ಕೆಪಿಸಿಸಿ ಉಪಾಧ್ಯಕ್ಷ ಹಾಜಿ ಸೈಯದ್ ಜಿಯಾವುಲ್ಲಾ ನಿಧನ

KannadaprabhaNewsNetwork |  
Published : May 20, 2026, 01:15 AM IST
19ಕೆಆರ್ ಎಂಎನ್ 3.ಜೆಪಿಜಿಸೈಯದ್ ಜಿಯಾವುಲ್ಲಾ  | Kannada Prabha

ಸಾರಾಂಶ

ರಾಮನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಹಾಗೂ ಹಿರಿಯ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ(78) ಮಂಗಳವಾರ ಬೆಳಿಗ್ಗೆ ನಿಧನರಾದರು

ರಾಮನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಹಾಗೂ ಹಿರಿಯ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ(78) ಮಂಗಳವಾರ ಬೆಳಿಗ್ಗೆ ನಿಧನರಾದರು.

ಮೃತ ಹಾಜಿ ಸೈಯದ್ ಜಿಯಾವುಲ್ಲಾರವರು ಪತ್ನಿ, ನಗರಸಭಾ ಸದಸ್ಯ ಅಕ್ಲೀಂ ಸೇರಿದಂತೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಜಿಯಾವುಲ್ಲಾ ಚಿಕಿತ್ಸೆ ಪಡೆದಿದ್ದರು. ಕೆಲ ತಿಂಗಳಿಂದ ಸಾರ್ವಜನಿಕ ಸಭೆ ಸಮಾರಂಭಗಳಿಂದ ದೂರ ಉಳಿದಿದ್ದರು.

ಬೆಂಗಳೂರಿನಲ್ಲಿರುವ ಪುತ್ರಿಯ ಮನೆಯಲ್ಲಿ ಉಳಿದುಕೊಂಡಿದ್ದ ಜಿಯಾವುಲ್ಲಾರು, ನಾಳೆಯಷ್ಟೇ ಪವಿತ್ರವಾದ ಹಜ್ ಯಾತ್ರೆ ಕೈಗೊಳ್ಳುತ್ತಿದ್ದರು. ತೀವ್ರ ಹೃದಯಾಘಾತದಿಂದಾಗಿ ಅವರು ಬೆಳಗ್ಗೆ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ರಾಮನಗರದ ತೋಪ್ ಖಾನ್ ಮೊಹಲ್ಲಾದಲ್ಲಿರುವ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿತ್ತು.

ನಗರದ ಮಸೀದ್ - ಎ - ಅನ್ಸಾರ್ ನಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಆನಂತರ ಈದ್ಗಾ ಮೈದಾನ ಮುಂಭಾಗದ ಖಬರಸ್ತಾನದಲ್ಲಿ ಸಂಜೆ ಇಸ್ಲಾಂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜಿಯಾವುಲ್ಲಾರ ಪಾರ್ಥಿವ ಶರೀರವನ್ನು ಮಣ್ಣಿನಲ್ಲಿ ಹೂಳಲಾಯಿತು.

ರಾಜಕೀಯ ಹಿನ್ನೆಲೆ :

ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಸೈಯದ್ ಜಿಯಾವುಲ್ಲಾ ಅವರು 1990ರಲ್ಲಿ ರಾಮನಗರ ಪುರಸಭೆ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರು. ಪುರಸಭೆ ಅಧ್ಯಕ್ಷರಾಗಿ, ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾಗಿ, ಕೆಎಸ್ ಐಸಿ ಅಧ್ಯಕ್ಷರಾಗಿ ತಮ್ಮದೇ ಆದ ಕೊಡುಗೆ ನೀಡಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು, ತಮ್ಮ ಸರಳತೆ, ನೇರ ನುಡಿ ಹಾಗೂ ಜನಸಾಮಾನ್ಯರೊಂದಿಗಿನ ನಿರಂತರ ಒಡನಾಟದಿಂದಾಗಿ ಅಪಾರ ಜನಬೆಂಬಲ ಗಳಿಸಿದ್ದರು.

ಹಲವು ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಜಿಯಾವುಲ್ಲಾ ಅವರು, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೀಡಿ ಕಾರ್ಮಿಕರಿಗೆ ವಸತಿ, ಕಲ್ಯಾಣ ಮಂಟಪ ಮಾತ್ರವಲ್ಲದೆ ಅವರಿಗೆ ಸವಲತ್ತುಗಳನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದ್ದರು. ಕೇವಲ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಮಾತ್ರ ಸೀಮಿತವಾಗದೆ, ಸಮಾಜದ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ತುಡಿತ ಹೊಂದಿದ್ದರು.

