ನರಗುಂದ ಬಂಡಾಯ- ದೆಹಲಿ ಹೋರಾಟ ನೆನಪಿಸಿದ ಕಬ್ಬಿನ ಕಿಚ್ಚು!

KannadaprabhaNewsNetwork |  
Published : Oct 15, 2026, 02:15 AM IST
ಕಬ್ಬು ಬೆಳೆಗಾರರು ಹುಬ್ಬಳ್ಳಿ ಹೊರವಲಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಟೋಲ್‌ಗೇಟ್‌ಗಳಲ್ಲಿ ಕಳೆದೆರಡು ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟದಿಂದ ಬರೀ ಸಂಚಾರ ವ್ಯವಸ್ಥೆ ಮಾತ್ರವಲ್ಲದೆ ಜನಜೀವನ ಮೇಲೂ ಪರಿಣಾಮ ಬೀರುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಟೋಲ್‌ಗೇಟ್‌ಗಳಲ್ಲಿ ಕಳೆದೆರಡು ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟದಿಂದ ಬರೀ ಸಂಚಾರ ವ್ಯವಸ್ಥೆ ಮಾತ್ರವಲ್ಲದೆ ಜನಜೀವನ ಮೇಲೂ ಪರಿಣಾಮ ಬೀರುತ್ತಿದೆ. ಈ ಹೋರಾಟ ಇದೀಗ 1980ರಲ್ಲಿ ನಡೆದ ನರಗುಂದ ರೈತ ಬಂಡಾಯ, 2020-2024ರಲ್ಲಿ ದೆಹಲಿ ನಡೆದ ಹೋರಾಟವನ್ನು ನೆನಪಿಸುತ್ತಿದೆ.

ಮಲಪ್ರಭಾ ನದಿಗೆ ಜಲಾಶಯ ನಿರ್ಮಿಸಿ ಅದಕ್ಕೆ ಅಭಿವೃದ್ಧಿ ಕರ (ಜಲತೆರಿಗೆ)ವನ್ನು ಸರ್ಕಾರ ವಿಧಿಸಿತ್ತು. ಯಾರೂ ತೆರಿಗೆ ಪಾವತಿಸುವುದಿಲ್ಲವೋ ಅವರ ಜಮೀನಿನ ಪಹಣಿಯಲ್ಲಿ "ಸರ್ಕಾರಿ " ಎಂದು ನಮೂದಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ನರಗುಂದ ಹಾಗೂ ನವಲಗುಂದ ರೈತರು ಸರ್ಕಾರದ ವಿರುದ್ಧ ಬೃಹತ್‌ ಹೋರಾಟ ನಡೆಸಿದ್ದರು. ಈ ವೇಳೆ ಗೋಲಿಬಾರ ನಡೆದು ಇಬ್ಬರು ರೈತರು, ಕೆಲ ಪೊಲೀಸರು ಹುತಾತ್ಮರಾಗಿದ್ದರು. ಅದೇ ನೆನಪಲ್ಲಿ ಪ್ರತಿವರ್ಷ ಜು. 21ರಂದು ಉತ್ತರ ಕರ್ನಾಟಕದಲ್ಲಿ ರೈತ ಹುತಾತ್ಮ ದಿನ ಆಚರಿಸಲಾಗುತ್ತಿದೆ. ಆಗ ನಡೆದಿದ್ದ ಹೋರಾಟವು ಮುಂದೆ ಬಂದ ಚುನಾವಣೆಯಲ್ಲಿ ಸರ್ಕಾರವನ್ನೇ ಬದಲಿಸುವಲ್ಲಿ ಯಶಸ್ವಿಯಾಗಿತ್ತು. ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ರೈತರ ಮೊದಲ ಹೋರಾಟ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

2020ರ ದೆಹಲಿ ಹೋರಾಟ:

ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿದ್ದ ಕೃಷಿ ಕಾಯ್ದೆ ವಿರೋಧಿಸಿ 2020ರಿಂದ 2021ರ ವರೆಗೆ ದೆಹಲಿಯಲ್ಲಿ 379 ದಿನ ಗಳ ಹೋರಾಟ ನಡೆದ ಪರಿಣಾಮ ಸರ್ಕಾರ ಕಾಯ್ದೆ ಹಿಂಪಡೆಯಿತು. ಬಳಿಕ ಇದೇ ಎಂಎಸ್‌ಪಿಗಾಗಿ 2024ರಲ್ಲಿ ಮತ್ತೆ ದೆಹಲಿಯಲ್ಲೇ 500 ದಿನಗಳಿಗೂ ಹೆಚ್ಚು ಕಾಲ ಹೋರಾಟ ನಡೆದಿತ್ತು. ಅನ್ಯ ರಾಜ್ಯದ ವಿವಿಧೆಡೆ ಬಂಧಿಸುವ ಮೂಲಕ ಹೋರಾಟದ ತೀವ್ರತೆ ತಡೆಯುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿತ್ತು.

ಕಬ್ಬಿನ ಕಿಚ್ಚು:

ಕಬ್ಬಿಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕಾಗಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ರೈತ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ದೆಹಲಿಯಲ್ಲಿ ನಡೆದ ಸಭೆ ವಿಫಲವಾದ ಹಿನ್ನೆಲೆ ಅ.13ರಿಂದ 13 ಜಿಲ್ಲೆಗಳ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ ಟೋಲ್‌ಗೆಟ್‌ ಬಂದ್ ಮಾಡಿ ಪ್ರತಿಭಟಿಸಲಾಗುತ್ತಿದೆ.

ರೈತರು ನೀಡಿದ್ದ ಗಡುವಿಗೆ ಕೇಂದ್ರ ಸರ್ಕಾರ ಸ್ಪಂದಿಸದೆ ಇರುವುದರಿಂದ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ಇದೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುವ ವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತರು ಹಾಗೂ ರೈತರು ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಅಹೋರಾತ್ರಿ ಧರಣಿ ಆರಂಭಿಸಿರುವ ಅವರು ರಸ್ತೆಯ ಬದಿಯೇ ಅಡುಗೆ ಸಿದ್ಧಪಡಿಸಿ ಊಟ ಮಾಡುತ್ತಿದ್ದಾರೆ. ಜತೆಗೆ ಭಜನೆ ಹಾಡುತ್ತಾ ಕಾಲ ಕಳೆಯುತ್ತಿರುವ ರೈತ ಸಮುದಾಯ, ತಮ್ಮದೇ ಬಗೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಒಟ್ಟಿನಲ್ಲಿ 1980ರ ರೈತ ಬಂಡಾಯ, 2020-21 ಹಾಗೂ 2024-25ರ ದೆಹಲಿ ಹೋರಾಟವನ್ನು ಟೋಲ್‌ಗೇಟ್‌ ಹೋರಾಟ ನೆನಪಿಸುತ್ತಿರುವುದರ ಜತೆಗೆ ಇದು ಕೂಡ ಇತಿಹಾಸ ಸೃಷ್ಟಿಸುತ್ತಿದೆ ಎಂಬ ಮಾತು ರೈತ ಮುಖಂಡರದ್ದು.

ಮಹದಾಯಿ ಕಿಚ್ಚು!

ಈ ಎಲ್ಲದರ ನಡುವೆ ಮಹದಾಯಿ ಕಿಚ್ಚಿಗೂ 11 ವರ್ಷ ಪೂರ್ಣವಾಗಿದ್ದು ಸದ್ಯ ಶಾಂತ ರೀತಿಯಲ್ಲಿ ಹೋರಾಟ ನಡೆಯುತ್ತಿದೆ. ಆದರೆ, ಈ ವರೆಗೂ ಕೇಂದ್ರದಿಂದ ಅನುಮತಿ ಸಿಗುತ್ತಿಲ್ಲ; ನೀರು ಬರುತ್ತಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಜನಾದ್ರಿ ದೇಗುಲದಿಂದ ಸಿಬ್ಬಂದಿ ಹೊರಗೆ ಹಾಕಿದ ವಿದ್ಯಾದಾಸ ಬಾಬಾ
ವರ್ತುಲ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