ಕನ್ನಡಪ್ರಭ ವಾರ್ತೆ ನಾಪೋಕ್ಲು
ವೀರಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್ ತಿಮ್ಮಯ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪಿ ಗಡಿಪಾರಿಗೆ ಆಗ್ರಹಿಸಿ ಕೊಡಗು ಸರ್ವ ಜನಾಂಗಗಳ ಒಕ್ಕೂಟದ ವತಿಯಿಂದ ಗುರುವಾರ ಕರೆಯಲಾಗಿದ್ದ ಕೊಡಗು ಬಂದ್‌ಗೆ ನಾಪೋಕ್ಲಿನಲ್ಲಿ ಉತ್ತಮ ಸ್ಪಂದನೆ ದೊರೆತಿದೆ.ನಾಪೋಕ್ಲು ಕೊಡವ ಸಮಾಜ, ಚೇಂಬರ್ ಆಫ್ ಕಾಮರ್ಸ್, ಆಟೋ ಚಾಲಕರ ಸಂಘ, ಬೆಂಬಲ ಸೂಚಿಸಿದ ಹಿನ್ನೆಲೆ ನಾಪೋಕ್ಲು ಪಟ್ಟಣ ಬಿಕೋ ಎನ್ನುತ್ತಿತ್ತು. ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಬೇಂಬಲ ವ್ಯಕ್ತಪಡಿಸಿದರು. ಖಾಸಗಿ ವಾಹನ, ಸರ್ಕಾರಿ ಬಸ್‌ಗಳು ಹೊರತುಪಡಿಸಿ, ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದವು. ಜನರ ಸಂಚಾರ ವಿರಳವಾಗಿತ್ತು. ಬಂದ್ ಹಿನ್ನೆಲೆ ನಾಪೋಕ್ಲು ಪೊಲೀಸರಿಂದ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪಟ್ಟಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಆರೋಪಿಯ ಗಡಿಪಾರಿಗೆ ಆಗ್ರಹಿಸಿದರು. ಆರೋಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಮಾತನಾಡಿ, ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಮಾನ ಮಾಡಿದ ವ್ಯಕ್ತಿಯ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಆರೋಪಿಗೆ ನಕ್ಸಲರ ನಂಟು ಇರುವ ಬಗ್ಗೆ ಶಂಕೆ ಇದೆ. ಭಾರತ ಕಂಡ ಅಪ್ರತಿಮ ಸೇನಾಧಿಕಾರಿಗಳಾದ ಕೊಡಗಿನ ಹೆಮ್ಮೆಯ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ವಕೀಲ ವೃತ್ತಿ ನಡೆಸುತ್ತಿರುವ ವಿದ್ಯಾಧರ್ ಎಂಬಾತನನ್ನು ತಕ್ಷಣ ಗಡಿಪಾರು ಮಾಡಬೇಕು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಶಿಸ್ತು, ದಕ್ಷತೆ ಮತ್ತು ದೇಶಭಕ್ತಿಯ ಇಬ್ಬರು ವೀರಸೇನಾನಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ದೇಶದ ಜನರಿಗೆ ಮಾಡಿರುವ ದೊಡ್ಡ ಅಪಮಾನವಾಗಿದೆ. ಆದ್ದರಿಂದ ತಪ್ಪು ಮಾಡಿದ ಕಿಡಿಗೇಡಿಯ ಮೇಲೆ ಯಾವುದೇ ರೀತಿಯಲ್ಲಿ ಅನುಕಂಪ ತೋರದೆ ದೇಶದ್ರೋಹದ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಗಡಿಪಾರು ಮಾಡಲು ಗೃಹ ಇಲಾಖೆ ಮುಂದಾಗಬೇಕು ಎಂದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಂಡಿರ ನಾಣಯ್ಯ ಮಾತನಾಡಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ವಿರುದ್ಧ ಅವಮಾನಕರ ಹೇಳಿಕೆ ನೀಡಿದವರನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಗಡಿಪಾರು ಮಾಡಬೇಕು.ಅವಮಾನಕೆ ಹೇಳಿಕೆ ಮೂಲಕ ಒಂದು ಜನಾಂಗವನ್ನು ನಿಂದಿಸುವುದು ಸರಿಯಲ್ಲ. ಸೂಕ್ತ ತನಿಖೆ ನಡೆಸಬೇಕು ತಪ್ಪಿದಲ್ಲಿ ಮುಂದಿನ ಹೋರಾಟ ಮಾಡಬೇಕಾಗುತ್ತದೆ ಎಂದರು.ಪ್ರಮುಖರಾದ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಎಂ..ಎ.ಮನ್ಸೂರ್ ಆಲಿ ಬಿದ್ದಾಟಂಡ ತಮ್ಮಯ್ಯ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದರು .
ಕುಲ್ಲೇಟಿರ ಅಜಿತ್ ನಾಣಯ್ಯ, ಮಾಚೆಟ್ಟಿರ ಕುಶು ಕುಶಾಲಪ್ಪ, ಶಿವಚಾಳಿಯಂಡ ಜಗದೀಶ್, ಚೇನಂಡ ಗಿರೀಶ್, ನಾಯಕಂಡ ಕುಂಞಣ್ಣ, ಕುಟ್ಟಂಚೆಟ್ಟೀರ ಶ್ಯಾಮ್, ಕೇಟೋಳಿರ ಡಾಲಿ ಅಚ್ಚಪ್ಪ, ಅಜೀಜ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸುಕುಮಾರ್, ಪದಾಧಿಕಾರಿಗಳು, ಕಂಗಾಂಡ ಜಾಲಿ ಪೂವಪ್ಪ, ಅಮ್ಮಂಡ ಮನು ಮಹೇಶ್, ಕುಂಡ್ಯೋಂಳಂಡ ಬೋಪಣ್ಣ, ನಿಷಾ ಮೇದಪ್ಪ, ನಾಯಕಂಡ ಜೋಬಿ, ಬಾಳೆಯಡ ಮೇದಪ್ಪ ಮತ್ತಿತರರು ಪಾಲ್ಗೊಂಡಿದ್ದರು.