ಬಂಧನದ ಬದುಕಿಗೆ ಭರವಸೆಯ ಬಾಗಿಲು ತೆರೆದ ಶಿಬಿರ

KannadaprabhaNewsNetwork |  
Published : May 20, 2026, 01:15 AM IST
36 | Kannada Prabha

ಸಾರಾಂಶ

ಶಿಕ್ಷೆ ಎನ್ನುವುದು ಅಂತಿಮವಲ್ಲ, ಪ್ರತಿಯೊಬ್ಬರ ಜೀವನದಲ್ಲೂ ಪರಿವರ್ತನೆಗೆ ಅವಕಾಶವಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜಮುಖಿ ಚಿಂತನೆ, ವ್ಯಕ್ತಿತ್ವ ವಿಕಸನ ಹಾಗೂ ಬದುಕಿನ ಮೌಲ್ಯಗಳನ್ನು ಕೈದಿಗಳ ಮನಸ್ಸಿನಲ್ಲಿ ಬಿತ್ತುವ ಉದ್ದೇಶದಿಂದ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ವಿಶೇಷವಾದ ಮನ ಪರಿವರ್ತನೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.

ಮೈಸೂರು ಕೇಂದ್ರ ಕಾರಾಗೃಹ, ರೋಟರಿ ಮೈಸೂರು ಬೃಂದಾವನ ಹಾಗೂ ರಾಮನಗರದ ಅಮೃತ ವಿಕಲಚೇತನ ಚಾರಿಟಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಶಿಬಿರ ಕಾರಾಗೃಹ ವಾಸಿಗಳಲ್ಲಿ ಹೊಸ ಬದುಕಿನ ಆಶಾಭಾವನೆ ಮೂಡಿಸುವತ್ತ ಮಹತ್ವದ ಹೆಜ್ಜೆಯಾಗಿ ಗಮನ ಸೆಳೆಯಿತು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ವಿ. ಶೇಷಮೂರ್ತಿ ಮಾತನಾಡಿ, ಶಿಕ್ಷೆ ಎನ್ನುವುದು ಅಂತಿಮವಲ್ಲ, ಪ್ರತಿಯೊಬ್ಬರ ಜೀವನದಲ್ಲೂ ಪರಿವರ್ತನೆಗೆ ಅವಕಾಶವಿದೆ. ಸರಿಯಾದ ಮಾರ್ಗದರ್ಶನ ಮತ್ತು ಪ್ರೇರಣೆ ದೊರೆತರೆ ಕಾರಾಗೃಹ ವಾಸಿಗಳು ಕೂಡ ಸಮಾಜದ ಮುಖ್ಯವಾಹಿನಿಗೆ ಮರಳಿ ಉತ್ತಮ ನಾಗರಿಕರಾಗಿ ಬದುಕಬಹುದು ಎಂದು ಅಭಿಪ್ರಾಯಪಟ್ಟರು.

ಕಾರಾಗೃಹ ಅಧೀಕ್ಷಕ ಎಂ.ಎಚ್. ಆಶೇಖಾನ್, ಸಹಾಯಕ ಅಧೀಕ್ಷಕ ಕೆ.ಎನ್. ಮೋಹನ್ ಕುಮಾರ್ ಹಾಗೂ ಎಂ. ದೀಪಾ ಶಿಬಿರದ ಮಹತ್ವವನ್ನು ವಿವರಿಸಿದರು.

