ನಾರದಗಡ್ಡೆ ಮಠ ವಿವಾದ: ಸಭೆ ಬಹಿಷ್ಕರಿಸಿದ ಭಕ್ತರು

KannadaprabhaNewsNetwork | Published : Sep 23, 2024 1:27 AM

ಸಾರಾಂಶ

ರಾಯಚೂರು ನಾರದಗಡ್ಡೆ ಮಠದ ವಿವಾದ ಕುರಿತು ಯಾದಗಿರಿ ಡಿಸಿ ಕಚೇರಿಯಲ್ಲಿ ಭಾನುವಾರ ನಡೆದ ಸಭೆಗೆ ಆಗಮಿಸುವ ಭಕ್ತರನ್ನು ಮೆಟಲ್‌ ಡಿಟೆಕ್ಟರ್‌ ಮೂಲಕ ಪರಿಶೀಲಿಸಿ, ಒಳಬಿಡಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಹೈಕೋರ್ಟ್‌ ನಿರ್ದೇಶನದಂತೆ ರಾಯಚೂರು ಜಿಲ್ಲೆ ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಪ್ರಕರಣಕ್ಕೆ ಸಂಬಂಧ ಭಕ್ತರ ಅಭಿಪ್ರಾಯ ಪಡೆಯಲು ಭಾನುವಾರ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬಿಗಿ ಬಂದೋಬಸ್ತ್‌ ಮಧ್ಯೆ ಜಿಲ್ಲಾಧಿಕಾರಿ ಡಾ.ಸುಶೀಲಾ ನೇತೃತ್ವದಲ್ಲಿ ಸಭೆ ನಡೆಯಿತು.

ಕಲಬುರಗಿ ಪೀಠದ ಉಚ್ಚನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ, ಯಾದಗಿರಿ ಡಿಸಿ ಕಚೇರಿ ಸಭಾಂಗಣದಲ್ಲಿ ಸಭೆ ಜರುಗಿಸಿ ಅಲ್ಲಿ ನಾರದಗಡ್ಡೆ ಮಠದ ಭಕ್ತಾದಿಗಳ ಅಭಿಪ್ರಾಯ ಪಡೆದು, ಮಠದ ಆಸ್ತಿ ನಿರ್ವಹಣೆ ಕುರಿತು ವರದಿ ನೀಡುವಂತೆ ಸೂಚಿಸಲಾಗಿತ್ತು.

ಯಾದಗಿರಿ ಜಿಲ್ಲೆ ಕೊಡೇಕಲ್ ಮಠದ ಶಿವಕುಮಾರ ಸ್ವಾಮೀಜಿ, ಆಂಧ್ರದ ಉರುವಕೊಂಡ ಮಠದ ಕರಿ ಬಸವರಾಜೇಂದ್ರ ಸ್ವಾಮೀಜಿ ಮಧ್ಯೆ ಈ ವಿವಾದವಿದ್ದು, ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ‌ ನೂರಾರು ಎಕರೆ ಆಸ್ತಿ ಹೊಂದಿರುವ ಮಠ ಇದಾಗಿದೆ. ಸಭೆಯಲ್ಲಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆ 2 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು.ಈ ಮಧ್ಯೆ, ಅಭಿಪ್ರಾಯ ಸಂಗ್ರಹ ಸಭೆ ಬಹಿಷ್ಕರಿಸಿದ ರಾಯಚೂರಿನ ಭಕ್ತರು, ನಾರದಗಡ್ಡೆ ಮಠ ರಾಯಚೂರಿನಲ್ಲಿದೆ. ಯಾದಗಿರಿ ಬದಲು ರಾಯಚೂರಿನಲ್ಲೇ ಅಭಿಪ್ರಾಯ ಸಂಗ್ರಹ ಸಭೆ ನಡೆಸುವಂತೆ ಯಾದಗಿರಿ ಜಿಲ್ಲಾಧಿಕಾರಿ ‌ಮೂಲಕ ಉಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಆಂಧ್ರದ ಉರುವಕೊಂಡ ಮಠದ ಕರಿ ಬಸವರಾಜೇಂದ್ರ ಸ್ವಾಮೀಜಿ ಭಕ್ತರು ಸಭೆಗೆ ಬಹಿಷ್ಕಾರ ಹಾಕಿದರು. ರಾಜಕೀಯ ಪ್ರಭಾವ ಬಳಸಿ ಯಾದಗಿರಿಯಲ್ಲಿ ಸಭೆ ಇಟ್ಟಿದ್ದಾರೆಂದು ಭಕ್ತರು ಕೊಡೇಕಲ್ ಮಠದ ಶಿವಕುಮಾರ ಸ್ವಾಮೀಜಿ ಮೇಲೆ ಆರೋಪ ಮಾಡಿದರು.

