ಶಿರಾಲಿ ಸಾರದಹೊಳೆಯಲ್ಲಿ ನಾರಾಯಣ ಗುರುಗಳ 171ನೇ ಜಯಂತ್ಯುತ್ಸವ ಆಚರಣೆ
ಜತ್ತಿನೆಲ್ಲಡೆ ಧರ್ಮ, ಅಧರ್ಮ, ನ್ಯಾಯ ಹಾಗೂ ಅನ್ಯಾಯದ ವಿರುದ್ದ ಹೋರಾಟ ನಡೆಯುತ್ತಿದೆ. ಅವೆಲ್ಲವನ್ನು ಕೊನೆಗಾಣಿಸಲು ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ, ಸಂದೇಶ ಅಳವಡಿಸಿಕೊಂಡರೆ ಈ ಜಗತ್ತು ಶಾಂತಿಯುತವಾಗಿ ಬದುಕಬಹುದಾಗಿದೆ ಎಂದು ರಾಜ್ಯ ನಾರಾಯಣ ಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ಶಿರಾಲಿಯ ಸಾರದಹೊಳೆಯ ಹಳೇಕೋಟೆ ಹನುಮಂತ ದೇವಸ್ಥಾನದ ಸಭಾಭವನದಲ್ಲಿ ಏರ್ಪಡಿಸಲಾದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತ್ಯುತ್ಸವದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.ನಾರಾಯಣಗುರುಗಳು ಮನುಷ್ಯತ್ವದ ದೇವಮಾನವರಾಗಿ, ಜಗತ್ತಿಗೆ ಶಾಂತಿ ಮಂತ್ರ ನೀಡಿದವರು. ಹಿಂದೂ ಧರ್ಮವು ವಿವಿಧ ಜಾತಿಯ ಹೆಸರಿನಲ್ಲಿ ಹಂಚಿಹೋಗಿದ್ದ ಕಾಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ ಒಂದೇ ಧರ್ಮ, ಒಂದೇ ಕುಲ ಎಂಬ ಸಂದೇಶದೊಂದಿಗೆ ಸಮಾಜದಲ್ಲಿ ಜಾತಿ ಪದ್ಧತಿ ವಿರೋಧಿಸಿ ಮಾನವ ಜಾತಿಯ ಒಂದೇ ಎಂದು ಸಾರಿದರು. ಗುರುಗಳ ಸಂದೇಶದಂತೆ ಶಿಕ್ಷಣದಿಂದ ಸ್ವಂತ್ರರಾಗಲು ನಾವು ಇಂದು ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ತರೆದು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜಕ್ಕೆ ನೀಡಿದರೆ ಸಮಾಜವು ಬಲಿಷ್ಠ ಸಮಾಜವಾಗುತ್ತದೆ ಎಂದರು.
ಮಾಜಿ ಸಚಿವ ಆರ್.ಎನ್. ನಾಯ್ಕ ಮಾತನಾಡಿ, ನಾರಾಯಣ ಗುರುಗಳ ಒಂದೇ ದೇವರು, ಒಂದೇ ಧರ್ಮ ಎಂಬಂತೆ ನಾವೆಲ್ಲರೂ ನಮ್ಮ ಮೂಲ ದೇವರಿಗೆ ಮೊದಲು ನಡೆದುಕೊಳ್ಳಬೇಕು. ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬೇಕು. ಬೇರೆಯವರಿಂದ ನಮ್ಮ ವ್ಯಕ್ತಿತ್ವ ಬದಲಾಯಿಸಲು ಸಾಧ್ಯವಿಲ್ಲ ಎಂದರರ‍್ಲದೇ, ಹಿಂದುಳಿದ ಸಮಾಜದವರಾದ ನಾವು ನಮ್ಮ ಮೂಲ ಧರ್ಮ, ತತ್ವವನ್ನು ಅರಿತು ನಮ್ಮ ಪೂರ್ವಜ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.
ಸಾಮಾಜಿಕ ಪರಿವರ್ತನೆಯಲ್ಲಿ ಶ್ರೀ ನಾರಾಯಣ ಗುರಗಳ ಕೊಡುಗೆ ಎಂಬ ವಿಷಯದ ಬಗ್ಗೆ ಪಿಯು ವಿದ್ಯಾರ್ಥಿಗಳಿಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಹಣ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.