ಕೆಎಸ್ ಐಸಿಗೆ ಹೊಸ ರೂಪ:

ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಸೈಯ್ಯದ್ ಜಿಯಾವುಲ್ಲಾ ಅವರ ಅಧಿಕಾರಾವಧಿಯು ನಿಗಮದ ಪ್ರಗತಿಯ ದೃಷ್ಟಿಯಿಂದ ಅತ್ಯಂತ ಪ್ರಮುಖ ಘಟ್ಟವಾಗಿತ್ತು. ವಿಶ್ವವಿಖ್ಯಾತ ''''''''ಮೈಸೂರು ಸಿಲ್ಕ್'''''''' ಬ್ರ್ಯಾಂಡ್ ಅನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಜನಪ್ರಿಯಗೊಳಿಸಲು ಅವರು ಹಲವು ವಿನೂತನ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಮಾರುಕಟ್ಟೆ ವಿಸ್ತರಣೆಯ ಜೊತೆಗೆ ಗ್ರಾಹಕರನ್ನು ಸೆಳೆಯಲು ಹೊಸ ವಿನ್ಯಾಸಗಳ ರೇಷ್ಮೆ ಸೀರೆಗಳ ಉತ್ಪಾದನೆಗೆ ಒತ್ತು ನೀಡಿದ್ದರು.

ರೇಷ್ಮೆ ಬೆಳೆಗಾರರು ಹಾಗೂ ಕಾರ್ಮಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದ ಅವರು, ನೇಕಾರರ ಆರ್ಥಿಕ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಅಗತ್ಯ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಿದ್ದರು. ರೇಷ್ಮೆ ಸೀರೆಗಳ ಉತ್ಪಾದನಾ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದಂತೆ ಎಚ್ಚರವಹಿಸಿದ್ದ ಜಿಯಾವುಲ್ಲಾರವರು, ಆಧುನಿಕ ತಂತ್ರಜ್ಞಾನದ ಅಳವಡಿಕೆಗೂ ಪ್ರೋತ್ಸಾಹ ನೀಡಿದ್ದರು. ಆರ್ಥಿಕ ಶಿಸ್ತನ್ನು ಕಾಯ್ದುಕೊಳ್ಳುವ ಮೂಲಕ ನಿಗಮವನ್ನು ಲಾಭದಾಯಕದತ್ತ ತರುವಲ್ಲಿ ಅವರ ಆಡಳಿತಾತ್ಮಕ ನಿರ್ಧಾರಗಳು ಪ್ರಮುಖ ಪಾತ್ರ ವಹಿಸಿತ್ತು.

ರಾಜಕೀಯ ಅಧಿಕಾರವನ್ನು ಕೇವಲ ಸ್ಥಾನಮಾನವೆಂದು ಪರಿಗಣಿಸದೆ, ಜನಸೇವೆಗೆ ದೊರೆತ ಅವಕಾಶವೆಂದು ಜಿಯಾವುಲ್ಲಾ ದೃಢವಾಗಿ ನಂಬಿದ್ದರು. ಜನರ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುತ್ತಿದ್ದ ಅವರು, ಬಡ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆಗೂ ವೈಯಕ್ತಿಕವಾಗಿ ಹಾಗೂ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ನೆರವು ಒದಗಿಸಿದ್ದರು.

ಯಾವುದೇ ವಿವಾದಗಳಿಲ್ಲದೆ, ಸ್ವಚ್ಛ ಹಾಗೂ ಪಾರದರ್ಶಕ ಸಾರ್ವಜನಿಕ ಜೀವನವನ್ನು ನಡೆಸಿದ ಜಿಯಾವುಲ್ಲಾ ಸರಳ ಸಜ್ಜನಿಕೆಗೆ ಹೆಸರಾಗಿದ್ದವರು. ಎಲ್ಲ ರಾಜಕೀಯ ಪಕ್ಷಗಳೊಂದಿಗೂ ಉತ್ತಮ ಬಾಂಧವ್ಯ ಹೊಂದಿ ಅಜಾತಶತ್ರುವಾಗಿದ್ದರು.

19ಕೆಆರ್ ಎಂಎನ್ 3.ಜೆಪಿಜಿ

ಸೈಯದ್ ಜಿಯಾವುಲ್ಲಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇವಲ 5 ತಿಂಗಳಿಗೇ ಜಿಲ್ಲಾಧಿಕಾರಿ ವರ್ಗಾವಣೆ
ನಗರಕ್ಕೆ ಶೀಘ್ರ 5 ಹೊಸ ಮಿನಿ ಕೆಎಸ್‌ಆರ್‌ಟಿಸಿ ಬಸ್‌