ಭಟ್ಕಳ: ದೇವಸ್ಥಾನದಲ್ಲಿ ಸಮಾನತೆ ತರಲು ಸಾಕಷ್ಟು ಶ್ರಮಿಸಿದ ನಾರಾಯಣ ಗುರುಗಳ ಆದರ್ಶವನ್ನು ಪಾಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ಸಿನ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ ತಿಳಿಸಿದರು.
ಕೇರಳ ಸೇರಿದಂತೆ ವಿವಿಧ ಕಡೆ ಅನೇಕ ದೇವಸ್ಥಾನ ನಿರ್ಮಿಸಿ ದುರ್ಬಲ ವರ್ಗದವರು ಮತ್ತು ಹಿಂದುಳಿದ ವರ್ಗದ ಜನರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಮಾಡಿಕೊಡುವುದರ ಮೂಲಕ ಅವರು ಎಲ್ಲರಲ್ಲೂ ಭ್ರಾತೃತ್ವ, ಸಹೋದರತೆ, ಭಾವೈಕ್ಯತೆ, ಬಾಂಧವ್ಯ ಬೆಸೆಯಲು ಪಣ ತೊಟ್ಟಿದ್ದರು. ನಾರಾಯಣ ಗುರುಗಳು ಒಂದೇ ಜಾತಿ, ಮತ, ಒಬ್ಬನೇ ದೇವರು, ಶಿಕ್ಷಣದಲ್ಲಿ ಸ್ವತಂತ್ರರಾಗಿ ಮತ್ತು ಸಂಘಟನೆಯನ್ನು ಬಲಿಷ್ಠರಾಗಿ ಎನ್ನುವ ಧ್ಯೇಯಮಂತ್ರದೊಂದಿಗೆ ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಇಂತಹ ಮಹನೀಯರ ಆದರ್ಶವನ್ನು ನಾವೆಲ್ಲರೂ ಪಾಲಿಸಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಅಸಮಾನತೆ, ಕಂದಾಚಾರ ಹೆಚ್ಚಾದ ಸಂದರ್ಭದಲ್ಲಿ ನಾರಾಯಣ ಗುರುಗಳು ಧ್ವನಿ ಎತ್ತಿ ಶಾಂತಿಯುತವಾಗಿ ಹೋರಾಟ ಮಾಡಿ ಶಿವಗಿರಿಯಲ್ಲಿ ಶಿವನ ಮೂರ್ತಿ ಸ್ಥಾಪಿಸಿ ಎಲ್ಲ ವರ್ಗದವರಿಗೂ ಪೂಜೆ, ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಎಂದರು.ವೇದಿಕೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಅಧ್ಯಕ್ಷ ರವೀಂದ್ರ ನಾಯ್ಕ, ಚಾತುರ್ಮಾಸ್ಯ ಸ್ವಾಗತ ಸಮಿತಿಯ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ, ಸಂಚಾಲಕ ಕೃಷ್ಣಾ ನಾಯ್ಕ ಪ್ರಥ್ವಿ, ಆಸರಕೇರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ, ಮೊಕ್ತೇಸರ ಸುಬ್ರಾಯ ನಾಯ್ಕ, ಅಂಕೋಲಾದ ನಾಮಧಾರಿ ಮುಖಂಡ ಮಂಜುನಾಥ ನಾಯ್ಕ ಇದ್ದರು.
ನಾರಾಯಣ ಗುರು ವೇದಿಕೆಯ ತಾಲೂಕು ಅಧ್ಯಕ್ಷ ಮನಮೋಹನ ನಾಯ್ಕ ಸ್ವಾಗತಿಸಿದರು. ಗಂಗಾಧರ ನಾಯ್ಕ, ನಾರಾಯಣ ನಾಯ್ಕ ನಿರೂಪಿಸಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.