ನಾಪೋಕ್ಲು: ಟ್ರಾಫಿಕ್ ಜಾಮ್ ಗೆ ಪ್ರಯಾಣಿಕರು ಹೈರಾಣು

KannadaprabhaNewsNetwork |  
Published : Jun 07, 2025, 01:40 AM IST
ನಾಪೋಕ್ಲುವಿನಲ್ಲಿ ಶುಕ್ರವಾರ ಸಂಜೆ ಕಂಡುಬಂದ ಟ್ರಾಫಿಕ್ ಜಾಮ್ ಚಿತ್ರಣ. | Kannada Prabha

ಸಾರಾಂಶ

ಶಾಲೆ ಬಿಡುವ ವೇಳೆಗೆ ಇಲ್ಲಿ ಶಾಲಾ ವಾಹನಗಳು ಸೇರಿದಂತೆ ವಾಹನಗಳ ದಟ್ಟಣೆ ಅಧಿಕವಾಗುತ್ತದೆ. ಇಕ್ಕಟ್ಟಾದ ರಸ್ತೆಯ ಎರಡು ಬದಿಗಳಲ್ಲಿ ವಾಹನ ಮಾಲೀಕರು ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ ಸಮಸ್ಯೆ ಉದ್ಭವಿಸುತ್ತಿದೆ. ಅತ್ತ ಪೊಲೀಸ್ ಇಲಾಖೆ ವಾಹನಗಳ ದಟ್ಟಣೆ ನಿಯಂತ್ರಿಸುತ್ತಿಲ್ಲ. ವಾಹನ ಮಾಲೀಕರು ಸಹಕರಿಸುತ್ತಿಲ್ಲ ಎಂಬುದು ಜನಸಾಮಾನ್ಯರ ದೂರು.

ಕಿರಿದಾದ ರಸ್ತೆಯ ಇಕ್ಕೆಲಗಳಲ್ಲಿ ವಾಹನ ಪಾರ್ಕ್‌ । ಸಂಚಾರಕ್ಕೆ ಸಂಚಕಾರ

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಅತ್ತ ನೋಡಿದರೂ ವಾಹನಗಳು.. ಇತ್ತ ನೋಡಿದರೂ ವಾಹನಗಳು.. ರಸ್ತೆ ಇಕ್ಕಲೆಗಳಲ್ಲಿಯೂ ವಾಹನಗಳು ಸಾಲು ಸಾಲು.. ರಸ್ತೆ ದಾಟಲು ಅಸಾಧ್ಯ, ಜನಸಾಮಾನ್ಯರು ನಡೆದಾಡಲು ಭಯಪಡುವ ಪರಿಸ್ಥಿತಿ, ಶಾಲಾ ಮಕ್ಕಳಂತೂ ಕಂಗಾಲು.. ಇದು ನಾಪೋಕ್ಲುವಿನಲ್ಲಿ ಶುಕ್ರವಾರ ಸಂಜೆ ಕಂಡುಬಂದ ಟ್ರಾಫಿಕ್ ಜಾಮ್ ಚಿತ್ರಣ.

ಶಾಲೆ ಬಿಡುವ ವೇಳೆಗೆ ಇಲ್ಲಿ ಶಾಲಾ ವಾಹನಗಳು ಸೇರಿದಂತೆ ವಾಹನಗಳ ದಟ್ಟಣೆ ಅಧಿಕವಾಗುತ್ತದೆ. ಇಕ್ಕಟ್ಟಾದ ರಸ್ತೆಯ ಎರಡು ಬದಿಗಳಲ್ಲಿ ವಾಹನ ಮಾಲೀಕರು ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ ಸಮಸ್ಯೆ ಉದ್ಭವಿಸುತ್ತಿದೆ. ಅತ್ತ ಪೊಲೀಸ್ ಇಲಾಖೆ ವಾಹನಗಳ ದಟ್ಟಣೆ ನಿಯಂತ್ರಿಸುತ್ತಿಲ್ಲ. ವಾಹನ ಮಾಲೀಕರು ಸಹಕರಿಸುತ್ತಿಲ್ಲ ಎಂಬುದು ಜನಸಾಮಾನ್ಯರ ದೂರು.

