ಶಿವಾನಂದ ಗೊಂಬಿ
ಇಫ್ಕೋ ಸಂಸ್ಥೆಯು ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ದ್ರವರೂಪದ ಗೊಬ್ಬರ ಕಂಡು ಹಿಡಿದಿರುವುದು ಹಳೆಯ ಮಾತು. ಅದನ್ನು ಸಿಂಪರಣೆ ಮಾಡಲು ಡ್ರೋನ್ ಬಳಕೆ ಮಾಡಲಾಗುತ್ತದೆ. ಇಫ್ಕೋ ಸಂಸ್ಥೆಯೇ ಇದಕ್ಕಾಗಿ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಒಂದು ತಿಂಗಳು ಕಾಲ ತರಬೇತಿ ನೀಡಿ ಡ್ರೋನ್ ಕೊಡಿಸಿರುವುದುಂಟು. ಆ ಯುವಕರಿಗೆ ಇದೀಗ ಬೇಡಿಕೆ ಹೆಚ್ಚಾಗಿದೆ.
ಏನಿದು?: ದ್ರವರೂಪದಲ್ಲಿರುವ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಗೊಬ್ಬರವನ್ನು ಯಂತ್ರದಿಂದಲೇ ಸಿಂಪರಣೆ ಮಾಡಬೇಕು. ಇದು ನೇರವಾಗಿ ಬೆಳೆಯ ಎಲೆಗಳ ಮೂಲಕ ಕಾಂಡಕ್ಕೆ ಹೋಗುತ್ತದೆ. ಇದರಿಂದ ಇಳುವರಿ ಹೆಚ್ಚಾಗುತ್ತದೆ. 2021ರಲ್ಲೇ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದರೂ ರೈತರಿಂದ ಪ್ರಾರಂಭದಲ್ಲಿ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಇಫ್ಕೋ ಸಂಸ್ಥೆಯೇ ಗ್ರಾಮೀಣ ನಿರುದ್ಯೋಗ ಯುವಕರಿಗೆ ಡ್ರೋನ್ ತರಬೇತಿ ನೀಡಿತು.ಡ್ರೋನ್ ಮೂಲಕ ನ್ಯಾನೋ ಯೂರಿಯಾ ಹಾಗೂ ಡಿಎಪಿ ಯಾವ ರೀತಿ ಸಿಂಪರಣೆ ಮಾಡಬೇಕು ಎಂಬುದನ್ನು ಒಂದು ತಿಂಗಳ ಕಾಲ ಮೈಸೂರು ಹಾಗೂ ಬೆಂಗಳೂರಲ್ಲಿ ತರಬೇತಿ ನೀಡಿತು. ಜತೆಗೆ ₹1 ಲಕ್ಷ ಠೇವಣಿ ಇಟ್ಟುಕೊಂಡು ಯುವಕರಿಗೆ 5 ವರ್ಷಗಳ ಕಾಲ ಡ್ರೋನ್‌ನ್ನು ತಾನೆ ಕೊಡಿಸಿತು. ಒಂದು ಎಕರೆಗೆ ₹300-350ರಂತೆ ದರ ನಿಗದಿಪಡಿಸಿ ಈ ಯುವಕರು ರೈತರ ಹೊಲಗಳಿಗೆ ದ್ರವರೂಪದ ಗೊಬ್ಬರವನ್ನು ಸಿಂಪರಣೆ ಮಾಡುತ್ತಾರೆ. ಹೀಗೆ ನಿಗದಿಪಡಿಸಿದ ದರ ಆ ಯುವಕರಿಗೆ ಪಡೆದುಕೊಳ್ಳುತ್ತಾರೆ. ಇನ್ನು ಡ್ರೋನ್ ಕ್ಯಾಮೆರಾ ಏನಾದರೂ ರಿಪೇರಿಗೆ ಬಂದರೆ ಇಫ್ಕೋ ಕಂಪನಿಯೇ ಮಾಡಿಕೊಡುತ್ತದೆ. 5 ವರ್ಷದ ಬಳಿಕ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸದೇ ಸರಿಯಾಗಿ ಆ ಯುವಕ ಕೆಲಸ ಮಾಡಿದ್ದರೆ ಡ್ರೋನ್ ಕ್ಯಾಮೆರಾವೂ ಆತನಿಗೆ ನೀಡಲಾಗುತ್ತದೆ. ಜತೆಗೆ ಆ ಯುವಕ ಠೇವಣಿ ಇಟ್ಟಿದ್ದ ₹1 ಲಕ್ಷ ಹಣವನ್ನೂ ಮರಳಿ ನೀಡಲಾಗುತ್ತದೆ.
