ನರೇಗಾ ಯೋಜನೆಯಲ್ಲಿ ನರಗುಂದ ಮುಂಚೂಣಿಯಲ್ಲಿ

KannadaprabhaNewsNetwork | Published : May 16, 2025 1:59 AM
Follow Us

ಸಾರಾಂಶ

ನರಗುಂದ ತಾಲೂಕಿನಲ್ಲಿ ದುಡಿಯೋಣ ಬಾ ಅಭಿಯಾನ ಯಶಸ್ವಿಯಾಗಿದೆ. ತಾಲೂಕಿನಲ್ಲಿ ನರೇಗಾ ಯೋಜನೆಯಡಿ 9343 ಕೂಲಿಕಾರರು ಕೆಲಸ ಮಾಡುತ್ತಿದ್ದು, ಗದಗ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ.

ನರಗುಂದ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯವಾಗಿ ಕೂಲಿಕಾರರಿಗೆ ಕೆಲಸ ನೀಡುವ ಮೂಲಕ ಪ್ರಸ್ತುತ ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು ಕೂಲಿಕಾರರಿಗೆ ಕೆಲಸ ನೀಡಿರುವ ಹೆಗ್ಗಳಿಗೆ ತಾಲೂಕಿನ ಗ್ರಾಪಂ ಮತ್ತು ತಾಪಂಗೆ ಸಲ್ಲುತ್ತದೆ.

ತಾಲೂಕಿನ 13 ಗ್ರಾಪಂಗಳಲ್ಲಿ ಏ. 15ರಿಂದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಕೆಲಸ ಪ್ರಾರಂಭಿಸಿ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಏಪ್ರಿಲ್‌ ತಿಂಗಳಲ್ಲಿ ಮೊದಲ ವಾರದಿಂದಲೇ ಹಳ್ಳಿಗಳಲ್ಲಿ ಕಾಮಗಾರಿ ಪ್ರಾರಂಭಿಸಿ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದೆ. ಸದ್ಯ ತಾಲೂಕಿನಲ್ಲಿ ಮೇ 7 ವರದಿ ಪ್ರಕಾರ 9343 ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಅತಿ ಹೆಚ್ಚು ಕೂಲಿಕಾರರು ಕೆಲಸದಲ್ಲಿ ತೊಡಗಿದ್ದಾರೆ.

ದುಡಿಯೋಣ ಬಾ ಅಭಿಯಾನ: ತಾಲೂಕಿನಲ್ಲಿ ಕೂಲಿಕಾರರಿಗೆ ಕೆಲಸ ನೀಡಬೇಕು ಎನ್ನುವ ಉದ್ದೇಶದಿಂದ ಗ್ರಾಪಂ ಸದಸ್ಯರು, ತಾಂತ್ರಿಕ ಸಹಾಯಕರು, ಬಿಎಫ್‌ಟಿ, ಜಿಕೆಎಂ, ಕಾಯಕ ಬಂಧುಗಗಳಿಗೆ ತಾಲೂಕು ಮಟ್ಟದ ಕಾರ್ಯಾಗಾರ ನಡೆಸಲಾಯಿತು. ಆನಂತರ ಪ್ರತಿ ಗ್ರಾಪಂಗಳಲ್ಲಿ ಪಿಡಿಒ, ಆಡಳಿತ ಮಂಡಳಿಯ ಸದಸ್ಯರು, ಕಾಯಕ ಬಂಧುಗಳು ಸಭೆ ನಡೆಸಿ ಪ್ರತಿ ಗ್ರಾಮಗಳಲ್ಲಿ ಪಂಚಾಯಿತಿಯ ಸ್ವಚ್ಛವಾಹಿನಿ ಮೂಲಕ ನರೇಗಾ ಕೆಲಸ ಪ್ರಾರಂಭಿಸುವ ಕುರಿತು, ವಲಸೆ ಹೋಗದೆ ಉದ್ಯೋಗ ಖಾತ್ರಿ ಕೆಲಸಕ್ಕೆ ಬರುವಂತೆ ಆಡಿಯೋ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಪ್ರತಿ ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭವಾಗಿದೆ. ತಾಲೂಕಿನಲ್ಲಿ ದುಡಿಯೋಣ ಬಾ ಅಭಿಯಾನ ಯಶಸ್ವಿಯಾಗಿದೆ.ತಾಲೂಕಿನಲ್ಲಿ ಕೊಣ್ಣೂರು ಗ್ರಾಪಂ-1098, ಹದಲಿ- 1130, ಹುನಸಿಕಟ್ಟಿ–956, ಹಿರೇಕೊಪ್ಪ–976, ಬೈರನಹಟ್ಟಿ– 825, ಶಿರೋಳ-809, ಬನಹಟ್ಟಿ-732, ಸುರಕೋಡ-786, ವಾಸನ – 739 , ಬೆನಕನಕೊಪ್ಪ- 480, ಚಿಕ್ಕನರಗುಂದ -373, ಕನಕಿಕೊಪ್ಪ – 277, ರಡ್ಡೇರನಾಗನೂರು-162 ಸೇರಿ ಒಟ್ಟು 9343 ಕೂಲಿಕಾರರು ಕೆಲಸಕ್ಕೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.

ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಕೂಲಿಕಾರರು ವಲಸೆ ಹೋಗದಂತೆ ತಡೆಗಟ್ಟಲು ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ ನರಗುಂದ ತಾಪಂ ಅತಿ ಹೆಚ್ಚು 9343 ಕೂಲಿಕಾರರು ಉದ್ಯೋಗ ಖಾತ್ರಿ ಕೆಲಸಕ್ಕೆ ಬರುತ್ತಿದ್ದಾರೆ. ಮಳೆ ಬರುವವರೆಗೂ ನಿರಂತರ ಕೆಲಸ ನೀಡಲಾಗುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.ನರೇಗಾ ಯೋಜನೆಯಡಿ ಏಪ್ರಿಲ್ ಮತ್ತು ಮೇ ಎರಡು ತಿಂಗಳ ನಿರಂತರ ಕೆಲಸ ನೀಡುವ ಉದ್ದೇಶದಿಂದ ಕೂಲಿಕಾರರಿಗೆ ಸಾಮೂಹಿಕ ಕಾಮಗಾರಿ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ 7ರಿಂದ 8 ಸಾವಿರ ಕೂಲಿಕಾರರು ಕೆಲಸಕ್ಕೆ ಬರುತ್ತಿದ್ದರು. ಈ ವರ್ಷ 10 ಸಾವಿರ ಕೂಲಿಕಾರರು ಕೆಲಸಕ್ಕೆ ಕರೆತರುವ ಗುರಿ ಹಾಕಿಕೊಂಡಿದ್ದೇವು ಎಂದು ಸಹಾಯಕ ನಿರ್ದೇಶಕ (ಗ್ರಾಮ) ಸಂತೋಷಕುಮಾರ ಪಾಟೀಲ ಹೇಳಿದರು.