ಶುಕ್ರವಾರ ಸಂಜೆ 4 ಗಂಟೆಗೆ ಪಟ್ಟಣದಲ್ಲಿ ವಾಹನ ದಟ್ಟಣೆ ಕಂಡುಬಂದು ಅರ್ಧ ಗಂಟೆಗೂ ಅಧಿಕ ವಾಹನಗಳ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಾಕಿಕೊಂಡವು. ಬಕ್ರೀದ್ ಹಬ್ಬದ ಹಿಂದಿನ ದಿನ ಗ್ರಾಮಾಂತರ ಭಾಗಗಳಿಂದ ಖರೀದಿಗೆಂದು ಬಂದವರಿಂದ ವಾಹನದಟ್ಟಣೆ ಇನ್ನಷ್ಟು ಹೆಚ್ಚಾಯಿತು. ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವವರು ಇರಲಿಲ್ಲ. ಇನ್ನೂ ಬಸ್‌ ನಿಲ್ದಾಣದಲ್ಲಿ ಒಂದೆರಡು ಬಸ್‌ಗಳು ಬಂದು ನಿಂತರಂತು ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ಇದಕ್ಕೆ ಕಾರಣ ನಾಪೋಕ್ಲು ಪಟ್ಟಣದಲ್ಲಿ ಕಿರಿದಾದ ರಸ್ತೆ ಹಾಗೂ ವ್ಯವಸ್ಥಿತ ಬಸ್‌ ನಿಲ್ದಾಣ ಇಲ್ಲದಿರುವುದು. ಮೂರು ರಸ್ತೆಗಳು ಕೂಡುವ ಸ್ಥಳವೇ ಬಸ್‌ ನಿಲ್ದಾಣವಾಗಿದ್ದು, ಇಲ್ಲಿ ಜನಸಾಮಾನ್ಯರು ಬಸ್‌ಗಾಗಿ ಪರದಾಡುವ ಪರಿಸ್ಥಿತಿ ಸಾಮಾನ್ಯ. ಪಂಚಾಯಿತಿ ಹಾಗೂ ಪೊಲೀಸರು ಕೆಲವು ನಿಯಮಗಳನ್ನು ಜಾರಿಗೊಳಿಸಿದ್ದರೂ ಇಲ್ಲಿ ಯಾವುದೇ ಪಾಲನೆಯಾಗುತ್ತಿಲ್ಲ. ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣವಾದ ನಾಪೋಕ್ಲುವಿಗೆ ಬಸ್ಸು ನಿಲ್ದಾಣಕ್ಕಾಗಿ ಹಲವು ವರ್ಷಗಳಿಂದ ಬೇಡಿಕೆ ಇದೆ. ನಿಲ್ದಾಣಕ್ಕಾಗಿ ಇಲ್ಲಿಯ ಸಂತೆ ಮೈದಾನದಲ್ಲಿ ಸೂಕ್ತ ಸ್ಥಳ ಗುರುತು ಮಾಡಿದ್ದರು ಸ್ಪಂದಿಸುವವರೇ ಇಲ್ಲದ್ದರಿಂದ ಸಮಸ್ಯೆ ಬಿಗಡಾಯಿಸಿದೆ.

ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಏರುತ್ತಿದ್ದು ನಿಲುಗಡೆಗೆ ಸ್ಥಳವಿಲ್ಲದೆ ವಾಹನ ಮಾಲೀಕರು ಚುನಾಯಿತ ಪ್ರತಿನಿಧಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಗರಿಕರ ಹಲವು ವರ್ಷದ ಬೇಡಿಕೆಯಂತೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಸ್‌ ನಿಲ್ದಾಣ ಹಾಗೂ ಪಟ್ಟಣದಲ್ಲಿ ಕಾನೂನು ಬದ್ಧವಾಗಿ ರಸ್ತೆಯನ್ನು ಅಗಲೀಕರಣ ಮಾಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.

----------------------

ಪಟ್ಟಣದ ರಸ್ತೆ ಅಗಲೀಕರಣದ ಬಗ್ಗೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಮೇಲಾಧಿಕಾರಿಗಳಿಗೆ ನೋಟಿಸ್ ಮಾಡಿದರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬಸ್ ನಿಲ್ದಾಣ ನಿರ್ಮಾಣಕ್ಕೆ ಜಾಗ ಇತ್ತೀಚೆಗೆ ಗ್ರಾಮ ಪಂಚಾಯತಿ ಹೆಸರಿಗೆ ಆಗಿದ್ದು ಪ್ರಗತಿಯಲ್ಲಿದೆ. ಈ ಬಗ್ಗೆ ಒಂದೆರಡು ದಿನದಲ್ಲಿ ಶಾಸಕ ರಾಗಿರುವ ಎಸ್ ಪೋನ್ನಣ್ಣನವರನ್ನು ಪಂಚಾಯತಿ ವತಿಯಿಂದ ಭೇಟಿ ಮಾಡಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಮನವಿ ಮಾಡಲಾಗುವುದು.

। ವನಜಾಕ್ಷಿ ರೇಣುಕೇಶ್, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ

----------------------------ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ವಾಹನ ದಟ್ಟನೆ ಅಧಿಕವಾಗಿ ಸಮಸ್ಯೆಯಾಗಿದ್ದು, ನಾನೇ ಸ್ಥಳದಲ್ಲಿ ಇದ್ದು ಸೂಕ್ತ ಕ್ರಮ ಕೈಗೊಂಡಿದ್ದೇನೆ. ರಸ್ತೆ ಕಿರಿದಾಗಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಿಬ್ಬಂದಿ ಕೊರತೆಯೂ ಇದ್ದು ಮುಂದಿನ ದಿನದಲ್ಲಿ ಯಾವುದೇ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.। ಮಂಜುನಾಥ್, ಪೊಲೀಸ್ ಠಾಣಾಧಿಕಾರಿ ನಾಪೋಕ್ಲು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''