ರಾಜ್ಯದಲ್ಲಿ 125 ಜನ ಯುವಕರು ಈ ರೀತಿ ಸಂಸ್ಥೆಯಿಂದ ತರಬೇತಿ ಪಡೆದು ಡ್ರೋನ್ ಕ್ಯಾಮೆರಾ ಪಡೆದಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 6 ಜನ ಇಂಥ ನಿರುದ್ಯೋಗಿ ಯುವಕರು ಡ್ರೋನ್ ಇಟ್ಟುಕೊಂಡಿದ್ದಾರೆ ಎಂದು ಇಫ್ಕೋ ಸಂಸ್ಥೆಯ ಕೃಷಿ ಸೇವಾ ಅಧಿಕಾರಿ ಅಭಿಷೇಕ ಕುಲಕರ್ಣಿ ತಿಳಿಸುತ್ತಾರೆ.ಈ ವರ್ಷ ಹೆಚ್ಚು: ಕಳೆದ ವರ್ಷ ನ್ಯಾನೋ ಯೂರಿಯಾಕ್ಕೆ ಅಷ್ಟೊಂದು ಬೇಡಿಕೆ ಇರಲಿಲ್ಲ. ಇದ್ದರೂ ಅಲ್ಲೊಬ್ಬರು ಇಲ್ಲೊಬ್ಬರು ಪ್ರಗತಿ ಪರ ರೈತರು ಮಾತ್ರ ಸಿಂಪರಣೆ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ಮಾರುಕಟ್ಟೆಯಲ್ಲಿ ಯೂರಿಯಾ ಕೊರತೆಯಾಗಿರುವುದರಿಂದ ನ್ಯಾನೋ ಯೂರಿಯಾ ಸಿಂಪಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನಮಗೂ ಬೇಡಿಕೆ ಬಂದಿದೆ ಎಂದು ತಿಳಿಸುತ್ತಾರೆ ಡ್ರೋನ್ ಕ್ಯಾಮೆರಾ ಇಟ್ಟುಕೊಂಡಿರುವ ಯುವಕ.
ಒಟ್ಟಿನಲ್ಲಿ ಇಫ್ಕೋ ಸಂಸ್ಥೆಯಿಂದ ತರಬೇತಿ ಪಡೆದು ಡ್ರೋನ್ ಕ್ಯಾಮೆರಾ ಪಡೆದವರಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಂತಾಗಿರುವುದಂತೂ ಸತ್ಯ.ನಮೋ ಡ್ರೋನ್ ದೀದಿ: ಈ ಮಧ್ಯೆ ಡ್ರೋನ್ ಮೂಲಕ ದ್ರವರೂಪದ ಗೊಬ್ಬರ ಸಿಂಪರಣೆಗೆ ಕೇಂದ್ರ ಸರ್ಕಾರ ನಮೋ ಡ್ರೋನ್ ದೀದಿ ಎಂಬ ಯೋಜನೆಯನ್ನು ಜಾರಿಗೊಳಿಸಿತ್ತು. ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೇಂದ್ರ ಸರ್ಕಾರ ಇದನ್ನು ನೀಡುತ್ತಿತ್ತು. ಗದಗ ಹಾಗೂ ಬೆಳಗಾವಿಯಲ್ಲಿ ಒಂದೆರಡು ಮಹಿಳಾ ಸ್ವಸಹಾಯ ಗುಂಪುಗಳು ಈ ಯೊಜನೆಯಡಿ ಡ್ರೋನ್ ಪಡೆದಿವೆ. ಅವು ಕೂಡ ರೈತರಿಗೆ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಗೊಬ್ಬರ ಸಿಂಪರಣೆ ಮಾಡಿಕೊಡುತ್ತಿದ್ದು, ಮಹಿಳಾ ಗುಂಪುಗಳಿಗೆ ಆದಾಯದ ಮೂಲವಾದಂತಾಗಿದೆ.
ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಎರಡನ್ನು ಮಿಶ್ರಣ ಮಾಡಿಯೂ ಅಥವಾ ಬರೀ ಯೂರಿಯಾ ಮಾತ್ರ ಸಿಂಪರಣೆಯನ್ನು ಮಾಡುತ್ತೇವೆ. ಏಳು ನಿಮಿಷಕ್ಕೆ ಒಂದು ಎಕರೆ ಸಿಂಪರಣೆ ಮಾಡಬಹುದಾಗಿದೆ. ಒಂದು ಎಕರೆಗೆ ₹350 ದರ ನಿಗದಿಪಡಿಸಲಾಗಿದೆ. ಪ್ರತಿದಿನ ಕನಿಷ್ಠವೆಂದರೂ 40 ಎಕರೆಯಷ್ಟು ಹೊಲವನ್ನು ಸಿಂಪಡಿಸಬಹುದಾಗಿದೆ ಎಂದು ಡ್ರೋನ್ ಕ್ಯಾಮೆರಾ ಇಟ್ಟುಕೊಂಡಿರುವ ಯುವಕ ದರ್ಶನ ಬಂಡಿವಾಡ ಹೇಳಿದರು.