ಏನಿದು ನಾರದಗಡ್ಡೆ ಮಠದ ವಿವಾದ: ನಾರದಗಡ್ಡೆ ಮಠ ರಾಯಚೂರಿಂದ 30ಕಿಮೀ ದೂರದಲ್ಲಿದೆ. ಸುಮಾರು 300 ವರ್ಷ ಹಿಂದೆ ಈ ಮಠದ ಶ್ರೀ ಗಳಾದ ಶ್ರೀ ಚೆನ್ನಬಸವ ಮಹಾಸ್ವಾಮಿಗಳು ಇಲ್ಲಿಯೇ ತಪಸ್ಸು ಮಾಡಿ ಜೀವ ಸಮಾಧಿಯಾಗಿದ್ದರು. ನಾರದರು ಇಲ್ಲಿ ತಪಸ್ಸು ಮಾಡಿದ್ದರು ಎಂಬ ಪುರಾಣದ ಐತಿಹ್ಯದಿಂದ ಈ ಕ್ಷೇತ್ರಕ್ಕೆ ನಾರದಗಡ್ಡೆ ಎಂದು ನಾಮಕಾರಣ ಮಾಡಲಾಗಿದೆ. ರಾಯಚೂರು ತಾಲೂಕಿನ ಗ್ರಾಮಗಳಾದ ಬೂರ್ದಿಪಾಡ, ಪೂರತಿಜ್ಞೆ, ಸರ್ಜಾಪೂರ, ಅತ್ತೂರು, ಯಾಪಲದಿನ್ನಿ, ಗಾಜರಾಳ, ಡಿ.ರಾಂಪೂರು, ವಡ್ಡೆಪಲ್ಲ, ಅಪ್ಪನದೊಡ್ಡಿ, ರಾಳದೊಡ್ಡಿ, ಚಂದ್ರಬಂಡಾ, ಅರಸಿಗೇರಾ, ನಾಗನದೊಡ್ಡಿ ಮುಂತಾದ ಗ್ರಾಮಗಳು, ಅದೇ ತೆರನಾಗಿ ತೆಲಂಗಾಣದ ನೆಟ್ಟಂಪಾಡು, ನಾಗರದೊಡ್ಡಿ, ದ್ಯಾಗದೊಡ್ಡಿ, ಉಪ್ಪೇರು, ಗಾರಲಪಾಡು, ಮುಸುಲಾಯಪಲ್ಲೆ, ಅನುಗೊಂಡಾ, ಪಾರವುಲಾ ಮುಂತಾದ ಗ್ರಾಮಗಳ ಸಾವಿರಾರು ಜನರು ಮಠದ ಭಕ್ತರು. ಸುಮಾರು 1200 ಕೋಟಿ ರು. ಆಸ್ತಿ ಮಠ ಹೊಂದಿದೆ ಎನ್ನಲಾಗಿದೆ.

ಆದರೆ, ಕೊಡೇಕಲ್‌ನ ಶಿವಕುಮಾರ ಸ್ವಾಮೀಜಿ ಈ ಮಠಕ್ಕೆ ತಾವು ಪೀಠಾಧಿಪತಿ ಎಂದು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆಂದು ಅರೋಪಿಸಿರುವ ಉರುವಕೊಂಡ ಮಠದ ಕರಿಬಸವರಾಜ ಸ್ವಾಮೀಜಿ ಭಕ್ತರು, ಶಾಖಾ ಮಠವಾದ ತಮ್ಮೂರ ಮಠಕ್ಕೆ ಇದರ ನಿರ್ವಹಣೆ ನೀಡಬೇಕೆಂದು ನ್ಯಾಯಾಲಯ ಮೊರೆ ಹೋಗಿದ್ದಾರೆ. ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆದಿತ್ತಾದರೂ, ಅಲ್ಲಿ ಕೆಲವರ ಪ್ರವೇಶಕ್ಕೆ ನಿರಾಕರಿಸಲಾಗಿತ್ತು ಎಂದು ಹೈಕೋರ್ಟಿಗೆ ಭಕ್ತರು ಮೊರೆ ಹೋಗಿದ್ದರಿಂದ ಯಾದಗಿರಿ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಸಭೆ ನಡೆಸುವಂತೆ ಹೈಕೋರ್ಟ್‌ ಸೂಚನೆ ನೀಡಿತ್ತು. ಪ್ರಸ್ತುತ ತಹಸೀಲ್ದಾರರು ಮಠದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಬಿಗಿ ಭದ್ರತೆ ಮುಂಜಾಗ್ರತೆಗಾಗಿ ಯಾದಗಿರಿ ಜಿಲ್ಲಾಡಳಿತ ಭವನದ ಎದುರು ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಮೆಟಲ್ ಡಿಟೆಕ್ಟರ್ ‌ಮೂಲಕ ತಪಾಸಣೆ ಮಾಡಿ‌ ಭಕ್ತರನ್ನು ಪೊಲೀಸರು ಒಳ ಬಿಟ್ಟರು. ಮೂವರು ಡಿವೈಎಸ್‌ಪಿ, 10 ಜನ ಸಿಪಿಐ, 20 ಪಿಎಸ್ಐ ಸೇರಿದಂತೆ 4 ಡಿಎಆರ್, 1 ಕೆಎಸ್ಆರ್‌ಪಿ ತುಕಡಿ ಸೇರಿ 300ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿತ್ತು.

Share this article