆಯಿತು.
ಪುರುಷರ ವಿಭಾಗದಲ್ಲಿ 50 ರಿಂದ 110 ಕೆ.ಜಿ. ವರೆಗಿನ ತೂಕದಲ್ಲಿ ಒಟ್ಟು 10 ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಿತು.
ಓವರ್ ಆಲ್ ಚಾಂಪಿಯನ್ ವಜ್ರಬಾಹು 2026 ಪ್ರಶಸ್ತಿಗಾಗಿ ಮೈಸೂರಿನ ರಾಜು ಹಾಗೂ ದಾವಣಗೆರೆಯ ಸಲಾವುದ್ದೀನ್ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಮೈಸೂರಿನ ರಾಜು ಜಯಶಾಲಿಯಾಗುವ ಮೂಲಕ ಪ್ರಶಸ್ತಿ, ಆಕರ್ಷಕ ಟ್ರೋಫಿ ಹಾಗೂ ರು. 5 ಸಾವಿರ ನಗದು ಬಹುಮಾನ ಪಡೆದುಕೊಂಡಂರು. ದ್ವಿತೀಯ ಸ್ಥಾನ ಪಡೆದ ಸಲ್ಲಾವುದ್ದೀನ್ ಟ್ರೋಫಿ ಹಾಗೂ ರು. 2,500 ನಗದು ಬಹುಮಾನ ಪಡೆದರು.
ಇನ್ನು ಮಹಿಳೆಯರ ವಿಭಾಗದಲ್ಲಿ 50 ರಿಂದ 90 ಕೆಜಿವರೆಗಿನ 8 ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಓವರ್ ಆಲ್ ಚಾಂಪಿಯನ್ ಶಕ್ತಿ ದೀಪ್ತಿ 2026 ಪ್ರಶಸ್ತಿಗಾಗಿ ಹಾಸನದ ಶಾರದಾ ಹಾಗೂ ದಾವಣಗೆರೆಯ ಚೆಲುವಿ ನಡುವೆ ತೀವ್ರ ಪೈಪೋಟಿ ನಡೆಯಿತಾದರೂ ಅಂತಿಮವಾಗಿ ಶಾರದಾ ವಿಜೇತರಾಗುವ ಮೂಲಕ ಪ್ರಶಸ್ತಿಗೆ ಭಾಜನರಾದರು. ಅವರಿಗೆ ಪ್ರಶಸ್ತಿ, ಆಕರ್ಷಕ ಟ್ರೋಫಿ ಹಾಗೂ ರು. 5 ಸಾವಿರ ನಗದು ಬಹುಮಾನ ನೀಡಲಾಯಿತು ಇನ್ನು ಪಂದ್ಯಾವಳಿಯ ರನ್ನರ್ ಅಪ್ ಚೆಲುವಿ ಅವರಿಗೆ ಟ್ರೋಫಿ ಹಾಗೂ ರು. 2,500 ನಗದು ಬಹುಮಾನ ವಿತರಿಸಲಾಯಿತು.
ಇನ್ನು ಸ್ಥಳೀಯ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ನಂಜನಗೂಡು ತಾಲೂಕು ಯುವಕರಿಗಾಗಿ ದಕ್ಷಿಣ ಕಾಶಿ ಕಪ್ ಆಯೋಜಿಸಲಾಗಿತ್ತು. 50 ರಿಂದ 110 ಕೆ.ಜಿ ತೂಕದ 10 ವಿಭಾಗಗಳಲ್ಲಿ ನಡೆದ ಪ್ರತ್ಯೇಕ ಸ್ಪರ್ಧೆಗಳ ವಿಜೇತರು ಓವರ್ ಆಲ್ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಿದರು.
ಫೈನಲ್ ನಲ್ಲಿ ನಂಜನಗೂಡಿನ ಯಶವಂತ್ ಹಾಗೂ ಶ್ರೇಯಾಂಕ್ ಪಟೇಲ್ ನಡುವೆ ನಡೆದ ಪಂದ್ಯದಲ್ಲಿ ಶ್ರೇಯಾಂಕ್ ಪಟೇಲ್ ದಕ್ಷಿಣ ಕಾಶಿ ಕಪ್ ಗೆದ್ದು ಟ್ರೋಫಿ ಹಾಗೂ ರು.3 ಸಾವಿರ ನಗದು ಬಹುಮಾನ ಪಡೆದರು. ಇನ್ನು ದ್ವಿತೀಯ ಸ್ಥಾನ ಪಡೆದ ಯಶವಂತ್ ಟ್ರೋಫಿ ಹಾಗೂ ರು. 1,500 ನಗದು ಬಹುಮಾನ ಪಡೆದರು.
ದಾವಣಗೆರೆ, ಹರಿಹರ, ಹಾಸನ,ಕೊಡಗು, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ಪಂಜ ಕುಸ್ತಿ ಪಟುಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸುವ ಮೂಲಕ ಗಮನ ಸೆಳೆದರು. ಇದಲ್ಲದೆ ವಿವಿಧ ಆಯಾ ತೂಕದ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಎಲ್ಲ ಸ್ಪರ್ಧಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಇದಕ್ಕೂ ಮೊದಲು ಪಂಜ ಕುಸ್ತಿ ಪಂದ್ಯಾವಳಿಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಂಗಸ್ವಾಮಿ, ಪೈಲ್ವಾನ್ ಸಿದ್ದರಾಜು ಹಾಗೂ ಸುಬ್ರಹ್ಮಣ್ಯ ಉದ್ಘಾಟಿಸಿದರು.
ಮೊಟ್ಟಮೊದಲ ಬಾರಿಗೆ ನಂಜನಗೂಡಿನಲ್ಲಿ ನಡೆದ ಈ ರಾಜ್ಯ ಮಟ್ಟದ ಪಂಜ ಕುಸ್ತಿ ಪಂದ್ಯಾವಳಿಗೆ ನೂರಾರು ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿ, ಶಿಳ್ಳೆ ಮತ್ತು ಚಪ್ಪಾಳೆಗಳ ಮೂಲಕ ತಮ್ಮ ಮೆಚ್ಚಿನ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.