ರೋಟರಿ ಮೈಸೂರು ಬೃಂದಾವನ ಅಧ್ಯಕ್ಷ ಕೆ.ವಿ. ಮಂಜುನಾಥ್ ಮಾತನಾಡಿ, ಸಮಾಜ ಸೇವೆ ಎನ್ನುವುದು ಕೇವಲ ಹೊರಜಗತ್ತಿಗಷ್ಟೇ ಸೀಮಿತವಾಗಬಾರದು. ಕಾರಾಗೃಹದಲ್ಲಿರುವವರಿಗೂ ಮಾನಸಿಕ ಧೈರ್ಯ, ಜೀವನ ಕೌಶಲ್ಯ ಹಾಗೂ ಆತ್ಮವಿಶ್ವಾಸ ತುಂಬುವ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಎಚ್.ಆರ್‌.ಕೇಶವ, ಸೋಮು ಸೇರಿದಂತೆ ಹಲವರು ಕೈದಿಗಳ ಪುನರ್ವಸತಿ ಕಾರ್ಯಗಳಲ್ಲಿ ಸಾಮಾಜಿಕ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಅಮೃತ ವಿಕಲಚೇತನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್. ನಿರಂಜನ್ ಮಾತನಾಡಿ, ಜೀವನದಲ್ಲಿ ಮಾಡಿದ ತಪ್ಪುಗಳಿಂದಲೇ ವ್ಯಕ್ತಿಯನ್ನು ಅಳೆಯಬಾರದು. ಉತ್ತಮ ಚಿಂತನೆ ಮತ್ತು ಕೌಶಲ್ಯ ತರಬೇತಿಯ ಮೂಲಕ ಹೊಸ ಬದುಕು ಕಟ್ಟಿಕೊಳ್ಳಲು ಪ್ರತಿಯೊಬ್ಬರಿಗೂ ಅವಕಾಶ ಸಿಗಬೇಕು ಎಂದು ಹೇಳಿದರು.

ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಎ. ಚೇತನ್ ರಾಮ್ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಮನಸ್ಸಿನ ಬದಲಾವಣೆ ಜೀವನದ ದೊಡ್ಡ ಸಾಧನೆ. ಕೋಪ, ನಿರಾಶೆ ಹಾಗೂ ಹತಾಶೆಯಿಂದ ಹೊರಬಂದು ಆತ್ಮವಿಶ್ವಾಸ ಮತ್ತು ಶಿಸ್ತು ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ನಿಜವಾದ ಗೆಲುವು ಸಾಧ್ಯ ಎಂದು ಪ್ರೇರಣಾದಾಯಕ ಮಾತುಗಳ ಮೂಲಕ ಕಾರಾಗೃಹ ವಾಸಿಗಳಲ್ಲಿ ಹೊಸ ಚೈತನ್ಯ ತುಂಬಿದರು.

ಸಂಪನ್ಮೂಲ ವ್ಯಕ್ತಿ ಗೋವಿಂದು ಕೌಶಲ್ಯಾಭಿವೃದ್ಧಿ, ವ್ಯಕ್ತಿತ್ವ ರೂಪಿಸಿಕೊಳ್ಳುವ ವಿಧಾನಗಳು ಹಾಗೂ ಸಮಾಜದಲ್ಲಿ ಮರುಸ್ಥಾಪನೆಗಾಗಿರುವ ಅವಕಾಶಗಳ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕಾರಾಗೃಹ ವಾಸಿಗಳು ಉತ್ಸಾಹದಿಂದ ಭಾಗವಹಿಸಿ, ತರಬೇತಿ ಶಿಬಿರದಿಂದ ಹೊಸ ಚಿಂತನೆ ಮತ್ತು ಬದುಕಿನ ದಿಕ್ಕು ದೊರೆತಿದೆ ಎಂದು ಅಭಿಪ್ರಾಯಪಟ್ಟರು. ಟ್ರಸ್ಟ್ ಕಾರ್ಯದರ್ಶಿ ಟಿ. ರಮೇಶ್, ಉಪಾಧ್ಯಕ್ಷ ಪುನೀತ್ ಕುಮಾರ್ ಕಾರ್ಯಕ್ರಮದ ಸಂಘಟನಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಿದ್ದರಾಜು ಸ್ವಾಗತಿಸಿದರು. ಎಲ್. ಚಂದ್ರಶೇಖರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇವಲ 5 ತಿಂಗಳಿಗೇ ಜಿಲ್ಲಾಧಿಕಾರಿ ವರ್ಗಾವಣೆ
ನಗರಕ್ಕೆ ಶೀಘ್ರ 5 ಹೊಸ ಮಿನಿ ಕೆಎಸ್‌ಆರ್‌ಟಿಸಿ ಬಸ್‌