ಸೊರಬ: ಸಮಾಜದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗಿ ತಳ ಸಮುದಾಯಗಳ ಮೇಲೆ ನಿರಂತರ ಶೋಷಣೆ ದಬ್ಬಾಳಿಕೆ ನಡೆಯುತ್ತಿದ್ದಾಗ ಸಮಾನತೆಯ ಸಂದೇಶವನ್ನು ಸಾರಿದ ಮಹಾನುಭಾವ ಬ್ರಹ್ಮ ಶ್ರೀ ನಾರಾಯಣ ಗುರುಗಳು ಎಂದು ಉಪನ್ಯಾಸಕ ರವಿ ಕಲ್ಲಂಬಿ ಹೇಳಿದರು.
ಬಡವರ, ದೀನ ದಲಿತರ, ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದ ಮಹಾನ್ ಚಿಂತಕ ನಾರಾಯಣ ಗುರುಗಳು. ಸಮಾಜದಲ್ಲಿ ತೊಳಲಾಡುತ್ತಿದ್ದ ಮೂಢನಂಬಿಕೆ, ಅಂಧಾನುಕರಣೆ, ಜಾತಿಪದ್ಧತಿ, ಮಡಿವಂತಿಕೆ ವಿರುದ್ಧ ರಕ್ತ ರಹಿತ ಕ್ರಾಂತಿ ಮಾಡಿ ಸಮಾನತೆಯ ಸಮಾಜ ಕಟ್ಟಲು ಅವರ ಹೋರಾಟ ಎಂದಿಗೂ ಸ್ಮರಣೀಯವಾಗಿದೆ. ಮಹಾತ್ಮ ಗಾಂಧೀಜಿಯವರ ದಲಿತೋದ್ಧಾರ ಚಳುವಳಿ ಮತ್ತು ಆಚಾರ್ಯ ವಿನೋಬಾ ಭಾವೆಯವರ ಹೋರಾಟಕ್ಕೆ ಮೂಲ ಪ್ರೇರಣೆ ನಾರಾಯಣ ಗುರುಗಳಾಗಿದ್ದರು ಎಂದ ಅವರು, ಜನರಿಗೆ ಧಾರ್ಮಿಕ ಆಲೋಚನೆ, ಸ್ವಾತಂತ್ರ್ಯ, ನಿರ್ಲಕ್ಷ್ಯಕ್ಕೆ ಒಳಪಟ್ಟ ಕಾಲದಲ್ಲಿ ಧಾರ್ಮಿಕ ಸ್ವಾತಂತ್ರ್ಯ ತಂದು ಕೊಟ್ಟ ಮಹಾನ್ ದಾರ್ಶನಿಕರಾಗಿದ್ದರು ಹಾಗೂ ನಾರಾಯಣ ಗುರುಗಳ ಜೀವನ ಮತ್ತು ಹೋರಾಟದ ಚಿಂತನೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಸಾಮಾಜಿಕ ಚಿಂತಕ ರಾಜಪ್ಪ ಮಾಸ್ಟರ್ ಮಾತನಾಡಿ, ನಾರಾಯಣ ಗುರುಗಳ ಚಿಂತನೆಗಳು ಸಮಾಜದಲ್ಲಿನ ಹಿಂದುಳಿದ ಶೋಷಿತರ ಶ್ರೇಯಾಭಿವೃದ್ಧಿಗೆ ಹಾಗೂ ಸಮ ಸಮಾಜದ ನಿರ್ಮಾಣಕ್ಕೆ ಸಾರ್ವಕಾಲಿಕ ಸತ್ಯಗಳಾಗಿದ್ದು, ಅವರನ್ನು ಯಾವುದೇ ಜಾತಿ ಮತ್ತು ಸಮುದಾಯಗಳಿಗೆ ಸೀಮಿತಗೊಳಿಸಬಾರದು ಎಂದರು.ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆಸುವ ಜಾತಿ ಸಮೀಕ್ಷೆಯಲ್ಲಿ ಮಲೆನಾಡಿನ ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ತಾಲೂಕಿನ ದೀವರ ಸಮುದಾಯದವರು ಜಿಲ್ಲಾ ಸಂಘದ ತೀರ್ಮಾನದಂತೆ ದೀವರು ಜಾತಿಯನ್ನು ನಮೂದಿಸುವಂತೆ ಮನವಿ ಮಾಡಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅರ್ಯ ಈಡಿಗ ಸಂಘದ ಅಧ್ಯಕ್ಷ ಎಚ್.ಗಣಪತಿ ವಹಿಸಿದ್ದರು.